ತಿರುವಾಯ್ಮೊೞಿ – ಸರಳ ವಿವರಣೆ – 1.2 – ವೀಡುಮಿನ್

ಶ್ರೀ:  ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 1.1 – ಉಯರ್ವರ

sriman narayanan-nanmazhwar


ಎಂಪೆರುಮಾನರ ಅಧಿಪತ್ಯವನ್ನೂ, ಮೇಲ್ಮೆಯನ್ನೂ ಪೂರ್ತಿಯಾಗಿ ಆನಂದಿಸಿದ ಬಳಿಕ , ಆೞ್ವಾರರು ಅಂತಹ ಎಂಪೆರುಮಾನರನ್ನು ಪಡೆಯುವುದರ ಬಗ್ಗೆ , ಈ ಪದಿಗೆಯಲ್ಲಿ (dacad) ಅನ್ಯರಿಗಾಗಿ ವಿವರಿಸಿದ್ದಾರೆ. ಅವರು ಅನುಭವಿಸಿದ ವಿಷಯದ ಶ್ರೇಷ್ಠತೆಯ ದೆಸೆಯಿಂದ ಮತ್ತು ಈ ಲೋಕದ ಸಂಸಾರಿಗಳಿಗಾಗಿ ಆೞ್ವಾರರು ಇದನ್ನು ಬೇರೆಯವರಿಗೂ ತಿಳಿಸಲು ಯೋಚಿಸಿದರು. ಈ ಜಗತ್ತಿನ ಸಂಸಾರಿಗಳು ಲೌಕಿಕ ವಿಷಯಗಳಲ್ಲಿ ಸಂಪೂರ್ಣವಾಗಿ ಮುಳುಗಿದ್ದರು. ಆೞ್ವಾರರು ತಮ್ಮ ಅಮಿತವಾದ ಕರುಣೆಯಿಂದ ನಮಗೆ ಸಹಾಯ ಮಾಡಲು ಮತ್ತು ನಮ್ಮ ಲೌಕಿಕ ವಿಷಯಗಳಿಗೆ ಇರುವ ಅಂಟನ್ನು,ನಂಟನ್ನು ಬಿಡಿಸಲು ಮತ್ತು ಭಗವಂತನಲ್ಲಿ ಭಕ್ತಿಯನ್ನು ಹೊಂದಲು ಈ ಪದಿಗೆಯನ್ನು ರಚಿಸಿರುತ್ತಾರೆ.

ಪಾಸುರಮ್ 1 :
ಮೊದಲನೆಯ ಪಾಸುರದಲ್ಲಿ ನಮ್ಮಾೞ್ವಾರರು ಎಲ್ಲರಿಗೂ ಆತ್ಮ ಸಮರ್ಪಣೆಯನ್ನು ಮಾಡಲು ಆಜ್ಞಾಪಿಸುತ್ತಾರೆ. ನಮ್ಮನ್ನು ನಾವು ಸಂಪೂರ್ಣವಾಗಿ ಭಗವಂತನಿಗೆ ಸಮರ್ಪಣೆ ಮಾಡಲು , ನಾವು ಮುಂದೆಯೇ ಹೊಂದಿರುವ ಲೌಕಿಕ ವಿಷಯಗಳ ಸಂಬಂಧವನ್ನು ಬಿಡಬೇಕು.

ವೀಡುಮಿನ್ ಮುಟ್ಟ್ರವುಮ್ ವೀಡು ಶೆಯ್ದು , ಉಮ್ಮುಯಿರ್
ವೀಡುಡೈಯಾನಿಡೈ ವೀಡು ಶೆಯ್‌ಮಿನೇ॥


ಎಲ್ಲಾ ರೀತಿಯ ಸ್ವ-ಕೇಂದ್ರಿತ (ಸ್ವಾರ್ಥ) ದೃಷ್ಟಿಯ ದಾರಿಗಳನ್ನು ಬಿಡಬೇಕು. ಎಂಬೆರುಮಾನರನ್ನು ಆರಾಧಿಸಲು ಇವು ತೊಂದರೆಯನ್ನುಂಟು ಮಾಡುತ್ತವೆ. ಇವುಗಳನ್ನು ಬಿಟ್ಟ ಮೇಲೆ , ನಮ್ಮನ್ನು ನಾವು ಮೋಕ್ಷವನ್ನು ಕೊಡುವ ಭಗವಂತನಿಗೇ ಅರ್ಪಿಸಬೇಕು.

ಪಾಸುರಮ್ 2:
ಎರಡನೆಯ ಪಾಸುರದಲ್ಲಿ ಈ ರೀತಿಯ ಪರಿತ್ಯಾಗ (ವಿರಕ್ತಿ) ಮಾಡುವುದಕ್ಕಾಗಿ ಆೞ್ವಾರರು , ನಶ್ವರವಾದ ವಿಧಾನಗಳಾದ ಯಾವುವನ್ನು ತ್ಯಜಿಸಬೇಕೆಂದು ಗುರುತಿಸಿಕೊಡುತ್ತಾರೆ.

ಮಿನ್ನಿನ್ ನಿಲೈಯಿಲ ಮುನ್ನುಯಿರ್ ಆಕ್ಕೈಗಳ್
ಎನ್ನುಮಿಡುತ್ತು ಇಱೈ ಉನ್ನುಮಿನ್ ನೀರೇ॥


ಜೀವಾತ್ಮವು ಹಲವು ಜನ್ಮ, ಮರುಜನ್ಮಗಳನ್ನು ಹೊಂದಿ , ತನಗೆ ಇಷ್ಟವಾದ ದೇಹಗಳನ್ನು ಪ್ರವೇಶಿಸುತ್ತದೆ. ಆದರೆ ಈ ದೇಹಗಳು ಎಷ್ಟು ಅಶಾಶ್ವತ (ನಶ್ವರ) ಎಂದರೆ ಅವು ಒಂದು ಮಿಂಚಿನಷ್ಟು ಕಾಲವೂ ಉಳಿಯದೆ ಅಳಿದು ಹೋಗುತ್ತವೆ. ಇದನ್ನು ನೋಡಿದ ಮೇಲೆ , ನಾವು ನಮ್ಮ ಅಧಿಪತಿಯಾದ ಭಗವಂತನನ್ನು ಒಡೆಯನೆಂದು ತಿಳಿದುಕೊಂಡು ಅವನನ್ನು ಧ್ಯಾನಿಸಬೇಕು.

ಪಾಸುರಮ್ 3:
ಮೂರನೆಯ ಪಾಸುರದಲ್ಲಿ ನಮ್ಮಾೞ್ವಾರರು ಕರುಣೆಯಿಂದ ಪರಿತ್ಯಾಗದ ಕ್ರಿಯೆಯನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.

ನೀರ್ ನುಮದು ಎನ್‌ಱಿವೈ ವೇರ್ ಮುದಲ್ ಮಾಯ್‌ತ್ತು, ಇಱೈ
ಶೇರ್‌ಮಿನ್ ಉಯಿರ್‍‌ಕ್ಕದನ್ ನೇರ್ ನಿಱೈಯಿಲ್ಲೇ॥


ಅಹಂಕಾರವನ್ನೂ , ಮಮಕಾರವನ್ನೂ ತ್ಯಜಿಸಿ , ಸರ್ವಾಧಿಕಾರಿಯಾದ ಭಗವಂತನನ್ನು ಸೇರಲು ಹಂಬಲಿಸುವುದು . ಜೀವಾತ್ಮನಿಗೆ ಇದಕ್ಕಿಂತ ಪರಿಪೂರ್ಣವಾದುದು ಮತ್ತು ಸೂಕ್ತವಾದುದು ಬೇರೊಂದಿಲ್ಲ.

ಪಾಸುರಮ್ 4:
ನಾಲ್ಕನೆಯ ಪಾಸುರದಲ್ಲಿ ಜೀವಾತ್ಮವು ಲೌಕಿಕ ವಿಷಯಗಳನ್ನು ತ್ಯಜಿಸಿ , ಪರಮಾತ್ಮನನ್ನು ಹೊಂದಲು ತವಕಿಸಿದಾಗ , ಆ ಭಗವಂತನ ವಿಶಿಷ್ಟವಾದ ಗುಣವನ್ನು ನಮ್ಮಾೞ್ವಾರರು ವಿವರಿಸಿದ್ದಾರೆ.

ಇಲ್ಲದುಮ್ ಉಳ್ಳದುಮ್ ಅಲ್ಲದು ಅವನುರು
ಎಲ್ಲೆಯಿಲ್ ಅನ್ನಲಮ್ ಪುಲ್‌ಗು ಪಟ್ಟ್ರಟ್ಟ್ರೇ॥


ಚಿತ್ (ಬದಲಾಗದ ಜೀವಾತ್ಮಗಳು) ಮತ್ತು ಅಚಿತ್ (ನಿರಂತರ ಬೇರೆ ರೂಪಗಳನ್ನು ಹೊಂದುವ ಅಚೇತನಗಳು) ಗಳಿಗಿಂತ ಭಗವಂತನು ಬಹಳ ವ್ಯತ್ಯಾಸವುಳ್ಳವನು. ಆದ್ದರಿಂದ ನಾವು ನಮ್ಮ ನಂಟನ್ನು ಈ ವಿಷಯಗಳಿಂದ ಬಿಡಿಸಿಕೊಂಡ ನಂತರ , ಭಗವಂತನನ್ನು ಭಕ್ತಿಯಿಂದ ಆರಾಧಿಸಿದಾಗ , ಅವನು ಪರಿಪೂರ್ಣನಾಗಿ ಪರಮಾನಂದ ಭರಿತನಾಗಿರುವುದನ್ನು ನಾವು ಕಾಣಬಹುದಾಗಿದೆ.

ಪಾಸುರಮ್ 5:
ಐದನೆಯ ಪಾಸುರದಲ್ಲಿ ಅಂತಹ ಆದರಣೀಯ (ಪೂಜ್ಯ) ಎಂಪೆರುಮಾನರನ್ನು ಪಡೆಯುವುದೇ ಪರಮ ಗುರಿ ಎಂದು ನಮ್ಮಾೞ್ವಾರರು ವಿವರಿಸಿದ್ದಾರೆ.

ಅಟ್ಟ್ರದು ಪಟ್ಟ್ರೆನಿಲ್ ಉಟ್ಟ್ರದು ವೀಡುಯಿರ್
ಶೆಟ್ಟ್ರದು ಮನ್ನುಱಿಲ್ ಅಟ್ಟ್ರಿಱೈ ಪಟ್ಟ್ರೇ॥


ಭಗವತ್ ವಿಷಯವನ್ನು ಬಿಟ್ಟು ಬೇರೆ ವಿಷಯಗಳಲ್ಲಿರುವ ಮೋಹವನ್ನು ಬಿಡಿಸಿಕೊಂಡ ನಂತರ, ಜೀವಾತ್ಮವು ಕೈವಲ್ಯ ಮೋಕ್ಷವನ್ನು (ಸಂಸಾರದಿಂದ ವಿಮುಕ್ತಿ ಪಡೆದ ನಂತರ ತನ್ನಲ್ಲಿ ತಾನೇ ಆನಂದಿಸುವುದು) ಪಡೆಯಲು ಯೋಗ್ಯವಾಗಿರುತ್ತದೆ. ಈ ಕೈವಲ್ಯ ಮೋಕ್ಷದ ಯೋಚನೆಯನ್ನು ಬಿಟ್ಟು , ಎಲ್ಲವನ್ನೂ ತ್ಯಜಿಸಿದ ನಂತರ , ಎಂಪೆರುಮಾನರನ್ನು , ಅವರೊಂದಿಗೆ ತೊಡಗಿಸಿಕೊಳ್ಳುವುದಕ್ಕಾಗಿ (ಅವರ ಸೇವೆಗಾಗಿ) ಸಮೀಪಿಸಿದಾಗ, ಅವರನ್ನು ಪಡೆಯಬಹುದು ಎಂದು ನಮ್ಮಾೞ್ವಾರರು ವಿವರಿಸಿದ್ದಾರೆ.

ಪಾಸುರಮ್ 6:
ಆರನೆಯ ಪಾಸುರದಲ್ಲಿ ನಮ್ಮಾೞ್ವಾರರು ಎಂಪೆರುಮಾನರ ಎಲ್ಲರ ಮೇಲಿನ ಸಮಾನತೆಯ ದೃಷ್ಟಿ ಕೋನವನ್ನು ವಿವರಿಸಿದ್ದಾರೆ.

ಪಟ್ಟ್ರಿಲನ್ ಈಶನುಮ್ ಮುಟ್ಟ್ರವುಮ್ ನಿನ್‍ಱನನ್
ಪಟ್ಟ್ರಿಲೈಯಾಯ್ ಅವನ್ ಮುಟ್ಟ್ರಿಲ್ ಅಡಙ್ಗೇ॥


ಸರ್ವೇಶ್ವರನು ತನ್ನ ದಿವ್ಯವಾದ ಧರ್ಮ ಪತ್ನಿಯರೊಂದಿಗಿನ ಮತ್ತು ಯಾವಾಗಲೂ ಅಂಟಿಕೊಂಡಿರುವ ನಿತ್ಯಸೂರಿಗಳಿಂದ ಬೇರ್ಪಡಿಸಿಕೊಂಡವನು. (detached). ಹೊಸದಾಗಿ ಅವನನ್ನು ಸಮೀಪಿಸುತ್ತಿರುವ ನಮ್ಮನ್ನು ಸಮಾನ ದೃಷ್ಟಿಯಿಂದ ನೋಡುವವನು. ನಮ್ಮನ್ನು ಕೂಡಾ, ತನಗಾಗಿ ಬಹಳ ಕಾಲ ಉಳಿಸಿಕೊಳ್ಳಲು , ಪೋಷಿಸಲು ಮತ್ತು ತನಗೆ ಆನಂದವನ್ನು ಕೊಡಲು ಎಂಪೆರುಮಾನರು ಅವಕಾಶ ಕೊಡಲು ನಮ್ಮನ್ನು ಕೂಡಾ ಪರಿಗಣಿಸುತ್ತಾರೆ. ನಾವು ಕೂಡಾ ಲೌಕಿಕ ವಿಷಯಗಳನ್ನು ಬಿಟ್ಟು ಅವನಲ್ಲೇ ಪರಿಪೂರ್ಣವಾಗಿ ಲೀನವಾಗಿ ಅವನ ವಿಶಿಷ್ಟ ಗುಣಗಳಾದ
ಧಾರಕ – ನಮ್ಮನ್ನು ಎತ್ತಿ ಹಿಡಿಯುವ ಗುಣವುಳ್ಳವನು
ಪೋಷಕ – ಪೋಷಿಸುವ ಆರೈಕೆ ಮಾಡುವ ಗುಣವುಳ್ಳವನು
ಭೋಗ್ಯಮ್ – ಆನಂದ ಪಡುವವನು
-ಈ ಗುಣಗಳನ್ನು ನಾವು ಪರಿಗಣಿಸೋಣ.

ಪಾಸುರಮ್ 7:
ಏಳನೆಯ ಪಾಸುರದಲ್ಲಿ ಎಂಪೆರುಮಾನರ ಐಶ್ವರ್‍ಯಗಳಾದ ಉಭಯ ವಿಭೂತಿಗಳನ್ನು,
(ನಿತ್ಯ ವಿಭೂತಿ – ನಿತ್ಯ ಸೂರಿಗಳನ್ನು ಹೊಂದಿರುವವನು ಮತ್ತು
ಲೀಲಾವಿಭೂತಿ – ಲೋಕದ ಜನರನ್ನು ಐಶ್ವರ್‍ಯವಾಗಿ ಹೊಂದಿರುವವನು
ಈ ಎರಡು ವಿಧದ ಐಶ್ವರ್‍ಯಗಳು ಸೇರಿ ಉಭಯ ವಿಭೂತಿಯಾಗುತ್ತದೆ).
ನಾವು ನೋಡಿ, ನಾಚಿ ಹಿಂಜರಿಯದೇ, ಎಂಪೆರುಮಾನರ ಮತ್ತು ಉಭಯ ವಿಭೂತಿಗಳ ಸಂಬಂಧವನ್ನು ನಾವು ಧ್ಯಾನಿಸಬೇಕು. ಮತ್ತು ನಾವೂ ಕೂಡಾ ಎಂಪೆರುಮಾನರ ಈ ಸಕಲ ಐಶ್ವರ್‍ಯದ ಒಂದು ಭಾಗವೆಂದು ನಾವು ಪರಿಗಣಿಸಬೇಕು ಎಂದು ನಮ್ಮಾೞ್ವಾರರು ತಿಳಿಸಿದ್ದಾರೆ.

ಅಡಙ್ಗಿೞಿಲ್ ಶಮ್ಬತ್ತು ಅಡಙ್ಗಕ್ಕಣ್ಡು, ಈಶನ್
ಅಡಙ್ಗಿೞಿಲ್ ಅಃದೆನ್‍ಱು ಅಡಙ್ಗುಹ ಉಳ್ಳೇ॥

ಎಂಪೆರುಮಾನರ ಪರಿಪೂರ್ಣ ಸುಂದರವಾದ ಸಕಲ ಐಶ್ವರ್‍ಯಗಳನ್ನೂ (ಒಂದೇ ಒಂದು ಪದಾರ್ಥವನ್ನೂ ಬಿಡದೇ, ಎಲ್ಲವನ್ನೂ) ಧ್ಯಾನಿಸಿದಾಗ ಮತ್ತು ಎಲ್ಲವೂ ಅವನ ಸ್ವಾಧೀನಕ್ಕೆ ಒಳಪಟ್ಟಿರುವುದನ್ನು ಮತ್ತು ಎಲ್ಲಾ ಐಶ್ವರ್‍ಯಗಳಿಗೂ, ಅವನಿಗೂ ಇರುವ ಸಂಬಂಧವನ್ನು ಅರಿತಾಗ, ನಾವೂ ಆ ಐಶ್ವರ್‍ಯದಲ್ಲಿ ಒಂದು ಭಾಗವಾಗುತ್ತೇವೆ.

ಪಾಸುರಮ್ 8:
ಎಂಟನೆಯ ಪಾಸುರದಲ್ಲಿ ನಮ್ಮಾೞ್ವಾರರು ಭಗವಂತನನ್ನು ಆರಾಧಿಸುವ , ಸೇವೆ ಸಲ್ಲಿಸುವ ವಿಧಾನವನ್ನು ಹೇಳಿಕೊಡುತ್ತಾರೆ.

ಉಳ್ಳಮ್ ಉರೈಶೆಯಲ್ ಉಳ್ಳ ಇಮ್ ಮೂನ್‍ಱೈಯುಮ್
ಉಳ್ಳಿಕ್ಕೆಡುತ್ತು ಇಱೈ ಉಳ್ಳಿಲ್ ಒಡುಙ್ಗೇ॥

ಮೊದಲಿನಿಂದಲೇ ನಮ್ಮ ಜೊತೆಯಲ್ಲಿರುವ ಮತ್ತು ನಮಗೆ ತಕ್ಷಣ ಲಭ್ಯವಿರುವ ಮನಸ್ಸಿನ್ , ಮಾತಿನ ಮತ್ತು ಈ ದೇಹದ ಉದ್ದೇಶವನ್ನು ಅರಿತುಕೊಂಡು , ಲೌಕಿಕ ಆನಂದಗಳ ಜೊತೆ ಇರುವ ಸಂಬಂಧವನ್ನು ಬಿಟ್ಟು, ಪೂರ್ತಿಯಾಗಿ ಭಗವಂತನ ಸೇವೆ ಸಲ್ಲಿಸುವುದೇ ನಮಗೆ ಸೂಕ್ತವಾದ ಕೆಲಸವಾಗಿದೆ.

ಪಾಸುರಮ್ 9:
ನಮ್ಮಾೞ್ವಾರರು ಎಂಪೆರುಮಾನರನ್ನು ಪೂಜಿಸಿ, ಆರಾಧಿಸುವುದರಿಂದ ನಮ್ಮ ತೊಂದರೆಗಳು ಹೇಗೆ ದೂರವಾಗುತ್ತವೆ ಎಂದು ವಿವರಿಸಿದ್ದಾರೆ.

ಒಡುಙ್ಗ ಅವನ್ಕಣ್ ಒಡುಙ್ಗಲುಮ್ ಎಲ್ಲಾಮ್
ವಿಡುಮ್ ಪಿನ್ನುಮ್ ಆಕ್ಕೈ ವಿಡುಮ್ ಪೊೞುದು ಎಣ್ಣೇ॥


ಭಗವಂತನಿಗಾಗಿ ಬೇರೆದೆಲ್ಲವನ್ನೂ ಬಿಟ್ಟು, ಆ ಒಡೆಯನಿಗಾಗಿ ನಮ್ಮನ್ನು ನಾವು ಸಮರ್ಪಿಸಿಕೊಂಡರೆ, ಅವಿದ್ಯಾ (ಅಜ್ಞಾನ) ವು ದೂರವಾಗಿ, ಆತ್ಮದ ಸಂಕುಚಿತ ಮನೋಭಾವವು ನಿವಾರಿಸಲ್ಪಡುತ್ತದೆ. ಇದು ಆದ ನಂತರ, ನಾವು ಎಂಪೆರುಮಾನರಲ್ಲಿ ಶರಣಾಗಿ , ಈ ಜೀವನದ ಕೊನೆಯಲ್ಲಿ ಅವರ ಕೈಂಕರ್‍ಯಗಳನ್ನು ಮಾಡಬಹುದಾಗಿದೆ.

ಪಾಸುರಮ್ 10:
ಹತ್ತನೆಯ ಪಾಸುರದಲ್ಲಿ, ನಮ್ಮಾೞ್ವಾರರು ಎಂಪೆರುಮಾನರ ಪರಿಪೂರ್ಣ ವ್ಯಕ್ತಿತ್ವ ಮತ್ತು ಅವರೇ ಪರಮಗುರಿ ಎಂದು ವಿವರಿಸಿದ್ದಾರೆ.

ಎಣ್ ಪೆರುಕ್ಕು ಅನ್ನಲತ್ತು ಒಣ್ ಪೊರುಳ್ ಈಱಿಲ
ವಣ್ ಪುಗೞ್ ನಾರಣನ್ ತಿಣ್ ಕೞಲ್ ಶೇರೇ॥


ಶ್ರೀಮನ್ನಾರಾಯಣರು ಅಗಣಿತ (ಲೆಕ್ಕವಿಲ್ಲದಷ್ಟು) ಜೀವಾತ್ಮಗಳಿಗೆ ಒಡೆಯರಾದವರು. ಅವರು ಅನಂತ ಮಂಗಳಕರವಾದ ಗುಣಗಳನ್ನು ಹೊಂದಿರುವವರು. ಅಂತಹ ನಾರಾಯಣರ ಸ್ಥಿರವಾದ ಪಾದಕಮಲಗಳಲ್ಲಿ ನಾವು ಶರಣಾಗತಿಯನ್ನು ಹೊಂದಬೇಕು.

ಪಾಸುರಮ್ 11:
ಹನ್ನೊಂದನೆಯ ಪಾಸುರದಲ್ಲಿ ನಮ್ಮಾೞ್ವಾರರು ಈ ಹತ್ತು ಪಾಸುರಗಳು ಇಡೀ ಪ್ರಬಂಧದಲ್ಲಿ ಅತ್ಯಂತ ಪ್ರಶಂಸನೀಯ ಪಾಸುರಗಳಾಗಿವೆ ಎಂದು ಹೇಳುತ್ತಾರೆ.

ಶೇರ್‍‌ತ್ತಡ ತ್ತೆನ್ ಕುರುಹೂರ್ ಚ್ಚಡಗೋಪನ್ ಶೊಲ್
ಶೀರ್‌ತ್ತೊಡೈ ಆಯಿರತ್ತು ಓರ್‌ತ್ತ ಇಪ್ಪತ್ತೇ ॥


ನಮ್ಮಾೞ್ವಾರರು ಅತ್ಯಂತ ಹೇರಳವಾಗಿರುವ ಕೊಳಗಳಿಂದ ತುಂಬಿದ ಸುಂದರ ಆೞ್ವಾರ್‌ತಿರುನಗರಿಯಲ್ಲಿ ಆಶೀರ್ವಾದ ಸಹಿತ ಉಚ್ಛರಿಸಿದ ಈ ಸೊಗಸಾದ ಹತ್ತು ಪಾಸುರಗಳನ್ನ್ನು ಒಟ್ಟು ಸಾವಿರ ಪಾಸುರಗಳನ್ನು ಹೊಂದಿದ ತಿರುವಾಯ್ಮೊೞಿಯು ಒಳಗೊಂಡಿದೆ ಎಂದು ಹೇಳುತ್ತಾರೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/05/thiruvaimozhi-1-2-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org