ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ
ಶ್ರೀಃ ಯ ಪತಿಯಾದ ಸರ್ವೇಶ್ವರನು ಅತ್ಯಂತ ಕರುಣೆಯಿಂದ ಈ ಭೂಮಿಯ ಆತ್ಮಗಳಿಗಾಗಿ , ಇಲ್ಲಿಗೇ ಇಳಿದು ಬಂದು ಅರ್ಚ್ಚಾವತಾರದಲ್ಲಿ ಎಲ್ಲರಿಗಾಗಿ ಕಾಯುತ್ತಿರುವನು. ಈ ಆತ್ಮಗಳು ಸರ್ವೇಶ್ವರನು ನಿಯಮಿಸಿದ ದೇವತೆಗಳ ಹತ್ತಿರ ಹೋಗುತ್ತಿವೆ. ಅದನ್ನು ನೋಡಿ ಆೞ್ವಾರರು ಸರ್ವೇಶ್ವರನ ಅಧಿಪತ್ಯವನ್ನು ವಿವರವಾಗಿ ತಿಳಿಸಿದ್ದಾರೆ. ಆ ಆತ್ಮಗಳನ್ನು ಒಳ್ಳೆಯದಕ್ಕಾಗಿ ಬದಲಿಸಿ ಪರಮಾನಂದವಾಗಿದ್ದಾರೆ. ಆೞ್ವಾರರು ಎಂಪೆರುಮಾನರ ಅರ್ಚ್ಚ್ಯಾವತಾರದಲ್ಲಿರುವ ಅಧಿಪತ್ಯವನ್ನು ಬಹಿರಂಗಪಡಿಸಿದ್ದಾರೆ. ಈ ದಿವ್ಯದೇಶವು ಆೞ್ವಾರರ ಹುಟ್ಟಿದ ಸ್ಥಳವಾಗಿರುವುದರಿಂದ ಅೞ್ವಾರರಿಗೆ ಎಂಪೆರುಮಾನರ ಮೇಲೆ ಒಂದು ವಿಶೇಷವಾದ ಅನುಬಂಧವನ್ನು ಇಲ್ಲಿ ಕಾಣಬಹುದಾಗಿದೆ.
ಮೊದಲನೆಯ ಪಾಸುರಮ್:
ಆೞ್ವಾರರು ಎಂಪೆರುಮಾನರ ಸರಳ, ಸಹಜ ಸ್ವಭಾವದಿಂದ ಈ ಲೋಕದ ಜನರನ್ನು ಕೇಳುತ್ತಾರೆ. “ಸರ್ವೇಶ್ವರನು ಇಲ್ಲಿರುವ ಎಲ್ಲಾದಕ್ಕೂ ಕಾರಣನಾಗಿರುವಾಗ ನೀನು ಬೇರೆ ಯಾವ ದೇವತೆಯನ್ನು ಹುಡುಕುತ್ತಿರುವೆ?”
ಒನ್‍ಱುಮ್ ತೇವುಮ್ ಉಲಗುಮ್ ಉಯಿರುಮ್ ಮಟ್ಟ್ರುಮ್ ಯಾದುಮ್ ಇಲ್ಲಾ
ಅನ್‍ಱು ನಾನ್ಮುಗನ್ ತನ್ನೊಡು ತೇವರ್ ಉಲಗೋಡು ಉಯಿರ್ ಪಡೈತ್ತಾನ್
ಕುನ್‍ಱುಮ್ ಪೋಲ್ ಮಣಿಮಾಡ ನೀಡು ತಿರುಕ್ಕುರುಗೂರ್ ಅದನುಳ್
ನಿನ್‍ಱ ಆದಿಪ್ಪಿರಾನ್ ನಿಱ್ಕ ಮಟ್ಟ್ರೈ ತೆಯ್‍ವಮ್ ನಾಡುದಿರೇ॥
ಎಲ್ಲಾ ಲೋಕಗಳೂ ಅದರ ಜೀವಿಗಳೂ ಸಮಸ್ತ ಸೃಷ್ಟಿಯೇ ಪ್ರಳಯ ಕಾಲದಲ್ಲಿ ಭಗವಂತನಲ್ಲಿ ಐಕ್ಯವಾಯಿತು. ಆಗ ಎಂಪೆರುಮಾನರು ಬ್ರಹ್ಮನನ್ನು ಸಮಷ್ಟಿ ಪುರುಷನೆಂದು ಸೃಷ್ಟಿಸಿದರು. ದೇವತೆಗಳನ್ನೂ ಅವರವರ ಲೋಕಗಳನ್ನೂ ಇತರ ಜೀವರಾಶಿಗಳನ್ನೂ ಸೃಷ್ಟಿಸಿದರು. ಅಂತಹ ಎಂಪೆರುಮಾನರೇ ಆೞ್ವಾರ್ ತಿರುನಗರಿಯಲ್ಲಿದ್ದಾರೆ. ಅಲ್ಲಿ ಎತ್ತರವಾದ, ಪರ್ವತದಂತಹ ದೊಡ್ಡ ದೊಡ್ಡ ಅರಮನೆಗಳು, ವಸತಿಗೃಹಗಳಿವೆ. ಎಂಪೆರುಮಾನರೇ ಅನಂತ ಸೃಷ್ಟಿಗೂ ಕಾರಣವಾದವರು ಮತ್ತು ಪೋಷಕರಾದವರು. ಅವರನ್ನು ಬಿಟ್ಟು ಸೃಷ್ಟಿ ಮತ್ತು ನಾಶಕ್ಕೊಳಪಡುವ ಮತ್ತಿತರ ದೇವತೆಗಳನ್ನು ನೀನು ಪೂಜಿಸುತ್ತಿದ್ದೀಯ.
ಎರಡನೆಯ ಪಾಸುರಮ್:
ಎಂಪೆರುಮಾನರು ಸೃಷ್ಟಿಸಿದವರೊಂದಿಗೆ ಆೞ್ವಾರರು ಹೇಳುತ್ತಾರೆ “ ನೀವು ಮತ್ತು ನೀವು ಪೂಜಿಸುವ ದೇವತೆಗಳು ಎಲ್ಲಾ ಸಮಾನರು. ಏಕೆಂದರೆ ನಿಮ್ಮನ್ನು, ದೇವತೆಗಳನ್ನು ಸೃಷ್ಟಿಸಿರುವ ಭಗವಂತನೊಬ್ಬನೆ. ಆದ್ದರಿಂದ ನೀವು ತಿರುನಗರಿಯಲ್ಲಿ ಕರುಣೆಯಿಂದ ನಿಂತಿರುವ ಸರ್ವೇಶ್ವರನಿಗೆ ಶರಣಾಗಿ.
ನಾಡಿ ನೀರ್ ವಣಙ್ಗುಮ್ ತೆಯ್‍ವಮುಮ್ ಉಮ್ಮೈಯುಮ್ ಮುನ್ ಪಡೈತ್ತಾನ್
ವೀಡಿಲ್ ಶೀರ್ ಪುಗೞ್ ಆದಿಪ್ಪಿರಾನವನ್ ಮೇವಿ ಉಱೈಕೋಯಿಲ್
ಮಾಡ ಮಾಳಿಗೈ ಶೂೞ್‍ನ್ದು ಅೞಗಾಯ ತಿರುಕ್ಕುರುಗೂರ್ ಅದನೈ
ಪಾಡಿ ಆಡಿ ಪ್ಪರವಿ ಚೆನ್ಮಿನ್ಗಳ್ ಪಲ್ ಉಲಗೀರ್ ಪರನ್ದೇ॥
ಸರ್ವೇಶ್ವರನು, ಪೋಷಕನಾದ ಎಂಪೆರುಮಾನರು ಈ ಸಕಲ ಸೃಷ್ಟಿಯನ್ನೂ, ನಿನ್ನನ್ನೂ ಒಳಗೊಂಡು, ಸಕಲ ದೇವತೆಗಳನ್ನೂ ಸೃಷ್ಟಿಸಿರುತ್ತಾರೆ. ಅವರಿಗೆ ನಿರಂತರವಾದ ಕಲ್ಯಾಣ ಗುಣಗಳಾದ ಜ್ಞಾನ , ಶಕ್ತಿ ಮುಂತಾದುವುಗಳು ಇರುತ್ತವೆ. ಅಂತಹ ಎಂಪೆರುಮಾನರೇ ಅನೇಕ ಅರಮನೆಗಳೂ, ಬಂಗಲೆಗಳಿಂದ ಕೂಡಿದ ತಿರುನಗರಿಯಲ್ಲಿ ಸ್ಥಾಪಿಸಲ್ಪಟ್ಟಿರುತ್ತಾರೆ. ಓಹ್! ಅನೇಕ ಲೋಕಗಳಲ್ಲಿ ವಾಸವಾಗಿರುವ ಜನಗಳೇ! ಇಂತಹ ಎಂಪೆರುಮಾನರಿಗಾಗಿ ಹಾಡಿ, ಆಡಿ, ನೃತ್ಯ ಮಾಡಿ, ಹೊಗಳಿ ಕೊಂಡಾಡಿರಿ.
ಮೂರನೆಯ ಪಾಸುರಮ್:
ಆೞ್ವಾರರು ಹೇಳುತ್ತಾರೆ , ಈ ಬ್ರಹ್ಮಾಂಡದ ರಕ್ಷಣೆಗಾಗಿ ಮತ್ತು ಆ ರಕ್ಷಣೆಯ ಮೂಲ ಕಾರಣವಾಗಿರುವುದು – ಇದು ಪರಮಾತ್ಮನ ಅಧಿಪತ್ಯಕ್ಕೆ ಸಾಕ್ಷಿಯಾಗಿದೆ.
ಪರನ್ದ ತೆಯ್‍ವಮುಮ್ ಪಲ್ ಉಲಗುಮ್ ಪಡೈತ್ತು ಅನ್‍ಱುಡನೇ ವಿೞುಙ್ಗಿ
ಕರನ್ದು ಮಿೞ್‍ನ್ದು ಕಡನ್ದಿಡನ್ದು ಕಣ್ಡುಮ್ ತೆಳಿಯಕಿಲ್ಲೀರ್,
ಶಿರಙ್ಗಳಾಲ್ ಅಮರರ್ ವಣಙ್ಗುಮ್ ತಿರುಕ್ಕುರುಗೂರ್ ಅದನುಳ್
ಪರನ್ ತಿಱಮನ್‍ಱಿ ಪ್ಪಲ್ ಉಲಗೀರ್ ತೆಯ್‍ವಮ್ ಮಟ್ಟ್ರಿಲ್ಲೈ ಪೇಶುಮಿನೇ॥
ಎಂಪೆರುಮಾನರು ಅನೇಕ ವಿವಿಧ ದೇವತೆಗಳನ್ನೂ ಮತ್ತು ಅವರಿಗಾಗಿ ಅನೇಕ ಲೋಕಗಳನ್ನೂ ಸೃಷ್ಟಿಸಿದ್ದಾರೆ. ಎಲ್ಲಾ ಲೋಕಗಳನ್ನೂ ಪ್ರಳಯದ ವೇಳೆಯಲ್ಲಿ ಸಕಲವನ್ನೂ ನುಂಗಿಬಿಟ್ಟು, ಪ್ರಳಯದ ನಂತರ ಅವುಗಳನ್ನು ಹೊರಗೆ ಉಗುಳಿ, ಪ್ರಳಯದ ಸಮಯದಲ್ಲಿ ತಾನೇ ಅದರ ರಕ್ಷಕನಾಗಿ, ಇವುಗಳನ್ನು ಮಾಡಿದ್ದರಿಂದ ನಾವು ಆ ಸಮಯದಲ್ಲಿ ಇಲ್ಲದ್ದರಿಂದ ನಮಗೆ ಸರಿಯಾಗಿ ತಿಳಿದಿಲ್ಲ. ಒಂದೇ ಒಂದು ದೇವತೆಯೂ ಪ್ರಳಯದ ಸಮಯದಲ್ಲಿ ಉಳಿದಿಲ್ಲ. ಆ ತಿರುನಗರಿಯಲ್ಲಿ ನಿಂತಿರುವ ಸರ್ವೇಶ್ವರನ ಹೊರತು ಯಾರೂ ಹೆಚ್ಚವರಿಲ್ಲ. ಎಲ್ಲಾ ದೇವತೆಗಳಿಂದಲೂ ಬಾಗಿ ನಮಸ್ಕರಿಸಲ್ಪಡುತ್ತಾನೆ. ಪೂಜಿಸಲ್ಪಡುತ್ತಾನೆ. ಓ! ಎಲ್ಲಾ ಲೋಕದ ಜನಗಳೇ! ಈ ರೀತಿಯ ಇನ್ನೊಂದು ದೇವತೆಯನ್ನು ಕಂಡಿದ್ದರೆ ಹೇಳಿ. (ಇನ್ನೊಂದು ದೇವತೆಯು ಇರಲು ಸಾಧ್ಯವಿಲ್ಲ ಎಂದು ಆೞ್ವಾರರು ಸಮರ್ಥಿಸುತ್ತಾರೆ.)
ನಾಲ್ಕನೆಯ ಪಾಸುರಮ್:
ಆೞ್ವಾರರು ಕೇಳುತ್ತಾರೆ “ಕಲ್ಮಶವಿಲ್ಲದ ಸಕಲವೇದಗಳು ತಿಳಿಸಿರುವ ಎಂಪೆರುಮಾನರ ಅಧಿಪತ್ಯವನ್ನು ನಿರಾಕರಿಸಿ, ಬೇರೆ ದೇವತೆಗಳ ನಾಯಕನಾಗಿರುವ ಶಿವನನ್ನು ಅಧಿಪತಿ ಎಂದು ಸ್ವೀಕರಿಸುವ ಗೊಂದಲವೇಕೆ? ಎಂದು ಆೞ್ವಾರರು ಆ ಗೊಂದಲವನ್ನು ನಿವಾರಿಸುತ್ತಾರೆ.
ಪೇಶನಿನ್‍ಱ ಶಿವನುಕ್ಕುಮ್ ಪಿರಮನ್ ತನಕ್ಕುಮ್ ಪಿಱರ್ಕ್ಕುಮ್
ನಾಯಕನ್ ಅವನೇ, ಕಪಾಲ ನನ್ಮೋಕ್ಕತ್ತು ಕ್ಕಣ್ಡುಕೊಣ್ಮಿನ್
ತೇಶಮಾಮದಿಳ್ ಶೂೞ್‍ನ್ದ ಅೞಗಾಯ ತಿರುಕ್ಕುರುಗೂರ್ ಅದನುಳ್
ಈಶನ್ಬಾಲ್ ಓರವಮ್ ಪಱೈದಲ್ ಎನ್ನಾವದು ಇಲಿಙ್ಗಿಯರ್ಕ್ಕೇ॥
ನಾಯಕನೆಂದು ಕರೆಯಲ್ಪಡುವ ರುದ್ರರಿಗೇ ಇರುವ ಒಂದೇ ದೈವವೆಂದರೆ ಸರ್ವೇಶ್ವರನು.(ಶ್ರೀಮನ್ನಾರಾಯಣರು). ಬ್ರಹ್ಮನಿಗೂ ಅನೇಕ ಬೇರೆಯ ದೇವತೆಗಳಿಗೂ ಇರುವ ಏಕೈಕ ದೈವ. ಮಹಾಭಾರತ ಪುರಾಣದಲ್ಲಿ ರುದ್ರಾ ಕೈಯಲ್ಲಿರುವ ಕಪಾಲವನ್ನು ನಿವಾರಿಸಿಬಿಟ್ಟರು. ಲಿಂಗಪುರಾಣವನ್ನು ಪ್ರಮಾಣವೆಂದು ಅರ್ಥೈಸಿಕೊಂಡ ಅನುಮಾನಿಕೆಯರಂತೆ ಆಗಬೇಡಿ. ಸಹಜವಾಗಿ ನಾಯಕರಾದ ಸರ್ವೇಶ್ವರನು ನಾಯಕನಲ್ಲ ಎಂಬ ಕೀಳಾದ ಮಾತನ್ನು ಹೇಳಬೇಡಿ. ಅವರು ಎತ್ತರವಾದ ಕೋಟೆಗಳಿಂದ ಆವರಿಸಲ್ಪಟ್ಟ ತಿರುನಗರಿಯಲ್ಲಿ ಹೊಳೆಯುವ ತಿರುಮೇನಿಯನ್ನು ಹೊಂದಿ ನಿಂತಿದ್ದಾರೆ.
ಐದನೆಯ ಪಾಸುರಮ್:
ವೇದವನ್ನು ತಪ್ಪಾಗಿ ಅರ್ಥೈಸಿಕೊಂಡವರ ಬಾಹ್ಯ ಮತ್ತು ಕುದೃಷ್ಟಿಯನ್ನು ನಿವಾರಿಸಲು ಆೞ್ವಾರರು ತಿರುನಗರಿಯಲ್ಲಿ ವಾಸವಾಗಿರುವ ಎಂಪೆರುಮಾನರ ಸರ್ವ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.
ಇಲಿಙ್ಗತ್ತಿಟ್ಟ ಪುರಾಣತ್ತೀರುಮ್ ಶಮಣರುಮ್ ಶಾಕ್ಕಿಯರುಮ್
ವಲಿನ್ದು ವಾದುಶೆಯ್‍ವೀರ್ಗಳುಮ್ ಮಟ್ಟ್ರುಮ್ ನುಮ್ ತೆಯ್‍ವಮುಮ್ ಆಗಿ ನಿನ್‍ಱಾನ್
ಮಲಿನ್ದು ಶೆನ್ನೆಲ್ ಕವರಿ ವೀಶುಮ್ ತಿರುಕ್ಕುರುಗೂರದನುಳ್
ಪೊಲಿನ್ದು ನಿನ್‍ಱ ಪಿರಾನ್ ಕಣ್ಡೀರ್ ಒನ್‍ರುಮ್ ಪೊಯ್ಯಿಲ್ಲೈ ಪೋಟ್ಟ್ರುಮಿನೇ॥
ನೀವು ತಾಮಸ ಪುರಾಣಕ್ಕೆ(ಅಜ್ಞಾನಕ್ಕೆ) ನಿಷ್ಠಾವಂತರಾಗಿರುವುದರಿಂದ ನೀವೆಲ್ಲ ಕುದೃಷ್ಟಿಗಳು. ವೈಷೇಶಿಕಗಳೇ, ಜೈನರೇ, ಬೌದ್ಧರೇ ನೀವೆಲ್ಲಾ ಬರೀ ಒಣಗಿದ ಚರ್ಚೆಯಲ್ಲೇ ಮುಳುಗಿದ್ದೀರ. ಎಂಪೆರುಮಾನರನ್ನೇ ಗುರಿಯಾಗಿ ಇಟ್ಟುಕೊಂಡ ದೇವತೆಗಳನ್ನು ಮೇಲೇರಿಸಲು ಅವರು ತಿರುನಗರಿಯಲ್ಲಿ ನಿಂತಿದ್ದಾರೆ. ಅಲ್ಲಿ ಭತ್ತದ ಹಸಿ ತೆನೆಗಳು ಅತ್ಯಂತ ಸುಲಭವಾಗಿ ಲಭ್ಯವಾಗುತ್ತದೆ. ಅಲ್ಲಿ ತೆನೆಗಳು ಚಾಮರದಂತೆ ಪರಿಪೂರ್ಣವಾಗಿ ತೂಗುತ್ತದೆ . ಸರ್ವೇಶ್ವರನ ಹಾಗೆಯೇ, ಇದರಲ್ಲಿ ಯಾವ ಕುಂದು ಕೊರತೆ , ಸುಳ್ಳೂ ಇಲ್ಲ. ಹಾಗಾಗಿ ನೀನೂ ಅವರನ್ನು ಹಾಡಿ ಹೊಗಳು ಎಂದು ಆೞ್ವಾರರು ಹೇಳುತ್ತಾರೆ.
ಆರನೆಯ ಪಾಸುರಮ್:
ಆೞ್ವಾರರು ಹೇಳುತ್ತಾರೆ ಎಂಪೆರುಮಾನರು ಹೇಗೆ ನಿನಗೆ ತಿಳಿಯದಂತೆ ನಿನ್ನ ಕರ್ಮದ ಫಲವನ್ನು ನಿನಗೆ ನೀಡುವ ಹಾಗೆ ಮಾಡುತ್ತಾರೋ ಅದು ಅವರ ಕೌಶಲ್ಯ.
ಪೋಟ್ಟ್ರಿ ಮಟ್ಟ್ರೋರ್ ದೆಯ್‍ವಮ್ ಪೇಣ ಪ್ಪುಱತ್ತಿಟ್ಟು ಉಮ್ಮೈ ಇನ್ನೇ
ತೇಟ್ಟ್ರಿ ವೈತ್ತದು ಎಲ್ಲೀರುಮ್ ವೀಡು ಪೆಟ್ಟ್ರಾಲ್ ಉಲಗಿಲ್ಲೈ ಎನ್‍ಱೇ
ಶೇಟ್ಟ್ರಿಲ್ ಶೆನ್ನೆಲ್ ಕಮಲಮೋಙ್ಗು ತಿರುಕ್ಕುರುಗೂರ್ ಅದನುಳ್
ಆಟ್ಟ್ರ ವಲ್ಲವನ್ ಮಾಯಮ್ ಕಣ್ಡೀರ್ ಅದಱಿನ್ದಱಿನ್ದು ಓಡುಮಿನೇ॥
ನಿನ್ನನ್ನು ತನ್ನಿಂದ ದೂರವಿಟ್ಟು ಅನ್ಯ ದೇವತೆಗಳನ್ನು ಸೇವೆ ಮಾಡುವಂತೆ ಮಾಡುತ್ತಾರೆ. ಅದಕ್ಕೆ ಕಾರಣವೇನೆಂದರೆ ಎಲ್ಲರಿಗೂ ಮೋಕ್ಷವನ್ನು ಕೊಟ್ಟುಬಿಟ್ಟರೆ ಲೋಕದ ರೀತಿ ನೀತಿಗಳು ಬದಲಾಯಿಸಿ ಬಿಡುತ್ತವೆ. ಎಲ್ಲಿ ಹೊಸ ಭತ್ತವು ಮತ್ತು ಕಮಲದ ಹೂಗಳು ಚೆನ್ನಾಗಿ ಬೆಳೆಯುತ್ತದೆಯೋ ಅಂತಹ ಸ್ಥಳದಲ್ಲಿ ಎಂಬೆರುಮಾನರು ಇದ್ದು, ಶ್ರೇಷ್ಠವಾದ ಕಲೆ ಕೌಶಲ್ಯಗಳನ್ನೂ ಹೊಂದಿದ್ದು ಎಲ್ಲರಿಗೂ ಅವರವರ ಕರ್ಮದ ಫಲವು ಸಿಗುವಂತೆ ಮಾಡುತ್ತಾರೆ, ಅಂತಹ ಎಂಪೆರುಮಾನರ ‘ಪ್ರಕೃತಿಯ ಜೊತೆಗೆ ಇರುವ ಸಂಬಂಧವನ್ನು ‘ಮಾಯ’ ಎಂದು ಕರೆಯುತ್ತಾರೆ. ಈ ಮಾಯೆಯ ಬಗ್ಗೆ ಜ್ಞಾನವನ್ನು ನೀನು ಪಡೆದುಕೊಂಡು ಲೌಕಿಕ ವಿಷಯಗಳನ್ನು ನೀನು ದಾಟಿಕೊಂಡು ಹೋಗು ಎಂದು ಆೞ್ವಾರರು ಬುದ್ಧಿ ಮಾತು ಹೇಳುತ್ತಾರೆ.
ಏಳನೆಯ ಪಾಸುರಮ್:
ಆೞ್ವಾರರು ಹೇಳುತ್ತಾರೆ “ ನಿನಗೆ ಈಗಾಗಲೇ ಏನೇನು ದೊರಕಿದೆಯೋ, ಅದೇ ಅನ್ಯ ದೇವತೆಗಳಿಂದಲೂ ದೊರಕುತ್ತದೆ. ಆದ್ದರಿಂದ ನೀನು ಗರುಡ ಧ್ವಜವನ್ನು ಹೊಂದಿರುವ ಎಂಪೆರುಮಾನರ ಶರಣಾಗತಿ ಹೊಂದಿ ಅವರ ಸೇವಕನಾಗು”.
ಓಡಿಯೋಡಿ ಪ್ಪಲಪಿಱಪ್ಪುಮ್ ಪಿಱನ್ದು ಮಟ್ಟ್ರೋರ್ ತೆಯ್‍ವಮ್
ಪಾಡಿ ಆಡಿ ಪ್ಪಣಿನ್ದು ಪಲ್ಪಡಿಕಾಲ್ ವೞಿಯೇಱಿ ಕ್ಕಣ್ಡೀರ್
ಕೂಡಿ ವಾನವರ್ ಏತ್ತ ನಿನ್‍ಱ ತಿರುಕ್ಕುರುಗೂರ್ ಅದನುಳ್
ಆಡು ಪುಳ್ ಕೊಡಿ ಆದಿಮೂರ್ತ್ತಿಕ್ಕು ಅಡಿಮೈ ಪುಗುವದುವೇ॥
ಹಾಡಿ ಪಾಡಿ, ನೃತ್ಯ ಮಾಡಿ, ಹೆಸರೇ ಇಲ್ಲದ ಅನ್ಯದೇವತೆಗಳಿಗಾಗಿ ನಾನಾ ವಿಧದಿಂದ ಪೂಜೆ ಮಾಡಿ ಅವರಲ್ಲೇ ಶರಣಾಗತಿ ಹೊಂದಿ , ಶಾಸ್ತ್ರದ ಪ್ರಕಾರವೆಂದು ಹೇಳಿ , ಓಡಿಯಾಡಿ ಅಲ್ಲಿಂದಿಲ್ಲಿಗೆ ಜರುಗಿ, ಪುನಃ ಪುನಃ ಬೇರೆ ಬೇರೆ ರೀತಿಯ ಜನ್ಮಗಳನ್ನು ಹೊಂದಿ, ಮತ್ತೆ ಇದನ್ನೆಲ್ಲಾ ಪುನರಾವರ್ತಿಸಿ. ಇದಕ್ಕೆ ಬದಲಾಗಿ ಸರ್ವೇಶ್ವರನಲ್ಲಿ ಮೊರೆ ಹೋಗು. ಎಲ್ಲದಕ್ಕೂ ಕಾರಣನಗಿರುವವನು ಅವನೇ. ಗರುಡ ಧ್ವಜವನ್ನು ಹೊಂದಿರುವನು. ಮತ್ತು ಆೞ್ವಾರ್ ತಿರುನಗರಿಯಲ್ಲಿ ನಿಂತಿರುವನು. ಅವನನ್ನು ಶರಣಾಗತಿ ಹೊಂದು. ಅವನನ್ನೇ ಹಾಡಿ ಹೊಗಳು. ಅವನು ನೀನು ಪೂಜಿಸುವ ಆ ದೇವತೆಗಳಿಂದಲೂ ಶರಣಾಗತಿ ಮಾಡಲ್ಪಡುವವನು.
ಎಂಟನೆಯ ಪಾಸುರಮ್:
ಆೞ್ವಾರರು ವಿವರಿಸುತ್ತಾರೆ “ಬೇರೆ ದೇವತೆಗಳಿಗೆ ಕೂಡಾ ಎಂಪೆರುಮಾನರೇ ಅವರಿಗೆ , ಅವರನ್ನು ಬೇಡುವವರ ಪೂರೈಕೆಗಳನ್ನು ಪೂರೈಸುವ ಶಕ್ತಿಯನ್ನು ಕೊಡುತ್ತಾರೆ. ರುದ್ರರು ಮಾರ್ಕಂಡೇಯನ ಆಸೆಗಳನ್ನು ಪೂರೈಸಲು ಎಂಪೆರುಮಾನರ ಕೃಪೆಯನ್ನು ಪಡೆದಿರುತ್ತಾರೆ.
ಪುಕ್ಕಡಿಮೈಯಿನಾಲ್ ತನ್ನೈ ಕಣ್ಡ ಮಾರ್ಕ್ಕಣ್ಡೇಯನವನೈ
ನಕ್ಕ ಪಿರಾನುಮ್ ಅನ್‍ಱು ಉಯ್ಯಕೊಣ್ಡದು ನಾರಾಯಣನರುಳೇ
ಕೊಕ್ಕಲರ್ ತಡಮ್ ತಾೞೈ ವೇಲಿ ತಿರುಕ್ಕುರುಗೂರ್ ಅದನುಳ್
ಮಿಕ್ಕ ಆದಿಪ್ಪಿರಾನ್ ನಿಱ್ಕ ಮಟ್ಟ್ರು ಎತ್ತೆಯ್‍ವಮ್ ವಿಳಮ್ಬುದಿರೇ॥
ಪೋಷಕರಾದ ರುದ್ರರು ನಗ್ನ, ದಿಗಂಬರ ಎಂದೇ ಹೆಸರಾಗಿರುತ್ತಾರೆ. ಪ್ರಳಯ ಕಾಲದಲ್ಲಿ ಮಾರ್ಕಂಡೇಯನನ್ನು ರಕ್ಷಿಸಿದರು. ಪುರಾಣಗಳಲ್ಲಿ ಜನಪ್ರಿಯವಾಗಿರುವಂತೆ ಮಾರ್ಕಂಡೇಯನು ರುದ್ರರ ಬಳಿ ನೇರವಾಗಿ ಬಂದು ಸಂಧಿಸಿದನು. ರುದ್ರರು ಮಾರ್ಕಂಡೇಯನನ್ನು ಭಗವಂತನ ಭಕ್ತನನ್ನಾಗಿಸಿ, ಅವನನ್ನು ನಾರಾಯಣರೇ ಮೇಲೆತ್ತಿದರು. ಎಂಪೆರುಮಾನರು ಎಲ್ಲರಿಗಿಂತ ಶ್ರೇಷ್ಠವಾದವರು. ಎಲ್ಲಾದಕ್ಕೂ ಮೂಲ ಕಾರಣರಾದವರು. ಮತ್ತು ಮಹಾ ಪೋಷಕರಾದವರು. ಅವರು ಬಿಳಿಯ ಹೂಗಳಿಂದ ಮತ್ತು ದೊಡ್ಡ ಪತ್ರೆಗಳಿಂದ ಭರಿತವಾದ ಆೞ್ವಾರ್ ತಿರುನಗರಿಯಲ್ಲಿ ಎಲ್ಲರಿಗು ಒಳಿತು ಮಾಡಲು ನಿಂತಿದ್ದಾರೆ. ಬೇರೆ ಯಾವ ದೈವವನ್ನು ನೀನು ಆರಾಧಿಸುವೆ?
ಒಂಬತ್ತನೆಯ ಪಾಸುರಮ್:
ಆೞ್ವಾರರು ಹೇಳುತ್ತಾರೆ “ನೀನು ರಕ್ಷಿಸಲ್ಪಡಬೇಕಾದರೆ ಆೞ್ವಾರ್ ತಿರುನಗರಿಯಲ್ಲಿ ಶರಣು ಹೊಂದು , ಅಲ್ಲಿ ವೇದ ಬಾಹ್ಯಗಳಿಂದಲೂ (ವೇದವನ್ನು ನಿರಾಕರಿಸುವ) ಕುದೃಷ್ಟಿಗಳಿಂದಲೂ (ವೇದವನ್ನು ಅನರ್ಥ ಮಾಡಿಕೊಂಡ) ಎಂಪೆರುಮಾನರ ಐಶ್ವರ್‍ಯಗಳು ನಾಶವಾಗುವುದಿಲ್ಲ. ಅಂತಹ ಎಂಪೆರುಮಾನರು ಅಲ್ಲಿ ನಿಂತಿದ್ದಾರೆ.
ವಿಳಮ್ಬುಮ್ ಆಱುಶಮಯಮುಮ್ ಅವೈಯಾಗಿಯುಮ್ ಮಟ್ಟ್ರುಮ್ ತನ್ಬಾಲ್
ಅಳನ್ದು ಕಾಣ್ಡಱ್ಕುರಿಯನಾಗಿಯ ಆದಿಪ್ಪಿರಾನ್ ಅಮರುಮ್
ವಳಙ್ಗೊಳ್ ತಣ್ ಪಣೈ ಶೂೞ್‍ನ್ದೞಗಾಯ ತಿರುಕ್ಕುರುಗೂರ್ ಅದನೈ
ಉಳಙ್ಗೊಳ್ ಞಾನತ್ತು ವೈಮ್ಮಿನ್ ಉಮ್ಮೈ ಉಯ್ಯಕ್ಕೊಣ್ಡು ಪೋಗುಱಿಲೇ॥
ಎಂಪೆರುಮಾನರು ಎಲ್ಲರ ಪೋಷಕರು ಮತ್ತು ಎಲ್ಲದಕ್ಕೂ ಕಾರಣರಾದವರು. ಆದರೆ ವೇದಗಳ ಸಾರಾಂಶವನ್ನು ನಿರಾಕರಿಸುವವರು ಭಗವಂತನು ಸಿಗುವುದು ಕಷ್ಟವೆಂದೂ ಅವರ ಗುಣವು ಆರು ಗುಂಪುಗಳ ತತ್ತ್ವಾಂಶದಿಂದ ನಿರ್ಧರಿಸಿದೆಯೆಂದೂ ತಪ್ಪಾಗಿ ಬರೀ ಮಾತಿನಲ್ಲಿ (ನಿಜವಾದ ಅಂಶವಿಲ್ಲದೆ) ನಿರ್ಧರಿಸಿರುತ್ತಾರೆ. ಮತ್ತು ಇವೆಲ್ಲಾ ಬರೀ ವೇದ ಬಾಹ್ಯ ಮತ್ತು ಕುದೃಷ್ಟಿ ತತ್ತ್ವಾಂಶಗಳಾಗಿರುತ್ತದೆ. ನೀನು ನಿನ್ನನ್ನು ಮೇಲೆತ್ತಬೇಕಾದರೆ, ಎಂಪೆರುಮಾನರ ಆನಂದಹರಿತವಾದ ನೆಲೆಯಾದ ಮತ್ತು ನೀರಿನ ಝಳಗಳಿಂದ ಆವೃತ್ತವಾದ, ಆಕರ್ಷಕ ಆೞ್ವಾರ್ ತಿರುನಗರಿಯನ್ನು ನಿನ್ನ ಮನಸ್ಸಿನ ಒಳಗೆ ತೆಗೆದುಕೋ.
ಹತ್ತನೆಯ ಪಾಸುರಮ್:
ಎಂಪೆರುಮಾನರಿಗೆ ಸೇವೆ ಸಲ್ಲಿಸುವುದು ನಮ್ಮ ಪರಮಗುರಿ ಮತ್ತು ಸರಿಯಾದ ದಾರಿ. ಅವರು ಎಲ್ಲಾರಿಗೂ ಶರೀರಿ (ಆತ್ಮ) ಸ್ವರೂಪನಾದವನು. ಸುಲಭವಾಗಿ ಜೊತೆ ಸೇರಬಹುದು ಮತ್ತು ಮನಸ್ಸನ್ನು ಆಕರ್ಷಿಸುವ ಕ್ರಿಯೆಗಳನ್ನು ಮಾಡುವವನು.
ಉಱುವದಾವದು ಎತ್ತೇವುಮ್ ಎವ್ವುಲಗಙ್ಗಳುಮ್ ಮಟ್ಟ್ರುಮ್ ತನ್ಬಾಲ್
ಮಱುವಿಲ್ ಮೂರ್ತಿಯೋಡೊತ್ತು ಇತ್ತನೈಯುಮ್ ನಿನ್‍ಱವಣ್ಣಮ್ ನಿಱ್ಕವೇ
ಶೆಱುವಿಲ್ ಶೆನ್ನೆಲ್ ಕರುಮ್ಬೊಡೋಱ್ಗು ತಿರುಕ್ಕುರುಗೂರದನುಳ್
ಕುಱಿಯ ಮಾಣುರುವಾಗಿಯ ನೀಲ್ ಕುಡಕ್ಕೂತ್ತನುಕ್ಕು ಆಟ್ಚೆಯ್‍ವದೇ ||
ಎಂಪೆರುಮಾನರು ಹೇಗೆ ನಿಂತಿದ್ದಾರೆ ಎಂದರೆ , ಎಲ್ಲಾ ವರ್ಗದ ದೇವತೆಗಳೂ ಎಲ್ಲಾ ಲೋಕಗಳೂ , ಬೇರೆ ಚಿತ್ (ಜೀವಿಗಳೂ) ಮತ್ತು ಅಚಿತ್ (ನಿರ್ಜೀವಿಗಳು) ಇವೆಲ್ಲಾ ಅವನ ಸ್ವರೂಪವಾಗಿವೆ. ಅವು ಅವನ ದಿವ್ಯ ವಿಶಿಷ್ಟ ರೂಪಕ್ಕೆ ಹೊರತಾಗಿವೆ. ಅವನ ಗುಣವನ್ನು ಮತ್ತು ಅವನ ರೂಪ ಲಕ್ಷಣಗಳನ್ನೂ ಕಳೆದುಕೊಳ್ಳದೆ ಅವನ ಸ್ವರೂಪವಾಗಿದೆ. ಅವನು ಹೊಸ ಭತ್ತ, ಮತ್ತು ಕಬ್ಬು ಬೆಳೆಯುವ ಪ್ರದೇಶವಾದ ಅತ್ಯಂತ ಫಲವತ್ತಾದ ಸ್ಥಳವಾದ ಆೞ್ವಾರ್ ತಿರುನಗರಿಯಲ್ಲಿ ನಿಂತಿದ್ದಾನೆ. ಅಂತಹ ಎಂಪೆರುಮಾನರು ಬಹಳ ಆನಂದದಿಂದ ಬ್ರಹ್ಮಚಾರಿಯಾದ ವಾಮನನಾಗಿ ಸೇವೆ ಸ್ವೀಕರಿಸುತ್ತಾನೆ. ಕೂಡ ಕೂತ್ತು ಆಡಿದ ಕೃಷ್ಣನಾಗಿಯೂ ಅವನು ಸೇವೆ ಸ್ವೀಕರಿಸುತ್ತಾನೆ. ಅವನೇ ನಮಗೆ ಪರಮವಾದ ಮತ್ತು ಸರಿಯಾದ ಗುರಿ ಎಂದು ಆೞ್ವಾರರು ಹೇಳುತ್ತಾರೆ.
ಹನ್ನೊಂದನೆಯ ಪಾಸುರಮ್:
ಈ ಪದಿಗೆಯನ್ನು ಕಲಿತರೆ ‘ಪರಮ ಪದಮ್’ (ಮೋಕ್ಷ ) ನನ್ನು ಸುಲಭವಾಗಿ ಪಡೆಯಬಹುದು ಎಂದು ಆೞ್ವಾರರು ಹೇಳುತ್ತಾರೆ.
ಆಟ್ಚೆಯ್‍ದು ಆೞಿಪ್ಪಿರಾನೈ ಚ್ಚೇರ್ನ್ದವನ್ ವಣ್ ಕುರುಗೂರ್ ನಗರಾನ್
ನಾಟ್ ಕಮೞ್ ಮಗಿೞ್‍ಮಾಲೈ ಮಾರ್ಬಿನನ್ ಮಾರನ್ ಶಡಗೋಪನ್
ವೇಟ್ಕೈಯಾಲ್ ಶೊನ್ನ ಪಾಡಲ್ ಆಯಿರತ್ತುಳ್ ಇಪ್ಪತ್ತುಮ್ ವಲ್ಲಾರ್
ಮೀಟ್ಚಿಯಿನ್‍ಱಿ ವೈಗುನ್ದ ಮಾನಗರ್ ಮಟ್ಟ್ರದು ಕೈಯದುವೇ॥
ಆೞ್ವಾರರಿಗೆ ‘ಶಟಕೋಪ’ ಎಂಬ ದಿವ್ಯ ನಾಮವೂ, ‘ಮಾರನ್’ ಎಂಬ ಕುಟುಂಬದ ಹೆಸರೂ ಇರುತ್ತದೆ. ಅವರು ಮಹಾ ಪೋಷಕರಾದ ಎಂಪೆರುಮಾನರನ್ನು ಸೇರಿರುತ್ತಾರೆ. ಅವರು ಮಾತಿನ ಮೂಲಕ (ಉಪದೇಶ) ಸೇವೆಯನ್ನು ಸಲ್ಲಿಸುತ್ತಾರೆ. ಅವರು ಆೞ್ವಾರ್ ತಿರುನಗರಿಗೇ ನಾಯಕರಾಗಿ ಇರುತ್ತಾರೆ. ಅವರು ಸುಗಂಧಿತ ರಂಜಲ ಪುಷ್ಪ ಮಾಲೆಯನ್ನು ತಮ್ಮ ದಿವ್ಯ ಎದೆಯ ಮೇಲೆ ಧರಿಸಿರುತ್ತಾರೆ. ಅವರು ಕರುಣೆಯಿಂದ ಈ ಹತ್ತು ಪಾಸುರದ ಪದಿಗೆಯನ್ನು ಮೂಲತಃ ಸಾವಿರದೊಳಗೆ ಈ ಪದಿಗೆಯನ್ನು ರಚಿಸಿರುತ್ತಾರೆ. ಈ ಹತ್ತು ಪಾಸುರಗಳನ್ನು ಯಾರು ಪಠಿಸುತ್ತಾರೋ ಅವರು ಶ್ರೀ ವೈಕುಂಠದಲ್ಲಿ ಉಪಸ್ಥಿತರಾಗಿರುತ್ತಾರೆ. ಬರೀ ಪಠಣೆಯಿಂದಲೇ ಅಲ್ಲಿಗೆ ಸೇರುವ ಅವಕಾಶವನ್ನು ಪ್ರಾಪ್ತಿಸಿರುತ್ತಾರೆ.
ಮೂಲ : https://divyaprabandham.koyil.org/index.php/2020/05/thiruvaimozhi-4-10-simple/
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org