ಶ್ರೀ: ಶ್ರೀಮತೇ ಶಠಗೋಪಾಯನಮಃ ಶ್ರೀಮತೇ ರಾಮಾನುಜಾಯನಮಃ ಶ್ರೀಮತ್ ವರವರಮುನಯೇ ನಮಃ
<< ಐದನೇ ತಿರುಮೊಳಿ – ಮನ್ನು ಪೆರುಮ್
ಆಂಡಾಳ್ ತನ್ನನ್ನು ಎಂಪೆರುಮಾನ್ ಜೊತೆ ಒಂದಾಗಿಸಲು ಕೋಗಿಲೆಯನ್ನು ಪ್ರಾರ್ಥಿಸಿದಳು. ಅದು ಆಗದ ಕಾರಣ ಅವಳು ತುಂಬಾ ನೊಂದಿದ್ದಳು. ಮತ್ತೊಂದೆಡೆ, ಎಂಪೆರುಮಾನನನು, ಅವಳೊಂದಿಗೆ ಒಂದಾಗಲು, ಅವಳಲ್ಲಿ ತನ್ನ ಮೇಲಿನ ಪ್ರೀತಿ ಮತ್ತಷ್ಟು ಬೆಳೆಯಲು ಕಾಯುತ್ತಿದ್ದನು. ನಮ್ಮಾಳ್ವಾರ್‌ಗೆ ಅವನು ಪ್ರಾರಂಭದಲ್ಲಿಯೇ ಜ್ಞಾನ ಮತ್ತು ಭಕ್ತಿಯನ್ನು ನೀಡಿದ್ದರೂ ಸಹ, ಎಂಪೆರುಮಾನನನು ಅವರನ್ನು ಪರಭಕ್ತಿ (ಎಂಪೆರುಮಾನ್ ಬಗ್ಗೆ ಭಕ್ತಿ) ಮತ್ತು ಪರಜ್ಞಾನ (ಎಂಪೆರುಮಾನನ ಕಲ್ಪನೆ, ಅರಿವು) ಹಂತಗಳ ಮೂಲಕ ಕರೆದೊಯ್ದ ನಂತರವೇ ಅವರಿಗೆ ಪರಮಪದದಲ್ಲಿ ಶಾಶ್ವತ ಸೇವೆಯನ್ನು ನೀಡಿದನು. ಸೀತಾ ದೇವಿಯೂ ಕೂಡ, “ನಾನು ಪೆರುಮಾಳ್ ಆಗಮನಕ್ಕಾಗಿ ಒಂದು ತಿಂಗಳವರೆಗೆ ಕಾಯುತ್ತೇನೆ” ಎಂದು ಹೇಳಿದ್ದರು. ಆದರೆ ಪೆರುಮಾಳ್ “ನಾನು ದೇವಿಯಿಂದ ಒಂದು ಕ್ಷಣವೂ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ” ಎಂದು ಹೇಳಿದ್ದನು. ತ್ರಿಜಡೈಯಂತಹ ಜನರು ಎಂಪೆರುಮಾನ್ ಬಗ್ಗೆ ಒಳ್ಳೆಯ ಕನಸುಗಳನ್ನು ಕಂಡರು ಮತ್ತು ಆ ಕನಸುಗಳ ಬಗ್ಗೆ ಸೀತಾ ದೇವಿಗೆ ಹೇಳಿದರು, ಇದರಿಂದಾಗಿ ಅವಳು ತನ್ನನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಮತ್ತೊಂದೆಡೆ, ಆಂಡಾಳ್ ತನ್ನದೇ ಆದ ಕನಸುಗಳನ್ನು ಕಂಡಾಗ ಮಾತ್ರ ತನ್ನನ್ನು ತಾನು ಉಳಿಸಿಕೊಳ್ಳಬಹುದುದಾಗಿತ್ತು. ಎಮ್ಪೆರುಮಾನ್, ಎಚ್ಚರವಾಗಿದ್ದು, ಜನರು ಮಲಗಿರುವಾಗ ಒಳ್ಳೆಯ ಕನಸುಗಳನ್ನು ನೀಡುವ ಮೂಲಕ ಅವರಿಗೆ ಸಂತೋಷವನ್ನು ನೀಡುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ. ಅದೇ ರೀತಿಯಲ್ಲಿ, ಅವನು ತನ್ನೊಂದಿಗೆ ಅವಳ ಮದುವೆಯ ಬಗ್ಗೆ ಕನಸುಗಳನ್ನು ಕೊಟ್ಟನು, ಇದರಿಂದ ಅವಳು ತನ್ನ ಸ್ನೇಹಿತೆಗೆ ಕನಸುಗಳನ್ನು ವಿವರಿಸುವ ಮೂಲಕ ತನ್ನನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮೊದಲನೇ ಪಾಸುರಂ. ಮೌನವಾಗಿ ಉಳಿಯದೇ, ನಾನು ನಂತರ ಸಂತೋಷಗೊಳ್ಳುವೆ ಎನ್ನುವ ಬದಲು, ಅವಳು ಅವನ ಆಗಮನದ ಬಗ್ಗೆ ಯೋಚಿಸುತ್ತಿದ್ದಾಳೆ, ಅವನು ಬಂದ ಕ್ಷಣದಿಂದಲೇ ಆನಂದ ಹೊಂದಲು.
ವಾರಣಂ ಆಯಿರಂ ಶೂಳ ವಲಂ ಶೆಯ್ದು
ನಾರಣ ನಂಬಿ ನಡಕ್ಕಿನ್ರಾನ್ ಎನ್ರೆದಿರ್
ಪೂರಣ ಪೊರ್ಕುಡಮ್ ವೈತ್ತು ಪುರಮೆಂಗುಂ
ತೋರಣಮ್ ನಾಟ್ಟ ಕನಾ ಕ್ಕಂಡೇನ್ ತೋಳೀ! ನಾನ್
ಓ ನನ್ನ ಪ್ರಿಯ ಸ್ನೇಹಿತೆ! ಎಲ್ಲಾ ಗುಣಗಳಲ್ಲಿಯೂ ಪರಿಪೂರ್ಣನಾದ ಶ್ರೀಮಾನ್ ನಾರಾಯಣನು, ಸಾವಿರ ಆನೆಗಳಿಂದ ಸುತ್ತುವರಿದು , ಸ್ಥಳಕ್ಕೆ ಪ್ರದಕ್ಷಿಣಾಕಾರವಾಗಿ ಬರುತ್ತಿದ್ದಾನೆ. ಬಂಗಾರದ ಪೂರ್ಣ ಕುಂಭಗಳನ್ನು (ಅತಿಥಿಗಳನ್ನು ಸ್ವೀಕರಿಸುವ ಸಾಂಪ್ರದಾಯಿಕ ವಿಧಾನ, ನೀರಿನಿಂದ ಪೂರ್ಣ ತುಂಬಿದ ಚೊಂಬನ್ನು ಮಾವಿನ ಎಲೆಗಳು ಮತ್ತು ತೆಂಗಿನಕಾಯಿಯಿಂದ ಮುಚ್ಚಲಾಗಿರುತ್ತದೆ) ಅವನ ಎದುರು ಇರಿಸಲಾಗಿದೆ. ಇಡೀ ಪಟ್ಟಣವನ್ನು ಕಮಾನುಗಳು ಮತ್ತು ಕಂಬಗಳಿಂದ ಅಲಂಕರಿಸಲಾಗಿದೆ. ನನ್ನ ಕನಸಿನಲ್ಲಿ ನಾನು ಇವೆಲ್ಲವನ್ನೂ ಆನಂದಿಸಿದೆ.
ಎರಡನೇ ಪಾಸುರಂ. ಮದುವೆಯ ಚಪ್ಪರ (ಅಲಂಕೃತ ಮದುವೆಯ ಮೇಲಾವರಣ) ಪ್ರವೇಶಿಸುತ್ತಿರುವ ಕಣ್ಣನನ್ನು ತಾನು ನೋಡಿದೆ ಎಂದು ಅವಳು ಹೇಳುತ್ತಾಳೆ.
ನಾಳೈ ವದುವೈ ಮಣಮ್ ಎನ್ರು ನಾಳ್ ಇಟ್ಟು
ಪಾಳೈ ಕಮುಕು ಪರಿಶುಡೈ ಪಂದಲ್ ಕೀಳ್
ಕೋಳರಿ ಮಾಧವನ್ ಗೋವಿಂದನ್ ಎನ್ಬಾನ್ ಓರ್
ಕಾಳೈ ಪುಗುದ ಕನಾ ಕ್ಕಂಡೇನ್ ತೋಳೀ! ನಾನ್
ಓ ಗೆಳತಿ! ನಾಳೆಯ ಮದುವೆಯ ಶಾಸ್ತ್ರಕ್ಕೆ ಶುಭ ಮುಹೂರ್ತ ನಿಗದಿಯಾಗಿದೆ. ನನ್ನ ಕನಸಿನಲ್ಲಿ, ನರಸಿಂಹನ್, ಮಾಧವನ್, ಗೋವಿಂದನ್ ಎಂಬ ದೈವೀಕ ನಾಮಗಳನ್ನು ಹೊಂದಿರುವ ಯುವಕನೊಬ್ಬ, ಅಡಿಕೆ ಗಿಡದ ಹಣ್ಣಿನ ಕವಚದಿಂದ ಅಲಂಕರಿಸಲ್ಪಟ್ಟಿರುವ ಮದುವೆಯ ಚಪ್ಪರದ ಆವರಣವನ್ನು ಪ್ರವೇಶಿಸುವುದನ್ನು ನಾನು ನೋಡಿದೆ.
ಮೂರನೇ ಪಾಸುರಂ. ಮದುವೆಯ ವಸ್ತ್ರಗಳು ಮತ್ತು ಹಾರವನ್ನು ಧರಿಸಿದ ಅನುಭವವನ್ನು ಅವಳು ಹಂಚಿಕೊಂಡಿದ್ದಾಳೆ.
ಇಂದಿರನ್ ಉಳ್ಳಿಟ್ಟ ದೇವರ್ ಕುಳಾಮ್ ಎಲ್ಲಾಮ್
ವಂದು ಇರುಂದು ಎನ್ನೈ ಮಗಳ್ ಪೇಶಿ ಮನ್ತಿರಿತ್ತು
ಮನ್ದಿರ ಕ್ಕೋಡಿ ಉಡುತ್ತಿ ಮಣಮಾಲೈ
ಅಂದರಿ ಶೂಟ್ಟ ಕನಾ ಕ್ಕಂಡೇನ್ ತೋಳೀ! ನಾನ್
ಓ ಗೆಳತಿ! ಇಂದ್ರ ಮತ್ತು ಇತರ ದೇವರುಗಳು ಇಲ್ಲಿಗೆ ಬಂದು ಮದುವೆಯ ವ್ಯವಸ್ಥೆಗಳ ಬಗ್ಗೆ ವಧುವಾದ ನನ್ನೊಂದಿಗೆ ಚರ್ಚಿಸಿದರು. ನನ್ನ ಕನಸಿನಲ್ಲಿ, ದುರ್ಗೆಯು (ನನ್ನ ಗಂಡನ ಸಹೋದರಿ) ನನ್ನನ್ನು ಮದುವೆಯ ಸೀರೆ ಮತ್ತು ಪರಿಮಳಯುಕ್ತ ಮಾಲೆಗಳನ್ನು ಧರಿಸುವಂತೆ ಮಾಡುವುದನ್ನು ನಾನು ನೋಡಿದೆ.
ನಾಲ್ಕನೆಯ ಪಾಸುರಂ. ಮದುವೆಯ ವಿಧಿ ವಿಧಾನಗಳ ಆರಂಭದಲ್ಲಿ ಮಣಿಕಟ್ಟಿಗೆ ಕಟ್ಟುವ ಪವಿತ್ರ ರಕ್ಷಣಾತ್ಮಕ ಎಳೆಯನ್ನು ಧರಿಸಿದ ಅನುಭವವನ್ನು ಅವಳು ಹಂಚಿಕೊಂಡಿದ್ದಾಳೆ.
ನಾಲ್ ದಿಶೈ ತೀರ್ಥಂ ಕೊಣರ್ನ್ದು ನನಿ ನಲ್ಗಿ
ಪಾರ್ಪನ ಚ್ಚಿಟ್ಟರ್ಗಳ್ ಪಲ್ಲಾರ್ ಎಡುತ್ತೇತ್ತಿ
ಪೂಪ್ಪುನೈ ಕಣ್ಣಿ ಪುನಿದನೋಡು ಎನ್ ತನ್ನೈ
ಕಾಪ್ಪು ನಾಣ್ ಕಟ್ಟ ಕನಾ ಕ್ಕಂಡೇನ್ ತೋಳೀ! ನಾನ್
ಓ ಗೆಳತಿ ! ಅನೇಕ ಹಿರಿಯ ಬ್ರಾಹ್ಮಣರು ನಾಲ್ಕು ದಿಕ್ಕುಗಳಿಂದ ಪವಿತ್ರ ನೀರನ್ನು ತಂದಿರುವುದನ್ನು ನಾನು ನನ್ನ ಕನಸಿನಲ್ಲಿ ನೋಡಿದೆ. ಅವರು ಪವಿತ್ರ ನೀರನ್ನು ಸುತ್ತಲೂ ಚಿಮುಕಿಸಿದರು, ಎತ್ತರದ ಸ್ವರದಲ್ಲಿ ವೇದ ಮಂತ್ರಗಳನ್ನು ಪಠಿಸಿದರು. ಹೂವಿನ ಮಾಲೆಗಳನ್ನು ಹಾಕಿದ್ದ ಎಂಪೆರುಮಾನ್ ಕಣ್ಣನ ಜೊತೆಗೆ ಅವರು ನನ್ನ ಕೈಗೆ ರಕ್ಷಣಾತ್ಮಕ ಎಳೆಯನ್ನು ಕಟ್ಟುತ್ತಿರುವುದನ್ನು ನಾನು ನೋಡಿದೆ.
ಐದನೇ ಪಾಸುರಂ. ಎಂಪೆರುಮಾನನು ಮದುವೆಯ ಸ್ಥಳದ ಆವರಣವನ್ನು ಪ್ರವೇಶಿಸಿದ ಮತ್ತು ದೀಪ ಮತ್ತು ಪೂರ್ಣಕುಂಭದೊಂದಿಗೆ ಅವನನ್ನು ಸ್ವಾಗತಿಸಿದ ಅನುಭವವನ್ನು ಅವಳು ಹಂಚಿಕೊಂಡಿದ್ದಾಳೆ.
ಕದಿರೊಳಿ ದೀಪಮ್ ಕಲಶಮ್ ಉಡನ್ ಏನ್ದಿ
ಶದಿರ್ ಇಳ ಮಂಗೈಯರ್ ತಾಮ್ ವಂದು ಎದಿರ್ಗೊಳ್ಳ
ಮದುರೈಯಾರ್ ಮನ್ನನ್ ಅಡಿನಿಲೈ ತೊಟ್ಟು
ಎಂಗುಮ್ ಅದಿರ ಪ್ಪುಗುದ ಕನಾ ಕ್ಕಂಡೇನ್ ತೋಳೀ! ನಾನ್
ಓ ಗೆಳತಿ! ಸುಂದರ ಯುವತಿಯರು ಸೂರ್ಯನ ಬೆಳಕಿನಂತೆ ಪ್ರಕಾಶಿಸುವ ಮಂಗಳಕರವಾದ ದೀಪಗಳನ್ನು ಮತ್ತು ಚಿನ್ನದ ಕುಂಭಗಳನ್ನು (ಪೂರ್ಣಕುಂಭ) ಹಿಡಿದುಕೊಂಡು ಬಂದು ಉತ್ತರ ಮಧುರೆಯ ರಾಜ ಎಂಪೆರುಮಾನ್ ನನ್ನು ಆಹ್ವಾನಿಸಿದರು. ನನ್ನ ಕನಸಿನಲ್ಲಿ ಅವನು ಪಾದುಕ (ದೈವೀಕ ಪಾದರಕ್ಷೆ) ಧರಿಸಿ ಕರುಣಾಮಯಿಯಾಗಿ ನಡೆಯುತ್ತಿದ್ದನು ಹಾಗೂ ಅವನ ಪಾದಗಳ ಕೆಳಗೆ ಭೂಮಿ ಪ್ರತಿಧ್ವನಿಸುತ್ತಿತ್ತು.
ಆರನೇ ಪಾಸುರಂ. ಎಂಪೆರುಮಾನ್ ಮಧುಸೂದನನು ಪಾಣಿಗ್ರಹಣ (ಅವನ ಕೈಯಿಂದ, ಅವಳ ಕೈಯನ್ನು ಹಿಡಿದುಕೊಂಡು, ಮದುವೆಯನ್ನು ಸಂಕೇತಿಸುವ) ನಡೆಸುವ ಅನುಭವವನ್ನು ಅವಳು ಹಂಚಿಕೊಳ್ಳುತ್ತಾಳೆ.
ಮತ್ತಳಂ ಕೊಟ್ಟ ವರಿಶಂಗಂ ನಿನ್ರು ಊದ
ಮುತ್ತುಡೈ ತಾಮಮ್ ನಿರೈ ತಾಳ್ನ್ದ ಪಂದಲ್ ಕೀಳ್
ಮೈತ್ತುನನ್ ನಂಬಿ ಮಧುಸೂದನ್ ವಂದು
ಎನ್ನೈ ಕೈ ತಲಮ್ ಪತ್ತ ಕನಾ ಕ್ಕಂಡೇನ್ ತೋಳೀ! ನಾನ್
ಓ ಗೆಳತಿ! ಮಧುಸೂದನನು (ಎಂಪೆರುಮಾನ್) ಎಲ್ಲಾ ಮಂಗಳಕರ ಗುಣಗಳ ಸಂಪೂರ್ಣತೆಯನ್ನು ಹೊಂದಿದ್ದಾನೆ. ನನ್ನ ಕನಸಿನಲ್ಲಿ ನನ್ನ ಅತ್ತೆಯ ಮಗ (ಮಧುಸೂದನ) ನನ್ನ ಕೈಯನ್ನು ಕೈಯಲ್ಲಿ ಹಿಡಿದು ಪಾಣಿಗ್ರಹಣವನ್ನು ಮಾಡಿಕೊಂಡು, ನನ್ನನ್ನು ಮದುವೆಯಾಗಲು ಹೊರಟಿದ್ದನು.
ಏಳನೇ ಪಾಸುರಂ. ಅವಳು ಎಂಪೆರುಮಾನ್ ಜೊತೆಗೆ ಅಗ್ನಿ (ಸಂಪ್ರದಾಯದ ಅಗ್ನಿ) ಪ್ರದಕ್ಷಿಣೆ ಮಾಡುವ ಅನುಭವವನ್ನು ಹಂಚಿಕೊಳ್ಳುತ್ತಾಳೆ.
ವಾಯ್ ನಲ್ಲಾರ್ ನಲ್ಲ ಮರೈ ಓದಿ ಮನ್ತಿರತ್ತಾಲ್
ಪಾಶಿಲೈ ನಾಣಲ್ ಪಡುತ್ತು ಪರಿದಿ ವೈತ್ತು
ಕಾಯ್ಶಿನಂ ಮಾ ಕಳಿರು ಅನ್ನಾನ್ ಎನ್ ಕೈ ಪತ್ತಿ
ತೀ ವಲಮ್ ಶೆಯ್ಯ ಕನಾ ಕ್ಕಂಡೇನ್ ತೋಳೀ! ನಾನ್
ಓ ಗೆಳತಿ! ಮುತ್ತುಗಳಿಂದ ಮಾಡಿದ ಮಾಲೆಗಳಿಂದ ಅಲಂಕರಿಸಲ್ಪಟ್ಟ ಮದುವೆಯ ಚಪ್ಪರದ ಕೆಳಗೆ ವೇದಪಾರಂಗತರು ಸರಿಯಾದ ಉಚ್ಚಾರಣೆಯೊಂದಿಗೆ ಶ್ರೇಷ್ಠ ವೇದ ಮಂತ್ರಗಳನ್ನು ಪಠಿಸುತ್ತಿದ್ದರು. ಅವರು ಹಸಿರು ಎಲೆಗಳ ಪವಿತ್ರ ಧರ್ಬೆಗಳನ್ನು ಹರಡುತ್ತಾರೆ ಮತ್ತು ಸಮಿತ್ತುಗಳೊಂದಿಗೆ ಅಗ್ನಿ (ಬೆಂಕಿ) ಅನ್ನು ಪೋಷಿಸುತ್ತಾರೆ. ನನ್ನ ಕನಸಿನಲ್ಲಿ ಕಣ್ಣನ್ ಎಂಪೆರುಮಾನ್, ಕಾಡಾನೆಯಂತೆ ಸಂಭ್ರಮದಿಂದ ನನ್ನ ಕೈ ಹಿಡಿದುಕೊಂಡು ಅಗ್ನಿ ಪ್ರದಕ್ಷಿಣೆ ಮಾಡುವುದನ್ನು ಕಂಡೆ.
ಎಂಟನೆಯ ಪಾಸುರಂ. ಎಂಪೆರುಮಾನ್ ಸನ್ನಿಧಿಯಲ್ಲಿ ವಧುವಿನ ದೃಢತೆಯ ಪ್ರತೀಕವಾಗಿ ಮದುವೆಗಳಲ್ಲಿ ಬಳಸಲಾಗುವ ಅಮ್ಮಿಯ (ಅರೆಯಲು ಬಳಸುವ ಸಮತಲವಾದ ಕಲ್ಲು, ಸಂಕಟದ ಸಮಯದಲ್ಲಿ ವಧುವಿಗೆ ಇರಬೇಕಾದ ಕಲ್ಲು ಮನದ ರೀತಿ) ಮೇಲೆ ಹೆಜ್ಜೆ ಹಾಕುವ ಅನುಭವವನ್ನು ಅವರು ಹಂಚಿಕೊಳ್ಳುತ್ತಾರೆ.
ಇಮ್ಮೈಕ್ಕುಮ್ ಏಳೇಳ್ ಪಿರವಿಕ್ಕುಮ್ ಪತ್ತಾವಾನ್
ನಮ್ಮೈ ಉಡೈಯವನ್ ನಾರಾಯಣನ್ ನಂಬಿ
ಶೆಮ್ಮೈಯುಡೈಯ ತಿರುಕ್ಕೈಯಾಲ್ ತಾಳ್ ಪತ್ತಿ
ಅಮ್ಮಿ ಮಿದಿಕ್ಕ ಕನಾ ಕ್ಕಂಡೇನ್ ತೋಳೀ! ನಾನ್
ಓ ಗೆಳತಿ! ಎಂಪೆರುಮಾನ್ ಈಜನ್ಮದಲ್ಲಿ ಮತ್ತು ಮುಂದಿನ ಎಲ್ಲಾ ಜನ್ಮಗಳಲ್ಲಿ ನಮಗೆ ಆಶ್ರಯವಾಗಿದ್ದಾನೆ. ಅವನು ನಮ್ಮ ಪ್ರಭು, ಎಲ್ಲಾ ಮಂಗಳಕರ ಗುಣಗಳಲ್ಲಿ ಸಂಪೂರ್ಣನು. ಆ ನಾರಾಯಣ, ಕಣ್ಣನ್ ಎಂಪೆರುಮಾನ್, ತನ್ನ
ಮಹಾನ್ ದಿವ್ಯ ಹಸ್ತದಿಂದ (ಅವನು ತನ್ನ ಅನುಯಾಯಿಯ ಪಾದಗಳನ್ನೂ ಸಹ ಹಿಡಿದಿಟ್ಟುಕೊಳ್ಳುತ್ತಾನೆ), ನನ್ನ ಪಾದವನ್ನು ಹಿಡಿದು ಅಮ್ಮಿಯ ಮೇಲೆ ಇಡುವುದನ್ನು ನಾನು ಕನಸಿನಲ್ಲಿ ಕಂಡೆನು.
ಒಂಭತ್ತನೇ ಪಾಸುರಂ. ಲಾಜ ಹೋಮವನ್ನು (ಅಗ್ನಿಗೆ ಪುರಿಯನ್ನು ಅರ್ಪಿಸುವ ಆಚರಣೆ) ನಡೆಸುವ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.
ವರಿಶಿಲೈ ವಾಳ್ ಮುಗತ್ತು ಎನ್ ಐಮಾರ್ ತಾಮ್ ವಂದಿಟ್ಟು
ಎರಿ ಮುಗಮ್ ಪಾರಿತ್ತು ಎನ್ನೈ ಮುನ್ನೇ ನಿರುತ್ತಿ
ಅರಿಮುಗನ್ ಅಚ್ಚುತನ್ ಕೈ ಮೇಲ್ ಎನ್ ಕೈ ವೈತ್ತು
ಪೊರಿ ಮುಗಂದು ಅಟ್ಟ ಕನಾ ಕ್ಕಂಡೇನ್ ತೋಳೀ! ನಾನ್
ಓ ಗೆಳತಿ! ಧನುಸ್ಸನ್ನು ಹೋಲುವ ಹುಬ್ಬುಗಳನ್ನು ಹೊಂದಿರುವ ಮತ್ತು ಕಾಂತಿಯುತವಾದ ಮುಖಗಳನ್ನು ಹೊಂದಿರುವ ನನ್ನ ಸಹೋದರರನ್ನು ನಾನು ಕನಸಿನಲ್ಲಿ ನೋಡಿದೆನು, ಅವರು ಅಗ್ನಿಯನ್ನು ಪೋಷಿಸುತ್ತಿದ್ದರು ಮತ್ತು ನನ್ನನ್ನು ಅಗ್ನಿಯ ಮುಂದೆ ನಿಲ್ಲುವಂತೆ ಮಾಡಿದರು. ಅವರು ಭವ್ಯವಾದ ಸಿಂಹದಂತಹ ಮುಖವನ್ನು ಹೊಂದಿರುವ ಎಂಪೆರುಮಾನ್ ಅಚ್ಯುತನ ದಿವ್ಯ ಹಸ್ತದ ಮೇಲೆ ನನ್ನ ಕೈಯನ್ನು ಇರಿಸುವುದನ್ನು ಮತ್ತು ನನ್ನ ಕೈಯಲ್ಲಿ ಪುರಿಯನ್ನು(ಅಗ್ನಿಗೆ ಅರ್ಪಿಸಲು) ಸೇರಿಸುವುದನ್ನು ನಾನು ನೋಡಿದೆ.
ಹತ್ತನೇ ಪಾಸುರಂ. ಅವಳು ಎಂಪೆರುಮಾನ್ ಜೊತೆಗೆ ಆನೆಯ ಮೇಲೆ ಕುಳಿತು ಸುತ್ತಾಡುವ ಅನುಭವವನ್ನು, ಮತ್ತು ಇತರರು ಪರಿಮಳಯುಕ್ತ ನೀರಿನಲ್ಲಿ ಸ್ನಾನ ಮಾಡಿ ಸುವ ಅನುಭವನನ್ನು ಹಂಚಿಕೊಳ್ಳುತ್ತಾಳೆ.
ಕುಂಗುಮಮ್ ಅಪ್ಪಿ ಕುಳಿರ್ ಶಾಂದಂ ಮಟ್ಟಿತ್ತು
ಮಂಗಲ ವೀದಿ ವಲಂ ಶೆಯ್ದು ಮಣನೀರ್
ಅಂಗವನೋಡುಮ್ ಉಡನ್ ಶೆನ್ರು ಅಂಗಾನೈ ಮೇಲ್
ಮಂಜನಂ ಆಟ್ಟ ಕನಾ ಕ್ಕಂಡೇನ್ ತೋಳೀ! ನಾನ್
ಓ ಗೆಳತಿ! ನನ್ನ ಕನಸಿನಲ್ಲಿ ಕುಂಕುಮವನ್ನು ದೇಹದ ಮೇಲೆ ಪೂಸಲಾಗಿದೆ ಎಂದು ನಾನು ನೋಡಿದೆ; ತಣ್ಣನೆಯ ಶ್ರೀಗಂಧದ ದ್ರವ್ಯವನ್ನು ಸಹ ಲೇಪಿಸಲಾಗಿದೆ; ಎಂಪೆರುಮಾನ್ ಮತ್ತು ನಾನು ಆನೆಯ ಮೇಲೆ ಅಲಂಕರಿಸಿದ ಬೀದಿಗಳಲ್ಲಿ ಪಟ್ಟಣವನ್ನು ಸುತ್ತಿದೆವು. ನಾವಿಬ್ಬರು ಪರಿಮಳಯುಕ್ತ ನೀರಿನಿಂದ ಸ್ನಾನ ಮಾಡುವುದನ್ನು ನಾನು ನೋಡಿದೆ.
ಹನ್ನೊಂದನೇ ಪಾಸುರಂ. ಪಠಿಸುವವರಿಗೆ ಸಿಗುವ ಫಲವನ್ನು ತಿಳಿಸುವ ಮೂಲಕ ಅವಳು ಈ ಪದಿಗವನ್ನು ಪೂರ್ಣಗೊಳಿಸುತ್ತಾಳೆ.
ಆಯನುಕ್ಕಾಗ ತಾನ್ ಕಂಡ ಕನಾವಿನೈ
ವೇಯರ್ ಪುಗಳ್ ವಿಲ್ಲಿಪುತ್ತೂರ್ ಕೋನ್ ಕೋದೈ ಶೊಲ್
ತೂಯ ತಮಿಳ್ ಮಾಲೈ ಈರೈನ್ದುಮ್ ವಲ್ಲವರ್
ವಾಯುಮ್ ನಲ್ ಮಕ್ಕಳೈ ಪೆಟ್ರು ಮಗಿಳ್ವರೇ
ಪೆರಿಯಾಳ್ವಾರ್ ಅವರನ್ನು ಬ್ರಾಹ್ಮಣರ ಕುಲದಲ್ಲಿ ಜನಿಸಿದವರು ಸ್ತುತಿಸುತ್ತಾರೆ. ಅವರು ಶ್ರೀವಿಲ್ಲಿಪುತ್ತೂರಿನ ನಾಯಕ. ಪೆರಿಯಾಳ್ವಾರ್ ಅವರ ಮಗಳಾದ ಆಂಡಾಳ್ ಅವರು ಕರುಣಾಮಯವಾಗಿ ಎಂಪೆರುಮಾನ್ ಕಣ್ಣ್ಣನ್ ತನ್ನ ಕನಸಿನಲ್ಲಿ ಕಂಡಂತೆ ವಿವಾಹದಲ್ಲಿ ಅವಳನ್ನು ಹೇಗೆ ಪಡೆದರು ಎಂಬುದನ್ನು ವಿವರಿಸಿ ರಚಿಸಿದ್ದಾರೆ. ಈ ಪದಿಗವನ್ನು ಕಲಿಯುವವರು ಪೆರಿಯಾಳ್ವಾರ್ ಅವರಂತಹ, ಎಂಪೆರುಮಾನ್ಗೆ ಸಂಬಂಧಿಸಿದ ವಿಷಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮತ್ತು ಶ್ರೇಷ್ಠ ಗುಣಗಳನ್ನು ಹೊಂದಿರುವ ಮಕ್ಕಳನ್ನು ಪಡೆಯುವರು ಹಾಗೂ ಶಾಶ್ವತವಾಗಿ ಸಂತೋಷವನ್ನು ಪಡೆಯುವರು.
ಅಡಿಯೇನ್ ಯತಿರಾಜ ರಾಮಾನುಜ ದಾಸನ್
ಮೂಲ: https://divyaprabandham.koyil.org/index.php/2020/05/nachchiyar-thirumozhi-6-simple/
ಸಂಗ್ರಹಣಾ ಸ್ಥಾನ https://divyaprabandham.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – http://granthams.koyil.org
ಪ್ರಮಾಥಾ (ಆಚಾರ್ಯ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ತಾಣ – http://pillai.koyil.org