ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ
ಶರಣಾಗತಿಯಾಗುವ ವೇಳೆಯಲ್ಲಿ, ಯಾರೊಬ್ಬರು ಎಂಪೆರುಮಾನರ ದಿವ್ಯ ಕಲ್ಯಾಣ ಗುಣಗಳನ್ನು ಅರಿತುಕೊಂಡು ಅವುಗಳಿಗೆ ಮಹತ್ವವನ್ನು ಕೊಡಬೇಕು. ಹಾಗೆಯೇ, ತಮಗೆ ಯಾರ ಆಶ್ರಯವಿಲ್ಲದೇ, ಬೇರೆ ಯಾವುದೇ ಉಪಾಯವಿಲ್ಲದೇ, ಎಂಪೆರುಮಾನರ ದಿವ್ಯ ಪಾದಕಮಲಗಳಲ್ಲಿ ಶರಣಾಗತಿ ಹೊಂದಬೇಕು – ಪಿರಾಟ್ಟಿಯ ಶಿಫಾರಸ್ಸಿನೊಂದಿಗೆ(ಪುರುಷಕಾರಮ್) . ಅಂತಹ ಒಂದು ಸರಿಯಾದ ಕಟ್ಟುನಿಟ್ಟುಗಳೊಂದಿಗೆ ಆಳ್ವಾರರು ತಿರುವೇಂಗಡಮುಡೈಯಾನರ ಹತ್ತಿರ ಬಹು ಸುಂದರವಾಗಿ ಈ ಪದಿಗೆಯಲ್ಲಿ ಶರಣಾಗತಿಯನ್ನು ಆಚರಿಸುತ್ತಾರೆ.
ಮೊದಲನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ “ ತಿರುಮಲದಲ್ಲಿ ವಾಸವಾಗಿರುವ , ಇಡೀ ಲೋಕವನ್ನು ರಕ್ಷಿಸುವ ಗುಣವನ್ನು ಹೊಂದಿರುವ ನೀನು , ಕರುಣೆಯಿಂದ ನಿನ್ನನ್ನು ಹೊಂದುವ ದಾರಿಯನ್ನು ಸಹಜವಾದ ಸೇವಕತ್ವವನ್ನು ಹೊಂದಿರುವ ನನಗೆ ತೋರಿಸು. “
ಉಲಗಮ್ ಉಣ್ಡ ಪೆರುವಾಯಾ ಉಲಪ್ಪಿಲ್ ಕೀರ್ತ್ತಿ ಅಮ್ಮಾನೇ,
ನಿಲವುಮ್ ಶುಡರ್ ಶೂೞ್ ಒಳಿ ಮೂರ್ತ್ತಿ ನೆಡಿಯಾಯ್ ಅಡಿಯೇನ್ ಆರುಯಿರೇ,
ತಿಲದಮುಲಗುಕ್ಕಾಯ್ ನಿನ್‍ಱ ತಿರುವೇಂಗಡತ್ತೆಮ್ಬೆರುಮಾನೇ,
ಕುಲತೊಲ್ ಅಡಿಯೇನ್ ಉನ ಪಾದಮ್ ಕೂಡು ಮಾಱು ಕೂಱಾಯೇ ।।
ಓಹ್! ಲೋಕವನ್ನೆಲ್ಲಾ ಕಾತುರದಿಂದ ರಕ್ಷಿಸಲು ಹೊಂದಿರುವ ನಿನ್ನ ಬಾಯಿ/ ತುಟಿಗಳು ಇಡೀ ಭೂಮಂಡಲವನ್ನು ನುಂಗಿ (ಪ್ರಳಯ ಕಾಲದಲ್ಲಿ ) ಅದನ್ನು ಕಾಪಾಡಲು ಕಾದಿವೆ. ಓಹ್! ಕೊನೆಯಿಲ್ಲದ ಪ್ರಸಿದ್ಧತೆಯನ್ನು ಮತ್ತು ಸಹಜವಾದ ನಾಯಕತ್ವವನ್ನು ಹೊಂದಿರುವವನೇ! ಓಹ್! ದಿವ್ಯರೂಪದೊಂದಿಗೆ ದಿವ್ಯ ಅದ್ಭುತಗಳಿಂದ ತುಂಬಿರುವವನೇ! ನಿನ್ನ ಸಹಜವಾದ ಕಾಂತಿಯನ್ನೂ, ತೇಜಸ್ಸನ್ನೂ ತೋರಿಸುತ್ತಿರುವವನೇ! ಓಹ್! ನನ್ನ ಪ್ರಾಣವಾಯುವಾದವನೇ (ಜೀವವಾಗಿರುವವನೇ) ಓಹ್! ತನ್ನ ಹಣೆಯ ಮೇಲೆ ಊರ್ಧ್ವಪುಣ್ಡ್ರಮ್ (ನೇರವಾಗಿರುವ ತಿಲಕ ) ಧರಿಸಿ ಜಗತ್ತಿಗೆಲ್ಲಾ ನಾಯಕತ್ವವನ್ನು ಸಾಧಿಸಿ, ತಿರುಮಲದಲ್ಲಿ ನಿಂತಿರುವವನೇ! ನನಗೆ ವಂಶಯುಕ್ತವಾಗಿ ಬಂದಿರುವ ಸೇವಕತ್ವವನ್ನು ಸಾಧಿಸಲು ನಿನ್ನ ದಿವ್ಯ ಪಾದಕಮಲಗಳನ್ನು ಸೇರಲು ಮಾಧ್ಯಮವನ್ನು ತೋರಿಸು. ಎಂದು ಆಳ್ವಾರರು ಹಾಡುತ್ತಾರೆ.
ಎರಡನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ಏನಾದರೂ ತೊಂದರೆ, ಕಷ್ಟಗಳು ಬಂದರೆ ನೀನೇ ಅದನ್ನು ನಿವಾರಿಸಿ, ನನ್ನನ್ನು ನಿನ್ನ ಪಾದಗಳಲ್ಲಿ ಸ್ವೀಕರಿಸಬೇಕು “ ಎಂದು.
ಕೂಱಾಯ್ ನೀಱಾಯ್ ನಿಲನಾಗಿ ಕ್ಕೊಡುವಲ್ ಅಶುರರ್ ಕುಲಮೆಲ್ಲಾಮ್,
ಶೀಱಾ ಎರಿಯುಮ್ ತಿರುನೇಮಿ ವಲವಾ ತೆಯ್‍ವಕ್ಕೋಮಾನೇ,
ಶೇಱಾರ್ ಶುನೈ ತ್ತಾಮರೈ ಶೆನ್ದೀ ಮಲರುಮ್ ತಿರುವೇಙ್ಗಡತ್ತಾನೇ,
ಆಱಾ ಅನ್ಬಿಲ್ ಅಡಿಯೇನ್ ಉನ್ನಡಿ ಶೇರ್ ವಣ್ಣಮ್ ಅರುಳಾಯೇ॥
ಸರ್ವಶಕ್ತನಾದ ಎಂಪೆರುಮಾನರು, ದಿವ್ಯ ಹೊಳೆಯುವ ಚಕ್ರವನ್ನೂ ನಿಯಂತ್ರಿಸಿ, ಅದರಿಂದ ಕ್ರೂರಿಗಳಾದ ಮತ್ತು ಅತೀ ಶಕ್ತಿವಂತರಾದ ರಾಕ್ಷಸರನ್ನು ಚೂರು ಚೂರಾಗಿ ಕತ್ತರಿಸುವರು. ಅವರನ್ನು ಧೂಳೀಪಟವನ್ನಾಗಿ ಮಾಡುವರು. ಆ ಚಕ್ರವು ಅವರನ್ನು ತುಂಡರಿಸಿದ ಮೇಲೂ ಅವರ ಮೇಲೆ ಕೋಪವನ್ನು ತೋರಿಸುವುದು. ಮತ್ತು ಅತ್ಯಂತ ಸಂಪನ್ನವಾಗಿ ಅನೇಕ ಸಂಪತ್ತನ್ನು ಹೊಂದಿ, ವಿಜಯವನ್ನು ಸಾಧಿಸುವುದು. ಓಹ್! ನಿತ್ಯಸೂರಿಗಳಿಗೆಲ್ಲಾ ಸ್ವಾಮಿಯಾದವನೇ! ಓಹ್! ಕೆಸರಾದ ಹೊಳೆಯಲ್ಲಿ ಅರಳಿದ ಕೆಂಡದಂತೆ ಕೆಂಪಾದ ತಾವರೆ ಹೂಗಳಿಂದ ಕೂಡಿದ ತಿರುಮಲದಲ್ಲಿ ವಾಸವಾಗಿರುವ ಸ್ವಾಮಿಯೇ! ಕರುಣೆಯಿಂದ ನಿನ್ನ ಸೇವಕನಾದ ನನ್ನನ್ನು ಹರಸು, ನಿನ್ನ ಮೇಲೆ ಅಪಾರ ಪ್ರೀತಿಯಿಂದಿರುವ ನನ್ನನ್ನು ನಿನ್ನ ದಿವ್ಯ ಪಾದಗಳಲ್ಲಿ ಸೇರಿಸಿಕೋ. ಎಂದು ಆಳ್ವಾರರು ಹಾಡುತ್ತಾರೆ.
ಮೂರನೆಯ ಪಾಸುರಮ್:
ಎಂಪೆರುಮಾನರು ಹೇಳುತ್ತಾರೆ ,”ನೀನು ಯಾವ ವಿಧವಾದ ಪರಿಶ್ರಮವನ್ನೂ, ಪ್ರಯತ್ನವನ್ನೂ ಮಾಡಲಿಲ್ಲ. ನಾನು ನೀನು ಕೇಳುವುದನ್ನು ಏಕೆ ಮಾಡಬೇಕು?” ಎಂದು. ಆಳ್ವಾರರು ಹೇಳುತ್ತಾರೆ, “ ನಿನ್ನನ್ನು ಆನಂದಿಸಲು ಅನೇಕ ವಿಶಿಷ್ಟ ವ್ಯಕ್ತಿಗಳನ್ನು ಹೊಂದಿರುವೆ. ನೀನೇ ನನಗೂ ನಿನ್ನ ಮೇಲೆ ಆಸೆ ಬರುವಂತೆ ಮಾಡಿರುವೆ. ಹಾಗೆಯೇ ಪೂರ್ಣವಾಗಿ ನಿನ್ನ ಕೃಪೆಯಿಂದಲೇ ನನ್ನ ಆಸೆಯನ್ನು ಪೂರ್ಣಗೊಳಿಸು” ಎಂದು ಹೇಳುತ್ತಾರೆ.
ವಣ್ಣಮರುಳ್ ಕೊಳ್ ಅಣಿ ಮೇಗವಣ್ಣಾ ಮಾಯವಮ್ಮಾನೇ,
ಎಣ್ಣಮ್ ಪುಗುನ್ದು ತಿತ್ತಿಕ್ಕುಮ್ ಅಮುದೇ ಇಮೈಯೋರ್ ಅದಿಪತಿಯೇ,
ತೆಣ್ಣಲರುವಿ ಮಣಿಪೊನ್ ಮುತ್ತಲೈಕ್ಕುಮ್ ತಿರುವೇಙ್ಗಡತ್ತಾನೇ,
ಅಣ್ಣಲ್ ಉನ್ ಅಡಿಶೇರ ಅಡಿಯೇಱ್‍ಕ್ಕು ಆವಾಎನ್ನಾಯೇ॥
ಹುಚ್ಚು ಹಿಡಿಸುವಂತಹ ಘನಮೇಘದ ರೂಪವನ್ನೂ, ಬಣ್ಣವನ್ನೂ, ಅದ್ಭುತವಾದ ಗುಣಗಳನ್ನೂ ಹೊಂದಿರುವ ಎಲ್ಲರಿಗಿಂತಲೂ ಶ್ರೇಷ್ಠನಾಗಿರುವ ಎಂಪೆರುಮಾನರು ನನ್ನ ಹೃದಯದೊಳಗೆ ಆಗಮಿಸಿದ್ದಾರೆ. ಅವರು ಅಮೃತಕ್ಕಿಂತಲೂ ಸಿಹಿಯಾಗಿದ್ದಾರೆ. ಅವರು ನಿತ್ಯಸೂರಿಗಳಿಗೆ ತಮ್ಮ ಈ ರೂಪವನ್ನು ಆನಂದಿಸಲು ಅನುಭವಿಸಲು ಕೊಟ್ಟಿದ್ದಾರೆ. ಸ್ವಚ್ಛವಾದ ತಿಳಿ ನೀರಿನಿಂದ ಕೂಡಿದ ಜಲಪಾತಗಳು , ಮುತ್ತುಗಳ ಅನೇಕ ಅಮೂಲ್ಯ ರತ್ನಗಳ ಮೇಲೆ ಬೀಳುವ ಪ್ರದೇಶವಾಗಿರುವ ತಿರುಮಲದಲ್ಲಿ ನಾಯಕತ್ವವನ್ನು ಮತ್ತು ಆಧಿಪತ್ಯವನ್ನು ಹೊಂದಿರುವ ಎಂಪೆರುಮಾನರೇ! ನಮ್ಮ ಮೇಲೆ ಕನಿಕರಗೊಂಡು ನೀನು ಕರುಣೆಯಿಂದಲಿ ನಿನ್ನ ದಿವ್ಯಪಾದವನ್ನು ಸೇರುವ ವ್ಯವಸ್ಥೆಯನ್ನು ಮಾಡಬೇಕು. ಅದೇ ನಮಗೆ ಸೂಕ್ತವಾದುದು.
ನಾಲ್ಕನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನನ್ನ ಹತ್ತಿರ ಯಾವ ವಿಧವಾದ ದಾರಿಯೂ ನಿನ್ನನ್ನು ಸೇರಲು ತಿಳಿದಿಲ್ಲ. ಆದ್ದರಿಂದ ನೀನೇ ಯಾವುದಾದರೂ ದಾರಿಯನ್ನು ನನಗಾಗಿ ಹುಡುಕಿ , ನನಗೆ ಅದನ್ನು ಕರುಣೆಯಿಂದ ತಿಳಿಸಬೇಕು.” ಮತ್ತೂ ಆಳ್ವಾರರು ವಿವರಿಸುತ್ತಾರೆ. “ನೀನು ಎಲ್ಲರ ತೊಂದರೆಗಳನ್ನು ಯಾವ ಕಟ್ಟುಪಾಡುಗಳೂ ಇಲ್ಲದೇ ನಿವಾರಿಸುವಂತೆ ನಾನೂ ನಿನ್ನ ದಿವ್ಯಪಾದವನ್ನು ಸೇರುವಂತೆ ನೋಡಿಕೊಳ್ಳಬೇಕು.”
ಆವಾವೆನ್ನಾದುಲಗತ್ತೈ ಅಲೈಕ್ಕುಮ್ ಅಶುರರ್ ವಾಣಾಳ್‍ಮೇಲ್,
ತೀವಾಯ್ ವಾಳಿ ಮೞೈ ಪೊೞಿನ್ದ ಶಿಲೈಯಾ ತಿರುಮಾಮಗಳ್ ಕೇಳ್ವಾ ತೇವಾ,
ಸುರರ್ಗಳ್ ಮುನಿಕ್ಕಣಙ್ಗಳ್ ವಿರುಮ್ಬಮ್ ತಿರುವೇಙ್ಗಡತ್ತಾನೇ,
ಪೂವಾರ್ ಕೞಲ್‍ಗಳ್ ಆರು ವಿನೈಯೇನ್ ಪೊಱುನ್ದುಮಾಱು ಪುಣರಾಯೇ॥
ಓಹ್ ಎಂಪೆರುಮಾನರೇ! ಶ್ರೀ ಶಾರ್ಙ್ಗವೆಂಬ ಬಿಲ್ಲನ್ನು ಹಿಡಿದುಕೊಂಡಿರುವಿರಿ. ಅದು ಬೆಂಕಿಯನ್ನು ಉಗುಳುವ ಬಾಣಗಳಿಂದ ಲೋಕಕ್ಕೆ ಸಂಚಕಾರವಾಗಿರುವ ರಾಕ್ಷಸರ ಮೇಲೆ ಕರುಣೆ ಪಡದೆ ಬಾಣಗಳ ಮಳೆಯನ್ನೇ ಸುರಿಸುತ್ತದೆ. ಓಹ್! ನೀನು ಈ ಶತ್ರುಗಳನ್ನು ನಿರ್ಮೂಲನ ಮಾಡಿದ ಮೇಲೆ ಸಂತೋಷಿಸುವ ಲಕ್ಷ್ಮಿಯನ್ನು ಹೊಂದಿರುವೆ , ಅವಳಿಗೆ ತಕ್ಕ ಸುಂದರತೆಯನ್ನೂ, ವೀರವನ್ನೂ ಹೊಂದಿರುವೆ ಮತ್ತು ಅದರಿಂದ ಹೊಳೆಯುತ್ತಿರುವೆ. ಓಹ್! ತಿರುಮಲದಲ್ಲಿ ನೆಲೆಸಿರುವ , ದೇವತೆಗಳಿಂದಲೂ ಮತ್ತು ಋಷಿಗಳಿಂದಲೂ ಪೂಜಿಸಲ್ಪಡುವೆ. ನಾನು ಅನಂತಕೋಟಿ ಪಾಪಗಳನ್ನು ಮಾಡಿರುವೆ ಅವು ನನ್ನನ್ನು ನಿನ್ನ ಬಳಿ ಸೇರಲು ಬಿಡುತ್ತಿಲ್ಲ. ಕರುಣೆಯಿಂದಲಿ ನನಗೆ ನಿನ್ನ ಪಾದಕಮಲಗಳನ್ನು ಸೇರುವ ಮಾರ್ಗವನ್ನು ತೋರಿಸು.
ಐದನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾನು ಯಾವಾಗ ಅಪ್ರಯತ್ನಪೂರ್ವಕವಾಗಿ ಭಕ್ತರನ್ನು ಸಲಹುವ ನಿನ್ನ ದಿವ್ಯ ಪಾದವನ್ನು ಸೇರುತ್ತೇನೆ? “
ಪುಣರಾ ನಿನ್‍ಱ ಮರಮೇೞ್ ಅನ್‍ಱೆಯ್‍ದ ಒರುವಿಲ್ ವಲವಾವೋ,
ಪುಣರ್ ಏಯ್ ನಿನ್‍ಱ ಮರಮಿರಣ್ಡಿನ್ ನಡುವೇ ಪೋನ ಮುದಲ್ವಾವೋ,
ತಿಣರಾರ್ ಮೇಗಮೆನ ಕ್ಕಳಿಱು ಶೇರುಮ್ ತಿರುವೇಙ್ಗಡತ್ತಾನೇ,
ತಿಣರಾರ್ ಶಾರ್ಙ್ಗತ್ತುನಪಾದಮ್ ಶೇರ್ವದು ಅಡಿಯೇನ್ ಎನ್ನಾಳೇ॥
ಎಂಪೆರುಮಾನರು ಅಪ್ರತಿಮ ಬಿಲ್ಲುಗಾರನಾಗಿದ್ದರಿಂದ ಏಳು ಮರಗಳನ್ನು ಒಂದೇ ಸಾರಿ ಹೊಡೆದು ಉರುಳಿಸಿದ್ದರು. ಈ ಭೂಮಂಡಲಕ್ಕೆಲ್ಲಾ ಮೂಲ ಕಾರಣವಾಗಿರುವ ಎಂಪೆರುಮಾನರು ಎರಡು ಮರಗಳ ಮಧ್ಯೆ ಅಂಬೆಗಾಲಿಡುತ್ತ ಹೋಗಿ ಬಲಶಾಲಿಯಾಗಿ, ಒಂದಕ್ಕೊಂದು ಅಂಟಿಕೊಂಡು ನಿಂತಿರುವ ಆ ಎರಡು ಮರಗಳನ್ನು ಉರುಳಿಸಿದರು. ಕಪ್ಪಾದ ದಟ್ಟವಾದ ಮೇಘಗಳಂತೆ ಇರುವ ಆನೆಗಳು ಜೊತೆಯಲ್ಲಿ ವಾಸಿಸುವ ತಿರುಮಲದಲ್ಲಿ ನೀನು ವಾಸವಾಗಿರುವೆ. ನಿನ್ನ ದಾಸನಾಗಿರುವ ನಾನು, ಶ್ರೇಷ್ಠವಾದ ಶ್ರೀ ಶಾರ್ಙ್ಗವನ್ನು ಹಿಡಿದಿರುವ ನಿನ್ನಲ್ಲಿಗೆ ಯಾವಾಗ ತಲುಪುವೆನು?
ಆರನೆಯ ಪಾಸುರಮ್:
ಎಂಪೆರುಮಾನರು ಕೇಳುತ್ತಾರೆ “ ಶ್ರೀವೈಕುಂಠದಲ್ಲಿ ನನಗೆ ಕೈಂಕರ್‍ಯಗಳನ್ನು ಸಮರ್ಪಿಸುವುದು ಪರಮ ಗುರಿ ಎಲ್ಲರಿಗೂ ಅಲ್ಲವೇ?” ಅದಕ್ಕೆ ಆಳ್ವಾರರು ಹೇಳುತ್ತಾರೆ, “ ಶ್ರೀವೈಕುಂಠದಿಂದಲೇ ದೇವತೆಗಳು ಬಹು ಆಸೆಯಿಂದ ತಿರುಮಲಕ್ಕೆ ಇಳಿದಿದ್ದಾರಲ್ಲವೇ ನಿನಗೆ ಸೇವೆ ಸಲ್ಲಿಸಲು? ನನಗೆ ತಿರುಮಲದಲ್ಲಿ ಯಾವಾಗ ನಿನ್ನ ಸಂಪೂರ್ಣ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ? “ ಇದನ್ನು ಈ ರೀತಿ ವಿವರಿಸಲಾಗಿದೆ, “ ದೇವತೆಗಳಿಗೂ ಅತ್ಯಂತ ಆಕರ್ಷಕವಾದ ನಿನ್ನ (ದಿವ್ಯಪಾದಗಳು) ತಿರುವಡಿಗಳಿಗೆ ಸೇವೆ ಸಲ್ಲಿಸಲು ನನಗೆ ಎಂದು ಅವಕಾಶ ದೊರಕುತ್ತದೆ? ನಾನು ಎಂದು ನಿನ್ನ ಪಾದಗಳನ್ನು ಸೇರುವೆ?” ಎಂದೂ ಹೇಳುತ್ತಾರೆ.
ಎನ್ನಾಳೇ ನಾಮ್ ಮಣ್ ಅಳನ್ದ ಇಣೈ ತ್ತಾಮರೈಗಳ್ ಕಾಣ್ಬದಱ್ಕೆನ್‍ಱು,
ಎನ್ನಾಳುಮ್ ನಿನ್‍ಱು ಇಮೈಯೋರ್ಗಳ್ ಏತ್ತಿ ಇಱೈಞ್ಜಿ ಇನಮಿನಮಾಯ್,
ಮೆಯ್ ನಾ ಮನತ್ತಾಲ್ ವೞಿಪಾಡು ಶೆಯ್ಯುಮ್ ತಿರುವೇಙ್ಗಡತ್ತಾನೇ,
ಮೆಯ್ ನಾ ಎಯ್‍ದಿ ಎನ್ನಾಳ್ ಉನ್ ಅಡಿಕ್ಕಳ್ ಅಡಿಯೇನ್ ಮೇವುವದೇ॥
ನಿತ್ಯಸೂರಿಗಳ ಗುಂಪು ಎಂಪೆರುಮಾನರನ್ನು ಯಾವಾಗಲೂ ಹೊಗಳಿ ಕೇಳುತ್ತಿರುತ್ತವೆ “ ಎಲ್ಲಾ ಲೋಕಗಳನ್ನು ಅಳೆದ ಮತ್ತು ಭೂಮಿಯ ಮಣ್ಣಿನಿಂದ ಕೂಡಿದ ಮತ್ತು ಅತ್ಯಂತ ಸರಳವಾಗಿರುವ ನಿನ್ನ ದಿವ್ಯ ಪಾದಗಳನ್ನು ಜೊತೆಯಾಗಿ ಯಾವಾಗ ನೋಡುವುದು? “ ಓಹ್! ತಿರುಮಲದಲ್ಲಿ ಅಸ್ತಿತ್ವದಲ್ಲಿರುವ ನಿನ್ನನ್ನು ಈ ರೀತಿಯಾಗಿ ಪೂಜಿಸಲು ಮತ್ತು ಸೇವೆ ಸಲ್ಲಿಸಲು ಇವರೆಲ್ಲರೂ ಕಾದಿರುವರು. ನಿನ್ನನ್ನು ಮಾತ್ರ ಸ್ವಾಮಿಯೆಂದು ನಂಬಿರುವ ನಾನು ಯಾವಾಗ ನಿನ್ನ ದಿವ್ಯ ಪಾದಗಳನ್ನು ನನ್ನ ಕನಸಿನಲ್ಲಿ ಕಂಡ ಹಾಗೆ ಸೇರುವೆ ಮತ್ತು ಅಲ್ಲಿ ಸೇರಲು ಯೋಗ್ಯವಾಗುವೆ?” ಎಂದು ಆಳ್ವಾರರು ಹಾಡುತ್ತಾರೆ.
ಏಳನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾನು ನಿನ್ನನ್ನು ಸೇರಲು ಯಾವ ಮಾರ್ಗವನ್ನೂ ಹೊಂದಿಲ್ಲ. ಆದರೂ ನಾನು ನಿನ್ನ ಆನಂದವನ್ನು ಅನುಭವಿಸದೇ ಒಂದು ಕ್ಷಣ ಕೂಡಾ ಇರಲಾರೆ”
ಅಡಿಯೇನ್ ಮೇವಿ ಅಮರ್ಗಿನ್‍ಱ ಅಮುದೇ ಇಮೈಯೋರ್ ಅದಿಪತಿಯೇ,
ಕೊಡಿಯಾ ಅಡು ಪುಳ್ ಉಡೈಯಾನೇ ಕೋಲಕ್ಕನಿವಾಯ್ ಪ್ಪೆರುಮಾನೇ,
ಶೆಡಿ ಆರ್ ವಿನೈಗಳ್ ತೀರ್ ಮರುನ್ದೇ ತಿರುವೇಙ್ಗಡತ್ತೆಮ್ಬೆರುಮಾನೇ,
ನೊಡಿಯಾರ್ ಪೊೞುದುಮ್ ಉನಪಾದಮ್ ಕಾಣ ನೋಲಾದಾಟ್ರೇನೇ ॥
ಎಂಪೆರುಮಾನರು ಸನ್ನಿಹಿತವಾಗಲು ಮತ್ತು ಅನುಭವ ಪಡೆಯಲು ಶಾಶ್ವತವಾಗಿ ಆನಂದಮಯರಾಗಿದ್ದಾರೆ. ನಿತ್ಯಸೂರಿಗಳಿಗೆಲ್ಲಾ ಅಧಿಪತಿಯೂ ನಿಯಂತ್ರಕರೂ ಆಗಿದ್ದಾರೆ. ಭಾಗವತರ ವೈರಿಗಳನ್ನು ನಿರ್ಮೂಲನೆ ಮಾಡುವ ಗರುಡಾಳ್ವಾನ್ ಅನ್ನು ಧ್ವಜವಾಗಿ ಪಡೆದಿದ್ದಾರೆ. ಅವರ ತುಟಿಗಳು ಕೆಂಪಾದ ಹಣ್ಣಿನಂತೆ ಇದ್ದು, ಆ ಸುಂದರತೆಯು ಅವರನ್ನು ಹೆಚ್ಚು ಆನಂದಿಸಲ್ಪಡುತ್ತದೆ. ಅವರು ಆ ರೀತಿಯ ಅಪರಿಮಿತ ಆನಂದವನ್ನುಂಟುಮಾಡುವ ಅನೇಕ ಸೌಕರ್‍ಯಗಳನ್ನು ಹೊಂದಿದ್ದಾರೆ. ದಟ್ಟವಾದ ಪೊದೆಯ ಹಾಗೆ ಬೆಳೆದಿರುವ ನನ್ನ ಪಾಪರಾಶಿಯನ್ನು ದೂರಮಾಡಲು ಔಷಧಿಯಾಗಿರುವ ತಿರುಮಲದಲ್ಲಿ ನೆಲೆಸಿರುವವನೇ! ನೀನು ನಿನ್ನ ಸೇವಕನಾಗಿ ನನ್ನನ್ನು ಅನುಗ್ರಹಿಸಿರುವುದಕ್ಕೆ ನಾನು ಏನೂ ಪ್ರಯತ್ನ ಮಾಡಲಿಲ್ಲ. ಒಂದು ಕ್ಷಣವೂ ನಿನ್ನ ದಿವ್ಯ ಪಾದಕಮಲಗಳಿಂದ ದೂರವಾಗಿ ಇರಲಾರೆ. [ನೋಡದೇ ಇರಲಾರೆ] ಎಂದು ಹಾಡುತ್ತಾರೆ.
ಎಂಟನೆಯ ಪಾಸುರಮ್:
ಎಂಪೆರುಮಾನರು ಕೇಳುತ್ತಾರೆ, “ ನೀನು ಯಾವ ಪ್ರಯತ್ನವನ್ನೂ ಮಾಡದೇ , ನನಗೆ ಸಹಿಸಲಾಗುತ್ತಿಲ್ಲ ಎಂದರೆ ಫಲಿತಾಂಶ ಸಿಕ್ಕುವುದೇ?” ಅದಕ್ಕೆ ಆಳ್ವಾರರು ಹೇಳುತ್ತಾರೆ, “ ಬ್ರಹ್ಮ ಮುಂತಾದವರು ತಮಗೆ ಸ್ವಲ್ಪವೇ ಸಾಮರ್ಥ್ಯವಿದ್ದರೂ, ಆಕಿಂಚನ್ಯಮ್ ನನ್ನು ಪಠಿಸಿ ಅವರ ಆಸೆಯನ್ನು ಪೂರೈಸಿಕೊಳ್ಳಲಿಲ್ಲವೇ? ಆದ್ದರಿಂದ ದಯವಿಟ್ಟು ನನ್ನಲ್ಲಿಗೆ ಬಂದು ನನ್ನ ದುಃಖವನ್ನು ಪರಿಹರಿಸು”.
ನೋಲಾದಾಟ್ರೇನ್ ಉನಪಾದಮ್ ಕಾಣ ಎನ್‍ಱು ನುಣ್ ಉಣರ್ವಿನ್ ,
ನೀಲಾರ್‍ಕಣ್ಡತ್ತಮ್ಮಾನುಮ್ ನಿಱೈನಾನ್ಮುಗನುಮ್ ಇನ್ದಿರನುಮ್,
ಶೇಲೇಯ್ ಕಣ್ಡಾರ್ ಪಲರ್ ಶೂೞ ವಿರುಮ್ಬುಮ್ ತಿರುವೇಙ್ಗಡತ್ತಾನೇ,
ಮಾಲಾಯ್ ಮಯಕ್ಕಿ ಅಡಿಯೇನ್ ಪಾಲ್ ವನ್ದಾಯ್ ಪೋಲೇ ವಾರಾಯೇ॥
ಸರ್ವಜ್ಞನಾದ(ಎಲ್ಲಾ ಬಲ್ಲವನಾದ) ರುದ್ರನು ಸೂಕ್ಷ್ಮ ಸಂಗತಿಗಳನ್ನು ನೋಡಬಲ್ಲವನಾಗಿದ್ದರಿಂದ ಇಡೀ ಭೂಮಂಡಲದಲ್ಲಿ ಮುಖ್ಯನಾದವನಾಗಿ , ತನ್ನ ಕಂಠವನ್ನು ಕಪ್ಪಾಗಿಸಿಕೊಂಡನು. ನಾಲ್ಕು ತಲೆಯ ಬ್ರಹ್ಮನು ಇಂತಹ ರುದ್ರನಿಗೆ ತಂದೆಯಾಗಿದ್ದುಕೊಂಡು , ಸೃಷ್ಟಿಸಲು ಎಲ್ಲಾ ಜ್ಞಾನವನ್ನೂ ಹೊಂದಿದ್ದನು. ಇಂದ್ರನಿಗೆ ಮೂರೂ ಲೋಕದ ಸಂಪತ್ತುಗಳಿದ್ದರೂ, ನಿನ್ನ ಹತ್ತಿರ “ ನನಗೆ ನಿನ್ನನ್ನು ಹೊಂದಲು ಯಾವ ಮಾರ್ಗಗಳೂ ತಿಳಿದಿಲ್ಲವಾದರೂ, ನಿನ್ನನ್ನು ಬಿಟ್ಟಿರಲು ಅಸಹನೀಯವಾಗಿದೆ.” ಎಂದು ಹೇಳುತ್ತಾನೆ. ತಿರುಮಲದಲ್ಲಿ ವಾಸವಾಗಿರುವ ಮತ್ತು ಈ ರೀತಿಯಾಗಿ ಪ್ರಾರ್ಥನೆಗಳನ್ನು ಮತ್ತು ಶರಣಾಗತಿಯನ್ನು ಸ್ವೀಕರಿಸುವ ಮತ್ತು ಇಂತಹ ದೇವರುಗಳಿಂದ ಮತ್ತು ಅವರ ಹತ್ತಿರದಲ್ಲಿರುವ ಮೀನಿನಂತೆ ಕಣ್ಣುಗಳಿರುವ ಹೆಣ್ಣು ದೇವತೆಗಳಿಂದ (ಪಾರ್ವತಿ, ಸರಸ್ವತಿ , ಶಚಿ ಮುಂತಾದವರಿಂದ) ಆರಾಧಿಸಲ್ಪಡುವೆ. ಹೇಗೆ ನೀನು ಕೃಷ್ಣನಾಗಿ ಕಪ್ಪಾದ ಪ್ರಭೆಯುಳ್ಳ ಬಣ್ಣವನ್ನು ಹೊಂದಿ ಎಲ್ಲರನ್ನೂ ನಿನ್ನ ಗುಣಗಳಿಂದ ಮತ್ತು ಚಟುವಟಿಕೆಗಳಿಂದ ಮಂತ್ರಮುಗ್ಧರಾಗಿ ಮಾಡುತ್ತಿದ್ದೆಯೋ, ಹಾಗೆಯೇ ನಿನ್ನನ್ನು ಮಾತ್ರ ಶರಣು ಹೋಗಿರುವ ಮತ್ತು ನಿನ್ನನ್ನು ಬಿಟ್ಟು ಬದುಕಲಾರೆನೆಂಬ ನನ್ನಲ್ಲಿಗೂ ನೀನು ಬರಬೇಕು” ಎಂದು ಹಾಡುತ್ತಾರೆ.
ಒಂಭತ್ತನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ ನಾನು ನಿನ್ನ ಅತ್ಯಂತವಾಗಿ ಆನಂದಿಸಲ್ಪಡುವ ಸುಂದರ ದಿವ್ಯ ಪಾದಗಳನ್ನು ಎಂದೆಂದಿಗೂ ಬಿಡಲಾರೆ.”
ವನ್ದಾಯ್ ಪೋಲೇ ವಾರಾದಾಯ್ ವಾರಾದಾಯ್ ಪೋಲ್ ವರುವಾನೇ,
ಶೆನ್ದಾಮರೈಕ್ಕಣ್ ಶೆಙ್ಗನಿವಾಯ್ ನಾಲ್ ತೋಳ್ ಅಮುದೇ ಎನದುಯಿರೇ,
ಶಿನ್ದಾಮಣಿಗಳ್ ಪಗರ್ ಅಲ್ಲೈ ಪ್ಪಗಲ್‍ಶೆಯ್ ತಿರುವೇಙ್ಗಡತ್ತಾನೇ,
ಅನ್ದೋ ಅಡಿಯೇನ್ ಉನಪಾದಮ್ ಅಗಲ ಕಿಲ್ಲೇನ್ ಇಱೈಯುಮೇ ॥
ನೀನು ಬಂದ ಹಾಗೆ ಕಂಡರೂ ಕೈಗೆ ಸಿಕ್ಕ ಹಾಗೆ ಕಂಡರೂ ಸಿಗುವುದಿಲ್ಲ. ತನ್ನೊಳಗೆ ಆಕಿಂಚನ್ಯಮ್ ನಿಂದ (ಏನೇನೂ ಇಲ್ಲದೆ) , ‘ಅವನು ಬರಲು ಸಾಧ್ಯವೇ ಇಲ್ಲ ‘ ಎಂದು ಯೋಚಿಸುವಾಗ ನೀನು ಬರುವೆ ಮತ್ತು ಸಂಪೂರ್ಣ ಅಧೀನನಾಗುವೆ. ನೀನು ನಿನ್ನ ಬಹು ಸುಂದರವಾದ ಕಮಲದ ಹೂಗಳ ಹಾಗಿರುವ ಕೆಂಪಾದ ದಿವ್ಯ ಕಣ್ಣುಗಳಿಂದ ,ಮತ್ತು ಕೆಂಪಾದ ಮಾಗಿದ ಹಣ್ಣಿನಂತಿರುವ ದಿವ್ಯ ತುಟಿಗಳಿಂದ ಹೇಳುವೆ “ ಮಾಮೇಕಮ್ ಶರಣಮ್ ವ್ರಜ” . ಭಕ್ತರನ್ನು ಆಲಂಗಿಸುತ್ತಾ ನಾಲ್ಕು ಭುಜಗಳು ಹೇಳುತ್ತವೆ “ಸುಗಾಧಮ್ ಪರಿಷಸ್ವಜೇ” ಅವುಗಳು ನಿರಂತರವಾಗಿ ಭಕ್ತರಿಗೆ ಆನಂದವನ್ನು ನೀಡುತ್ತವೆ ಮತ್ತು ನನಗೆ ಜೀವಾಂಶವಾಗಿದೆ. ರಾತ್ರಿಯನ್ನು ಹಗಲಿನ ಹಾಗೆ ಪ್ರಕಾಶಿಸುವ , ಕೇಳಿದ್ದನ್ನು ಕೊಡುವ ಅಮೂಲ್ಯ ರತ್ನದ ಹರಳುಗಳು ತುಂಬಿರುವ ತಿರುಮಲದಲ್ಲಿ ನೀನು ನೆಲೆಸಿರುವೆ. ಅಯ್ಯೋ! ನಿನ್ನ ಸಂಪೂರ್ಣ ಸೇವಕನಾಗಿರುವ , ಬೇರೆ ಯಾರ ಆಶ್ರಯವಿಲ್ಲದ ನಾನು ನಿನ್ನ ದಿವ್ಯ ಪಾದಗಳನ್ನು ಬಿಟ್ಟು ಒಂದು ನಿಮಿಷವೂ ಅಗಲಿರಲಾರೆನು.
ಅನ್ದೋ => ಇದರ ಅರ್ಥ , ಅಗಲಿಕೆಯಿಂದ ನನ್ನೊಳಗೆ ಇಷ್ಟೊಂದು ವ್ಯಥೆಯನ್ನು ದುಃಖವನ್ನೂ ತುಂಬಿಕೊಂಡಿದ್ದರೂ, ನಾನು ನನ್ನ ಮನೋಕಾಂಕ್ಷೆಯನ್ನು ಬಿಡಿಸಿ ಪ್ರತ್ಯೇಕವಾಗಿ ಹೇಳಬೇಕೆ ಎಂದು.
ಹತ್ತನೆಯ ಪಾಸುರಮ್:
ಆಳ್ವಾರರು ತಿರುವೇಂಗಡಮುಡೈಯಾನರಿಗೆ ಸರಿಯಾದ ಶರಣಾಗತಿಯಾಗುತ್ತಾರೆ ಮತ್ತು ಹೇಳುತ್ತಾರೆ, “ ಬೇರೆ ಏನೂ ಆಶ್ರಯವಿಲ್ಲದೆ ನಾನು ಪಿರಾಟ್ಟಿಯ ಪುರುಷಕಾರವನ್ನು ಮತ್ತು ಸೂಕ್ತ ಗುಣಗಳನ್ನು ಹೊಂದಿರುವ ನಿನ್ನ ದಿವ್ಯ ಪಾದಗಳಿಗೆ ಶರಣಾಗುತ್ತೇನೆ.”
ಅಗಲಕಿಲ್ಲೇನ್ ಇಱೈಯುಮ್ ಎನ್‍ಱು ಅಲರ್‌ಮೇಲ್ ಮಙ್ಗೈ ಉಱೈ ಮಾರ್ಬಾ,
ನಿಗರಿಲ್ ಪುಗೞಾಯ್ ಉಲಗಮ್ ಮೂನ್‍ಱುಡೈಯಾಯ್ ಎನ್ನೈ ಆಳ್ವಾನೇ,
ನಿಗರಿಲ್ ಅಮರರ್ ಮುನಿಕ್ಕಣಙ್ಗಳ್ ವಿರುಮ್ಬುಮ್ ತಿರುವೇಙ್ಗಡತ್ತಾನೇ,
ಪುಗಳ್ ಒನ್‍ಱಿಲ್ಲಾ ಅಡಿಯೇನ್ ಉನ್ ಅಡಿಕ್ಕೀೞ್ ಅಮರ್ನ್ದು ಪುಗುನ್ದೇನೇ ॥
ಓಹ್! ಎಂಪೆರುಮಾನರೇ! ನೀವು ಅತಿಯಾಗಿ ಆನಂದಿಸಬಹುದಾದ ದಿವ್ಯ ವಕ್ಷಸ್ಥಲವನ್ನು ಹೊಂದಿದ್ದೀರಿ. ಅದು ಶಾಶ್ವತವಾಗಿ ಲಕ್ಷ್ಮಿಯ ವಾಸಸ್ಥಾನವಾಗಿದೆ. ಅವಳು ಎಂದೂ ತರುಣಾವಸ್ಥೆಯಲ್ಲಿ ಇದ್ದು , ಮೃದುವಾದ ಮಧುರವಾದ ಗುಣಗಳನ್ನು ಹೊಂದಿದ್ದು, ನಿಮ್ಮಿಂದ ಒಂದು ಕ್ಷಣವೂ ದೂರವಾಗಿರಲಾರೆ ಎಂದು ನಿಮಗೆ ಅತ್ಯಂತ ಪ್ರಿಯಳಾಗಿದ್ದಾಳೆ. ಓಹ್! ಸರಿಸಾಟಿಯಿಲ್ಲದ, ಶೇಷ್ಠ ವಾತ್ಸಲ್ಯವನ್ನು ಹೊಂದಿರುವವನೇ! ಪ್ರಮಾಣದಲ್ಲಿ ಸಾಧಿಸಿರುವ ಹಾಗೆ ಮೂರು ವಿಧದ ಚೇತನಗಳಿಗೂ ಮತ್ತು ಅಚೇತನಗಳಿಗೂ ಸ್ವಾಮಿತ್ವಮ್ ಅನ್ನು ಹೊಂದಿರುವವನೇ! ಬಹಳ ತಪ್ಪುಗಳನ್ನು ಮಾಡಿದ ನನ್ನನ್ನು ಕೂಡಾ ಸ್ವೀಕರಿಸಿ,ಅಂಗೀಕರಿಸಲು ಬೇಕಾದ ಸೌಶೀಲ್ಯವನ್ನು ಹೊಂದಿರುವವನೇ! ಸರಿಸಾಟಿಯಿಲ್ಲದ ಅಮರರು ಪೂಜಿಸಲು ಅತಿ ಉತ್ಸುಕರಾಗಿರುವ, ಮುನಿಗಳು ನಿನಗಾಗಿ ತಪಸ್ಸು ಮಾಡುವ ಸ್ಥಳವಾದ ತಿರುಮಲದಲ್ಲಿ ನೆಲೆಸಿರುವವನೇ! ಅನನ್ಯಶರಣನಾಗಿರುವ ಬೇರೆ ಯಾವ ಮಾರ್ಗವೂ ಉಪಾಯವೂ ಇಲ್ಲದ ಉಪಾಯಾಂತರಮ್ ನಾನು ಮತ್ತು ಇತರ ಭಕ್ತರು ನಿನ್ನ ದಿವ್ಯಪಾದದಡಿಯಲ್ಲಿ ಕುಳಿತಿದ್ದೇವೆ. ನಮಗೆ ನಿನ್ನ ಕೈಂಕರ್‍ಯದ ಗುರಿಯನ್ನು ಹೊರತುಪಡಿಸಿ ಬೇರೇನೂ ಬೇಡ. ಎಂದು ಹಾಡುತ್ತಾರೆ.
ಹನ್ನೊಂದನೆಯ ಪಾಸುರಮ್:
ಯಾರು ಯಾರು ಈ ಹತ್ತು ಪಾಸುರಗಳುಳ್ಳ ಪದಿಗೆಯನ್ನು ಕಲಿತು ಹಾಡುತ್ತಾರೋ, ಅವರಿಗೆ ಪರಮಪದ ಪ್ರಾಪ್ತಿಯಾಗುವುದು ಮತ್ತು ಕೈಂಕರ್‍ಯದಲ್ಲಿ ಅವರು ವ್ಯಸ್ತರಾಗುತ್ತಾರೆ.
ಅಡಿಕ್ಕೀೞ್ ಅಮರ್ನ್ದು ಪುಗುನ್ದು ಅಡಿಯೀರ್ ವಾೞ್‍ಮಿನ್ ಎನ್‍ಱೆನ್‍ಱು ಅರುಳ್‍ಕೊಡುಕ್ಕುಮ್,
ಪಡಿ ಕ್ಕೇೞ್ ಇಲ್ಲಾ ಪ್ಪೆರುಮಾನೈ ಪ್ಪೞನಕ್ಕುರುಗೂರ್ ಚ್ಚಡಗೋಪನ್,
ಮುಡಿಪ್ಪಾನ್ ಶೊನ್ನ ಆಯಿರತ್ತು ತ್ತಿರುವೇಙ್ಗಡತ್ತುಕ್ಕಿವೈಪತ್ತುಮ್,
ಪಿಡಿತ್ತಾರ್ ಪಿಡಿತ್ತಾರ್ ವೀಟ್ರಿರುನ್ದು ಪೆರಿಯ ವಾನುಳ್ ನಿಲಾವುವರೇ ॥
ಎಂಪೆರುಮಾನರು ಎಲ್ಲರಿಗಿಂತಲೂ ಶ್ರೇಷ್ಠರಾದವರು ಎಲ್ಲರ ಮೇಲೆ ತಮ್ಮ ಕರುಣೆಯನ್ನು ಹರಿಸುತ್ತಾರೆ ಮತ್ತು ಹೇಳುತ್ತಾರೆ. “ಓಹ್! ನನ್ನ ಸೇವಕರೇ, ನನ್ನ ದಿವ್ಯ ಪಾದಗಳಲ್ಲಿ ಪ್ರವೇಶ ಮಾಡಿ ಮತ್ತು ಅನನ್ಯ ಸಾಧನರಾಗಿ , ಅನನ್ಯ ಪ್ರಯೋಜನರಾಗಿ ಅನಂತವಾಗಿ ಆನಂದ ಹೊಂದಿರಿ.” ಉತ್ತೇಜಕವಾದ ನೀರಿನ ಪ್ರದೇಶವನ್ನು ಹೊಂದಿರುವ ಆಳ್ವಾರ್ ತಿರುನಗರಿಯ ನಾಯಕರಾಗಿರುವ ನಮ್ಮಾಳ್ವಾರರು ಕರುಣೆಯಿಂದ ಎಂಪೆರುಮಾನರ ಬಗ್ಗೆ ತಮ್ಮ ಆಸೆಯನ್ನು ಪೂರೈಸಿಕೊಳ್ಳಲು ಈ ಹತ್ತು ಪಾಸುರಗಳನ್ನು, ಸಾವಿರ ಪಾಸುರಗಳೊಡನೆ ಹೇಳಿದ್ದಾರೆ. ಯಾರು ಈ ಪಾಸುರಗಳನ್ನು ಅವುಗಳ ಅರ್ಥಗಳೊಂದಿಗೆ ಹಿಡಿದಿಟ್ಟುಕೊಳ್ಳುತ್ತಾರೋ, ಅವರು ಅತ್ಯಂತ ಶ್ರೇಷ್ಠವಾದ ಪರಮಪದವೆಂಬ ಪರಮವ್ಯೋಮದಲ್ಲಿ ನಿರಂತರವಾಗಿ ವಿಶಿಷ್ಟ ರೂಪದಲ್ಲಿರುತ್ತಾರೆ ಮತ್ತು ಶಾಶ್ವತವಾದ ಆನಂದವನ್ನು ಹೊಂದುತ್ತಾರೆ.
ನಮ್ಮಾಳ್ವಾರ್ ತಿರುವಡಿಗಳೇ ಶರಣಮ್
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/2020/05/thiruvaimozhi-6-10-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org