ಶ್ರೀ: ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಶ್ರೀ ಮಣವಾಳ ಮಾಮುನಿಗಳು ಅಮಲನಾದಿಪಿರಾನ್‍ನ ಶ್ರೇಷ್ಠತೆಯನ್ನು ಉಪದೇಶ ರತ್ನಮಾಲೆಯ 10ನೇ ಪಾಸುರದಲ್ಲಿ ತಿಳಿಸಿದ್ದಾರೆ.
ಕಾರ್ತ್ತಿಗೆಯಿಲ್ ರೋಗಿಣಿನಾಳ್ ಕಾಣ್ಮಿ ನಿನ್‍ಱು ಕಾಶಿನಿಯೀರ್
ವಾಯ್‍ತ್ತ ಪುಗೞ್ ಪ್ಪಾಣರ್ ವಂದು ಉದಿಪ್ಪಾಲ್ – ಆತ್ತಿಯರ್ಗಳ್
ಅನ್ಬುಡನೇ ತಾನ್ ಅಮಲನಾದಿ ಪಿರಾನ್ ಕಱ್ಱದರ್ ಪಿನ್
ನನ್ಗುಡನೇ ಕೊಂಡಾಡುಂ ನಾಳ್ ॥
ಓಹ್! ಜಗತ್ತಿನಲ್ಲಿ ಹುಟ್ಟಿದ ಜನಗಳೇ! ಈವತ್ತು ಕಾರ್ತ್ತಿಗೈ ಮಾಸದ ರೋಹಿಣಿ ನಕ್ಷತ್ರದ ಶ್ರೇಷ್ಠವಾದ ದಿನ. ಈ ಶುಭ ದಿನದಂದು ತಿರುಪ್ಪಾಣಾಳ್ವಾರ್ ಶ್ರೇಷ್ಠತೆಯನ್ನು ಹೊಂದಿ ಅವತಾರವಿತ್ತಿದರು. ಯಾರು ವೇದಗಳನ್ನು ಗೌರವಿಸುತ್ತಾರೋ, ಅವರು ಈ ಆೞ್ವಾರ್ ರಚಿಸಿದ ‘ಅಮಲನಾದಿಪಿರಾನ್’ ಪ್ರಬಂಧವನ್ನು ತಪ್ಪದೇ ಕಲಿಯುತ್ತಾರೆ. ಕಲಿತ ನಂತರ , ಹತ್ತು ಪಾಸುರಗಳನ್ನು ಒಳಗೊಂಡ ಈ ಪ್ರಬಂಧವು ವೇದಗಳ ಸಾರವನ್ನು ಅದ್ಭುತವಾಗಿ ವಿವರಿಸಿದೆ ಎಂದು ತಿಳಿದುಕೊಳ್ಳುತ್ತಾರೆ. ಮತ್ತು ಈ ದಿನವನ್ನು ಕೊಂಡಾಡುತ್ತಾರೆ. ಸದಾ ಪಶ್ಶಾಂತಿ – ಎಂಪೆರುಮಾನರನ್ನೇ ಯಾವಾಗಲೂ ನೋಡುತ್ತಿರುವುದು ಇಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ.
ತಿರುಪ್ಪಾಣಾೞ್ವಾರವರು ,ಈ ಹತ್ತು ಪಾಸುರದಲ್ಲಿ ಪೆರಿಯ ಪೆರುಮಾಳ್ ಆದ ಶ್ರೀ ರಂಗನಾಥರು ಶ್ರೀರಂಗದಲ್ಲಿ ಮಲಗಿರುವ ಸ್ಥಿತಿಯಲ್ಲಿರುವುದು ಕೇವಲ ಅವರ ಆನಂದಕ್ಕಾಗಿ ಎಂದು ತಿಳಿಸಿದ್ದಾರೆ.
ಶ್ರೀರಂಗದ ಗುಡಿಯಲ್ಲಿ ಅರ್ಚಕರಾಗಿದ್ದ ಲೋಕಸಾರಂಗಮುನಿಗಳಿಗೆ ,ಆೞ್ವಾರಿಗೆ ಭಿನ್ನಾಭಿಪ್ರಾಯ ಬಂದಿತ್ತು. ಆದ್ದರಿಂದ ತಾನು ಗುಡಿಯೊಳಗೆ ಕಾಲನ್ನು ಇಡುವುದಿಲ್ಲವೆಂದು ಆೞ್ವಾರ್ ತೀರ್ಮಾನಿಸಿದ್ದರು. ಇದರಿಂದಾಗಿ ಪೆರಿಯ ಪೆರುಮಾಳ್ ಅರ್ಚಕರಿಗೆ ಆೞ್ವಾರರನ್ನು ಕರೆತರಲು ಆಜ್ಞಾಪಿಸಿದರು . ಅರ್ಚಕರು ತಕ್ಷಣವೇ ಹೊರಟು ತಿರುಪ್ಪಾಣಾೞ್ವಾರರನ್ನು ಕೂಡಲೇ ತನ್ನೊಡನೆ ಗುಡಿಗೆ ಬರಬೇಕೆಂದು ಕೋರಿದರು. ಆದರೆ ಆೞ್ವಾರರು ತಾನು ತನ್ನ ಕಾಲುಗಳನ್ನು ಗುಡಿಯೊಳಗೆ ಇಡುವುದಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಿದಾಗ, ಲೋಕಸಾರಂಗಮುನಿಗಳಾದ ಅರ್ಚಕರು ಆೞ್ವಾರರನ್ನು ತಮ್ಮ ಭುಜಗಳ ಮೇಲೆ ಹೊತ್ತುಕೊಂಡು ಹೊರಟರು. ಈ ರೀತಿಯಾಗಿ ಆೞ್ವಾರರಿಗೆ ‘ಮುನಿವಾಹನ’ ಎಂದೂ ಹೆಸರು ಬಂದಿತು.
ಚರಿತ್ರೆಯ ಪ್ರಕಾರ , ಆೞ್ವಾರರು ಗುಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಪಾಸುರಗಳನ್ನು ರಚಿಸಿ ಹಾಡಿದರು. ಮತ್ತು ಪೆರಿಯ ಪೆರುಮಾಳರನ್ನು ನೋಡುತ್ತಿದ್ದಂತೆ ಹತ್ತನೆಯ ಪಾಸುರವನ್ನು ಹಾಡಿ . ಪೆರಿಯ ಪೆರುಮಾಳಿನ ದಿವ್ಯ ಪಾದವನ್ನು ಸೇರಿದರು.
ನಮ್ಮ ಪೂರ್ವಾಚರ್‍ಯರು ಎರಡು ವಿಧದ ಸಂಬಂಧವನ್ನು ಈ ಪಾಸುರಗಳಲ್ಲಿ ತೋರಿಸಿದ್ದಾರೆ. ಮೊದಲನೆಯದು , ಪೆರುಮಾಳ್ ತನ್ನನ್ನು ತಾನು ಆೞ್ವಾರರಿಗೆ ತೋರಿಸುತ್ತಿದ್ದಂತೆ ಆೞ್ವಾರರು ಒಂದೊಂದು ಅಂಗವಾಗಿ ಪೆರಿಯ ಪೆರುಮಾಳನ್ನು ಆನಂದಿಸಿದ್ದು. ಎರಡನೆಯದು, ಲಾಭಗಳ ಪಟ್ಟಿಯನ್ನೇ ಪೆರಿಯ ಪೆರುಮಾಳ್ ನಮ್ಮ ಮೇಲೆ ಹರಿಸಿದ್ದು. ಈ ಎರಡು ರೀತಿಯ ಸಂಬಂಧಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪಾಸುರಗಳನ್ನು ಆನಂದಿಸುವುದೇ ಈ ಪ್ರಬಂಧಕ್ಕೆ ಸೂಕ್ತವಾದುದು.
ಈ ಸುಲಭ ಸರಳ ವಿವರಣೆಯನ್ನು ನಮ್ಮ ಪೂರ್ವಾಚಾರ್‍ಯರ ವ್ಯಾಖ್ಯಾನದ ಸಹಾಯದಿಂದ ಮಾಡಲಾಗಿದೆ.
ತನಿಯನ್ – 1
ಆಪಾದಚೂಡಮನುಭೂಯ ಹರಿಂಶಯಾನಮ್
ಮಧ್ಯೆ ಕವೇರ ದುಹಿತುರ್ಮುದಿತಾನ್ತರಾತ್ಮ।
ಅದ್ರಷ್ಟೃತಾಂ ನಯನಯೋರ್ವಿಷಯಾಂತರಾಣಾಮ್
ಯೋ ನಿಶ್ಚಿಕಾಯ ಮನವೈ ಮುನಿವಾಹನನ್ತಮ್।।
ಮಹಾಪೂರ್ಣರು (ಪೆರಿಯ ನಂಬಿಗಳು) ಈ ತನಿಯನ್ ನನ್ನು ಬರೆದಿರುತ್ತಾರೆ. ತಿರುಪ್ಪಾಣಾಳ್ವಾರ್ ಬಗ್ಗೆ ಆಳವಾಗಿ ಆಲೋಚಿಸೋಣ. ಅವರನ್ನು ಲೋಕಸಾರಂಗ ಮುನಿ ಎಂಬ ಅರ್ಚಕರು ಶ್ರೀರಂಗನಾಥರ ಆಜ್ಞೆಯ ಮೇರೆಗೆ ತಮ್ಮ ಭುಜದ ಮೇಲೆ ಹೊತ್ತು ಗುಡಿಗೆ ಬಂದಿರುತ್ತಾರೆ. ಆಗ ಕಾವೇರಿಯ ಎರಡು ತೊರೆಯ ನಡುವೆ ತಿರುಪ್ಪಾಣಾಳ್ವಾರರು ಮಲಗಿರುವ ಶೇಷಶಯನನಾದ ಶ್ರೀರಂಗನಾಥರನ್ನು ಆಪಾದಚೂಡವಾಗಿ (ಪಾದಗಳಿಂದ ತಲೆಯವರೆಗೆ) ನೋಡಿದಾಗ, ಬೇರೆ ಏನನ್ನೂ ಈ ಕಣ್ಗಳು ನೋಡಬಾರದೆಂದು ತೀರ್ಮಾನಿಸಿದರು.
ತನಿಯನ್ – 2
ಕಾಟ್ಟವೇ ಕಣ್ಡ ಪಾದ ಕಮಲಮ್ ನಲ್ಲಾಡೈಯುನ್ದಿ
ತೇಟ್ಟರುಮ್ ಉದರಬನ್ದಮ್ ತಿರುಮಾರ್ಬು ಕಣ್ಡಮ್ ಶೆವ್ವಾಯ್
ವಾಟ್ಟಮಿಲ್ ಕಣ್‍ಗಳ್‍ಮೇನಿ ಮುನಿಯೇಱಿತ್ತನಿಪುಗುನ್ದು
ಪಾಟ್ಟಿನಾಲ್ ಕಣ್ಡುವಾೞುಮ್ ಪಾಣರ್‌ತಾಳ್ ಪರವಿನೋಮೇ॥
ತಿರುಪ್ಪಾನಾಳ್ವಾರವರು ಲೋಕಸಾರಂಗರ ಭುಜದ ಮೇಲೆ ಕುಳಿತು ಗುಡಿಯನ್ನು ಪ್ರವೇಶಿಸಿದಾಗ, ಶ್ರೀ ರಂಗನಾಥರನ್ನು, ಅವರೇ ತೋರಿಸಿದಹಾಗೆ ಅಂಗ ಅಂಗವಾಗಿ ನೋಡಿದರು. ಮೊದಲು ಪಾದಕಮಲಗಳು, ರೇಷ್ಮೆ ವಸ್ತ್ರಗಳು, ಹೊಕ್ಕುಳು, ಸೊಂಟಕ್ಕೆ ಕಟ್ಟಿದ ಡಾಬು, ಪವಿತ್ರವಾದ ವಕ್ಷಸ್ಥಲಗಳು, ಕುತ್ತಿಗೆ , ಕೆಂಪಾದ ತುಟಿಗಳು, ನಂತರ ಕೊನೆಯಲ್ಲಿ ಎಂದಿಗೂ ಕುಂದದ ಕೆಂದಾವರೆಯಂತಹ ಕಣ್ಣುಗಳನ್ನು ನೋಡುತ್ತಾರೆ. ನಾವು ಅಂತಹ ತಿರುಪ್ಪಾಣಾೞ್ವಾರ್‌ರ ಬಗ್ಗೆ ಹೊಗಳಿ ಹಾಡೋಣ ಎಂದು ತಿರುಮಲೈ ನಂಬಿಗಳು (ಶ್ರೀ ಶೈಲ ಪೂರ್ಣರು) ತನಿಯನ್ ಹಾಡಿದ್ದಾರೆ.
ಮೊದಲನೆಯ ಪಾಸುರಮ್ :-
ಈ ಪಾಸುರದಲ್ಲಿ ಆೞ್ವಾರರು ದಿವ್ಯ ಪಾದಗಳ ವೈಭವವನ್ನು ಪೆರಿಯ ಪೆರುಮಾಳ್ ತೋರಿಸಿದಂತೆ ಆನಂದಿಸುತ್ತಾರೆ. ಪೆರಿಯ ಪೆರುಮಾಳಿನ ವಿಶಿಷ್ಟ ಗುಣವಾದ ಪರಿಶುದ್ಧತೆಯನ್ನು ಆಹ್ಲಾದಿಸುತ್ತಾರೆ.
ಪೆರುಮಾಳ್ ಆೞ್ವಾರರನ್ನು ಕೇವಲ ತನ್ನ ಸೇವಕನನ್ನಾಗಿ ಮಾತ್ರ ಮಾಡದೇ, ತನ್ನ ಅಡಿಯಾರ್‌ಗಳಿಗೂ ಸೇವಕನನ್ನಾಗಿ ಮಾಡಿದ್ದುದ್ದನ್ನು ಆನಂದಿಸುತ್ತಾರೆ.
ಅಮಲನಾದಿಪಿರಾನ್ ಅಡಿಯಾರ್ಕೆನ್ನೈ ಆಟ್ಪಡುತ್ತ
ವಿಮಲನ್ , ವಿಣ್ಣವರ್‌ಕೋನ್ ವಿರೈಯಾರ್ ಪೊೞಿಲ್ ವೇಙ್ಗಡವನ್
ನಿಮಲನ್ ನಿನ್ಮಲನ್ ನೀದಿವಾನವನ್ ನೀಣ್ಮದಿಳ್ ಅರಙ್ಗತ್ತಮ್ಮಾ, ತಿರು
ಕ್ಕಮಲ ಪಾದಮ್ ವನ್ದು ಎನ್ ಕಣ್ಣಿನುಳ್ಳನ ವೊಕ್ಕಿನ್‌ಱದೇ॥
ಕೊಂಚ ಕೂಡಾ ಕಳಂಕವಿಲ್ಲದ, ಎಲ್ಲರಿಗೂ ಕಾರಣಕರ್ತನಾದ, ಆದರೆ ತನಗೆ ಯಾರೂ ಕರ್ತೃವಿಲ್ಲದ, ಮೋಕ್ಷ ಕೊಡಲು ಶಕ್ತನಾದವನು ನನ್ನನ್ನು ತಮ್ಮ ದಾಸರಿಗೇ ದಾಸನನ್ನಾಗಿ ಮಾಡಿದ ವಿಮಲನು. (ಶುದ್ಧವಾದವನು, ನಿಶ್ಕಳಂಕಿತ).
ತನ್ನನ್ನು ನೋಡಲು ಭಕ್ತರಿಗೆ ಕಷ್ಟವಾಗಬಾರದೆಂದು ಪರಿಮಳಯುಕ್ತ ತೋಟಗಳಿಂದ ಕೂಡಿದ ವೆಂಕಟಾಚಲದಲ್ಲಿ ನಿಂತ ವೆಂಕಟೇಷ್ವರನು , ಸುಲಭವಾಗಿ ಕಾಣ ಸಿಗುತ್ತಾನೆ. ಅವನು ಲೀಲಾ ವಿಭೂತಿಗಳಿಗೂ (ಈ ಜಗತ್ತಿನಲ್ಲಿರುವವರಿಗೆ) , ಮತ್ತು ನಿತ್ಯವಿಭೂತಿಗಳಿಗೂ (ನಿತ್ಯಸೂರಿಗಳಿಗೆ) ನ್ಯಾಯವನ್ನು ನೀಡುತ್ತಾನೆ. ಅಂತಹ ಶ್ರೇಷ್ಠವಾದವನು , ವೈಕುಂಠವನ್ನೇ ಆಳುವವನು ಈ ಶ್ರೀರಂಗದಲ್ಲೂ ಇದ್ದಾನೆ. ಅಂತಹ ಶ್ರೀರಂಗನಾಥರ ಪಾದಕಮಲಗಳು ನನ್ನಂತಹ ಕೇವಲ ಮನುಷ್ಯನ ಕಣ್ಣಿನೊಳಗೇ ತಾನೇ ಬಂದು ಹೊಕ್ಕಿದೆ.
ಎರಡನೆಯ ಪಾಸುರಮ್:-
ಆೞ್ವಾರರು ತಿರುಪೀತಾಂಬರವನ್ನು (ಹಳದಿ ಬಣ್ಣದ ಪಂಚೆ) ಆನಂದಿಸುತ್ತಾರೆ. ಹೇಗೆ ದೋಣಿಯೊಂದನ್ನು ನೀರಿನ ಅಲೆಗಳು ಮೃದುವಾಗಿ ಪಕ್ಕಕ್ಕೆ ದೂಡುತ್ತವೆಯೋ, ಹಾಗೆಯೇ ಆೞ್ವಾರರ ಕಣ್ಣುಗಳು ಪೆರಿಯ ಪೆರುಮಾಳಿನ ಒಂದು ಅಂಗದಿಂದ ಇನ್ನೊಂದು ಅಂಗಕ್ಕೆ ಸಾಗುತ್ತದೆ.
ಉವನ್ದ ಉಳ್ಳತ್ತನಾಯ್ ಉಲಗಮ್ ಅಳನ್ದು ಅಣ್ಡಮುಱ
ನಿವನ್ದ ನೀಣ್ಮುಡಿಯನ್ ಅನ್‌ಱುನೇರ್ನ್ದ ನಿಶಾಚರರೈ
ಕ್ಕವರ್ನ್ದ ವೆಙ್ಗಣೈ ಕಾಕುತ್ತನ್ ಕಡಿಯಾರ್ ಪೋೞಿಲ್ ಅರಙ್ಗತ್ತಮ್ಮಾನ್, ಅರೈ
ಚ್ಚಿವನ್ದ ಆಗೈಯಿನ್ಮೇಲ್ ಶೆನ್‍ಱದಾಮ್ ಎನ್ ಶಿನ್ದನೈಯೇ॥
ಎಂಬೆರುಮಾನರ ದಿವ್ಯ ಕಿರೀಟವು ಈ ಲೋಕಗಳನ್ನು ತ್ರಿವಿಕ್ರಮನಾಗಿ ಅಳೆಯುವಾಗ ಬ್ರಹ್ಮಾಂಡದ ಮೇಲ್ಭಾಗದ ಛಾವಣಿಯನ್ನು ಮುಟ್ಟುತ್ತದೆ.
ತನ್ನ ಕ್ರೂರವಾದ ಬಾಣಗಳಿಂದ ರಾಕ್ಷಸರನ್ನು ಕೊಂದ ಶ್ರೀರಾಮರೇ, ಶ್ರೀರಂಗದಲ್ಲಿ ಮಲಗಿಕೊಂಡಿರುವ ಪೆರಿಯ ಪೆರುಮಾಳ್! ನನ್ನ ದೃಷ್ಟಿ ಮತ್ತು ಯೋಚನೆಯು ಅವರು ಸುತ್ತಿಕೊಂಡಿರುವ ದಿವ್ಯ ಪೀತಾಂಬರದಲ್ಲೇ ನಾಟಿದೆ.
ಮೂರನೆಯ ಪಾಸುರಮ್:-
ನಂತರ ಆೞ್ವಾರರು ದಿವ್ಯ ಕಮಲದ ಹೊಕ್ಕುಳನ್ನು ಆನಂದಿಸುತ್ತಾರೆ. ಬ್ರಹ್ಮನನ್ನು ಹಡೆದ ನಂತರ ಆ ನಾಭಿಯು ಮತ್ತಷ್ಟು ಸುಂದರವಾಗಿದೆ ಎಂದು ವರ್ಣಿಸುತ್ತಾರೆ.
ಹಿಂದಿನ ಪಾಸುರದಲ್ಲಿ ತ್ರಿವಿಕ್ರಮ ಪೆರುಮಾಳನ್ನು ಆನಂದಿಸಿದ ಆೞ್ವಾರರು , ಈ ಪಾಸುರದಲ್ಲಿ ತಿರುವೇಂಗಡಮುಡೈಯಾನ್ ನನ್ನು ಆರಾಧಿಸುತ್ತಾರೆ, ಮತ್ತು ತಿರುವೇಂಗಡಮುಡೈಯಾನ್ ಹಾಗು ಪೆರಿಯ ಪೆರುಮಾಳ್ ಇಬ್ಬರೂ ಒಬ್ಬನೇ ಎಂಬೆರುಮಾನರ ಎರಡು ದಿವ್ಯ ರೂಪಗಳು ಎಂದು ದೃಢೀಕರಿಸುತ್ತಾರೆ.
ಮನ್ದಿಪಾಯ್ ವಡವೆಙ್ಗಡ ಮಾಮಲೈ ವಾನವರ್ಗಳ್
ಶನ್ದಿಶೆಯ್ಯನಿನ್‍ಱಾನ್ ಅರಙ್ಗತ್ತರವಿನಣೈಯಾನ್
ಅನ್ದಿಪೋಲ್ ನಿಱತ್ತಾಡೈಯುಮ್ ಅದನ್ಮೇಲ್ ಅಯನೈ ಪ್ಪಡೈತ್ತದೋರೆೞಿಲ್
ಉನ್ದಿಮೇಲ್ ಅದನ್‍ಱೋ ಅಡಿಯೇನ್ ಉಳ್ಳತ್ತಿಲ್ ಉಯಿರೇ॥
ಎಂಪೆರುಮಾನರು ತಿರುವೇಂಗಡ ಮಹಾ ಮಲೆಯಲ್ಲಿ , ತಮಿಳುನಾದಿನ ಉತ್ತರ ದಿಕ್ಕಿನಲ್ಲಿ ಸ್ಥಾಪಿತಗೊಂಡಿದ್ದಾರೆ. ಅಲ್ಲಿ ಕೋತಿಗಳು ಆನಂದದಿಂದ ಜಿಗಿದು ಆಡುತ್ತಿರುತ್ತವೆ. ನಿತ್ಯಸೂರಿಗಳು ಅಲ್ಲಿಗೆ ಬಂದು ಪೆರುಮಾಳನ್ನು ‘ಶ್ರೀನಿವಾಸ’ ನೆಂದು ಪೂಜಿಸುತ್ತಾರೆ.
ಅದೇ ಪೆರುಮಾಳ್, ಶ್ರೀರಂಗದಲ್ಲಿ ತಿರುವನಂದಾಳ್ವಾನ್ (ಆದಿಶೇಷ)ನ ಮೆತ್ತಗಿನ ಹಾಸಿಗೆಯ ಮೇಲೆ ಮಲಗಿ ಶ್ರೀರಂಗನಾಥರೆಂದು ಪೂಜಿಸಲ್ಪಡುತ್ತಾರೆ. ನನ್ನ ಆತ್ಮವು ಸ್ವಲ್ಪ ಮುಂಚೆ ಕೆಂಪಗಿನ ಆಕಾಶದಂತಿರುವ ಪೀತಾಂಬರದಲ್ಲಿ ನಾಟಿತ್ತು. ಈಗ ಅದರ ಮೇಲ್ಭಾಗದ ಸುಂದರ ನಾಭಿಯನ್ನು ನೋಡುತ್ತಿದೆ. ಬ್ರಹ್ಮನನ್ನು ಹಡೆದ ಮೇಲೆ ಆ ನಾಭಿಯು ಇನ್ನೂ ಸುಂದರವಾಗಿ ಕಾಣುತ್ತಿದೆಯಲ್ಲವೇ?
ನಾಲ್ಕನೆಯ ಪಾಸುರಮ್:-
ಆೞ್ವಾರರು ದಿವ್ಯವಾದ ನಾಭಿಯ ಸುತ್ತ ಇರುವ ಉದರಬಂಧವನ್ನು ಆನಂದಿಸುತ್ತಾರೆ. ದಿವ್ಯವಾದ ನಾಭಿಯು ಬ್ರಹ್ಮರನ್ನು ಹೊಂದಿದ್ದರೆ , ಉದರಬಂಧವು (ಸೊಂಟದ ಪಟ್ಟಿ, ಡಾಬು) ಸಮಸ್ತ ಲೋಕಗಳನ್ನೇ ಒಳಗೊಂಡಿದೆ.
ಭಗವಂತನು ನಮ್ಮನ್ನು ಸ್ವೀಕರಿಸುವುದಕ್ಕೆ ಮೊದಲು ನಮ್ಮ ಅಹಂಕಾರವನ್ನೂ , ನಮ್ಮ ಸ್ವಾಧೀನತೆಯನ್ನೂ ತೆಗೆದು ಹಾಕಿ ಬಿಡುತ್ತಾನೆ. ಹೇಗೆ ರಾವಣನನ್ನು ಕೊಲ್ಲುವ ಮೊದಲು, ಲಂಕೆಯ ಸುಭದ್ರ ಕೋತೆಗಳನ್ನು ಮೊದಲು ಕೆಳವುತ್ತಾನೋ, ಹಾಗೆಯೇ ನಮ್ಮಲ್ಲಿರುವ ವೈರಿಗಳನ್ನು ನಾಶಮಾಡುತ್ತಾನೆ.
ಶದುರ ಮಾಮದಿಳ್ ಶೂೞ್ ಇಲಙ್ಗೈಕ್ಕಿಱೈವನ್ ತಲೈಪತ್ತು
ಉದಿರವೋಟ್ಟಿ ಓರ್ ವೆಙ್ಗಣೈಯುಯ್‍ತ್ತವನ್ ಓದವಣ್ಣನ್
ಮದುರಮಾ ವಣ್ಡುಪಾಡ ಮಾಮಯಿಲಾಡ ಅರಙ್ಗತ್ತಮ್ಮಾನ್, ತಿರುವಯಿಟ್ರು
ಉದಿರಬನ್ದಮ್ ಎನ್ನುಳ್ಳತ್ತುಳ್ ನಿನ್‍ಱು ಉಲಾಗಿನ್‍ಱದೇ॥
ಎಲ್ಲಿ ದುಂಬಿಗಳು ಸವಿಯಾಗಿ ಧ್ವನಿ ಮಾಡುತ್ತವೆಯೋ, ಎಲ್ಲಿ ನವಿಲುಗಳು ನೃತ್ಯವಾಡುತ್ತವೆಯೋ ಅಂತಹ ಶ್ರೀರಂಗದಲ್ಲಿ ಪೆರಿಯ ಪೆರುಮಾಳ್ ಮಲಗಿದ್ದಾರೆ. ಅಂತಹ ಪೆರುಮಾಳ್, ನಾಲ್ಕು ರೀತಿಯ ಭದ್ರ ಕೋಟೆಗಳಿರುವ ಲಂಕೆಯನ್ನೇ ಒಡೆದು ನುಗ್ಗಿ ರಾವಣನನ್ನು ಓಡಿಸಿಬಿಟ್ಟಿದ್ದಾರೆ. ನೀಲ ಕಡಲಿನ ಬಣ್ಣದಲ್ಲಿರುವ ಎಂಪೆರುಮಾನರು ನಂತರದಲ್ಲಿ ರಾವಣನ ಹತ್ತು ತಲೆಗಳನ್ನು ಕ್ರೂರ ಬಾಣಗಳಿಂದ ಕತ್ತರಿಸಿದ್ದಾರೆ. ಅಂತಹ ಪೆರಿಯ ಪೆರುಮಾಳಿನ ಉದರಬಂಧವು ನನ್ನ ಹೃದಯದಲ್ಲಿ ಭದ್ರವಾಗಿ ಸ್ಥಾಪನೆಗೊಂಡು ಎಲ್ಲೆಡೆ ಹರಿಯುತ್ತಿದೆ.
ಐದನೆಯ ಪಾಸುರಮ್:-
ಈ ಪಾಸುರದಲ್ಲಿ ಪೆರಿಯ ಪೆರುಮಾಳರ ದಿವ್ಯ ವಕ್ಷಸ್ಥಲವನ್ನು ಆನಂದಿಸುತ್ತಾರೆ. ಪೆರುಮಾಳಿನ ವಕ್ಷಸ್ಥಲದಲ್ಲಿರುವ ಶ್ರೀವತ್ಸ ಮತ್ತು ಕೌಸ್ತುಭ ಹಾರಗಳು ಚೇತನ ಮತ್ತು ಅಚೇತನಗಳನ್ನು ಪ್ರತಿಬಿಂಬಿಸುತ್ತವೆ. ವಕ್ಷಸ್ಥಲವು ದಿವ್ಯ ನಾಭಿ ಮತ್ತು ಉದರಬಂಧಕ್ಕಿಂತಾ ಹೆಚ್ಚು ಮಹತ್ವಪೂರ್ಣ . ಏಕೆಂದರೆ ಪ್ರಳಯ ಕಾಲದಲ್ಲಿ ಅದು ಎಲ್ಲಾ ಲೋಕಗಳನ್ನೂ ಹೊಂದಿತ್ತು. ಅದು ಪೆರಿಯ ಪಿರಾಟ್ಟಿಯ ವಾಸಸ್ಥಳವೂ ಆಗಿರುವುದರಿಂದ ಅದು ಅಮೂಲ್ಯವಾಗಿದೆ. ಆೞ್ವಾರರು ವಕ್ಷಸ್ಥಲವನ್ನು ಅದು ಆಮಂತ್ರಿಸಿದಂತೆ ಆನಂದಿಸುತ್ತಾರೆ.
ಪಾರಮಾಯ ಪೞವಿನೈ ಪತ್ತಱುತ್ತು, ಎನ್ನೈತ್ತನ್
ವಾರಮಾಕ್ಕಿ ವೈತ್ತಾನ್ ವೈತ್ತದನ್‍ಱಿ ಎನ್ನುಳ್ ಪುಹುನ್ದಾನ್
ಕೋರಮಾದವಮ್ ಶೆಯ್‍ದನನ್ ಕೊಲ್ ಅಱಿಯೇನ್ ಅರಙ್ಗತ್ತಮ್ಮಾನ್, ತಿರು
ವಾರಮಾರ್ಬದನ್‍ಱೋ ಅಡಿಯೇನೈ ಆಟ್ಕೊಣ್ಡದೇ॥
ನಾನು ಹಲವು ಜನ್ಮಗಳಿಂದ ನನ್ನ ಜ್ಞಾಪಕದಲ್ಲಿರದ ನಾನು ಮಾಡಿದ ಕರ್ಮಗಳ ಭಾರವನ್ನು ಎಂಪೆರುಮಾನರು ಕತ್ತರಿಸಿದ್ದಾರೆ. ಅವರ ಮೇಲೆ ಪ್ರೀತಿಯನ್ನು ಹೊಂದುವಂತೆ ಮಾಡಿದ್ದಾರೆ. ಅಲ್ಲಿಗೇ ನಿಲ್ಲಿಸದೇ, ನನ್ನ ಹೃದಯದೊಳಗೆ ಪ್ರವೇಶಿಸಿದ್ದಾರೆ. ಹೋದ ಜನ್ಮಗಳಲ್ಲಿ ನಾನು ಎಷ್ಟು ಪುಣ್ಯ, ತಪಸ್ಸು ಮಾಡಿದ್ದೆನೋ, ಈ ರೀತಿಯ ಅದೃಷ್ಟವನ್ನು ಪಡೆಯಲು. ಶ್ರೀರಂಗಕ್ಕೆ ನಾಯಕನಾದ ಶ್ರೀರಂಗನಾಥರ ತಿರು (ಶ್ರೀ ಮಹಾಲಕ್ಷ್ಮಿ) ಯನ್ನೂ, ದಿವ್ಯ ಹಾರಗಳನ್ನೂ ಹೊಂದಿರುವ ವಕ್ಷಸ್ಥಲವು ನನ್ನನ್ನು ತನ್ನ ಸೇವಕನಾಗಿ ಪರಿವರ್ತಿಸಿದೆ.
ಆರನೆಯ ಪಾಸುರಮ್:-
ಆೞ್ವಾರರು ಪೆರುಮಾಳಿನ ದಿವ್ಯವಾದ ಕುತ್ತಿಗೆಯನ್ನು ಈ ಪಾಸುರದಲ್ಲಿ ಆನಂದಿಸುತ್ತಾರೆ. ಆ ಕುತ್ತಿಗೆಯೇ ಹೇಳಿದಂತೆ ಎಂಪೆರುಮಾನರ ಎದೆಯಲ್ಲಿ ಪೆರಿಯ ಪಿರಾಟ್ಟಿ, ಎಲ್ಲಾ ಜೀವತ್ಮಗಳೂ, ಅಚೇತನಗಳೂ ಇರಬಹುದು. ಆದರೆ ಅಪಾಯ ಬರುವ ಸಮಯದಲ್ಲಿ , ನಾನು ಅನಂತವನ್ನೂ ಕುಡಿದು ರಕ್ಷಿಸುತ್ತೇನೆ ಎಂದು ಹೇಳುತ್ತದೆ. ಈ ಮಾತನ್ನು ಕೇಳಿ ಆೞ್ವಾರರು ಆನಂದಿಸುತ್ತಾರೆ.
ಎಂಪೆರುಮಾನರು ಯಾರದಾದರೂ ಶಾಪವನ್ನು ಹೋಗಲಾಡಿಸಿದ್ದಾರೆಯೇ? ಬ್ರಹ್ಮರು ರುದ್ರರಿಗೆ ಕೊಟ್ಟ ಶಾಪವನ್ನು ಎಂಬೆರುಮಾನರು ವಿಮೋಚನೆ ಮಾಡಿದ್ದು ಮತ್ತು ಚಂದ್ರನ ಹೊಳಪು ಕಡಿಮೆಯಾಗುವ ಶಾಪವನ್ನು ತಡೆದದ್ದು ಆೞ್ವಾರರು ಮೆಲುಕು ಹಾಕುತ್ತಾರೆ.
ತುಣ್ಡವೆಣ್ ಪಿಱೈಯನ್ ತುಯರ್ ತೀರ್ತವನ್, ಅಞ್ಜಿಱೈಯ
ವಣ್ಡುವಾೞ್ ಪೊೞಿಲ್ ಶೂೞ್ ಅರಙ್ಗನಗರ್ ಮೇಯ ಅಪ್ಪನ್
ಅಣ್ಡರಣ್ಡ ಬಹಿರಣ್ಡತ್ತು ಒರುಮಾನಿಲಮ್ ಎೞುಮಾಲ್ವರೈ, ಮುಟ್ರುಮ್
ಉಣ್ಡ ಕಣ್ಡಮ್ ಕಣ್ಡೀರ್ ಅಡಿಯೇನೈ ಉಯ್ಯಕ್ಕೊಣ್ಡದೇ॥
ಎಂಬೆರುಮಾನರು ರುದ್ರರ ಶೋಕವನ್ನು ನಿವಾರಣೆ ಮಾಡಿದ್ದರು. ಎಂಬೆರುಮಾನರು ರುದ್ರರ ತಲೆಯ ಮೇಲಿರುವ ಅರ್ಧಾಕೃತಿಯ ಚಂದ್ರನ ಶಾಪವಿಮೋಚನೆ ಮಾಡಿದ್ದರು. ಅವರೇ ಪೆರಿಯ ಪೆರುಮಾಳ್ ಆದ ಲೋಕಕ್ಕೇ ನಾಯಕರು. ಅವರು ವಿಧವಿಧವಾದ ರೆಕ್ಕೆಹುಳಗಳನ್ನೊಳಗೊಂಡ ಉದ್ಯಾನವನಗಳನ್ನು ಹೊಂದಿರುವ ಶ್ರೀರಂಗದಲ್ಲಿ ಶ್ರೀರಂಗನಾಥರಾಗಿ ಪ್ರತಿಷ್ಠಿತರಾಗಿದ್ದಾರೆ. ಆ ಪೆರುಮಾಳಿನ ದಿವ್ಯವಾದ ಕುತ್ತಿಗೆಯು ಅಂಡಾಕಾರದ ಬ್ರಹ್ಮಾಂಡವನ್ನು ನುಂಗಿಬಿಟ್ಟಿದೆ. ಅದರ ಜೊತೆಗೆ ಅನೇಕ ಬ್ರಹ್ಮಾಂಡಗಳು , ಅದರ ಹೊರವಲಯಗಳು, ಅನನ್ಯ ಭೂಮಿಯನ್ನೂ ನುಂಗಿದೆ. ಈ ಕುತ್ತಿಗೆಯು ನನ್ನನ್ನು ಕಷ್ಟಗಳಿಂದ ಮೇಲಕ್ಕೆತ್ತಿದೆ ಎಂದು ಆೞ್ವಾರರು ಹಾಡಿದ್ದಾರೆ.
ಏಳನೆಯ ಪಾಸುರಮ್:-
ಆೞ್ವಾರರು ಪೆರುಮಾಳಿನ ದಿವ್ಯ ಬಾಯಿಯನ್ನೂ, ದಿವ್ಯ ತುಟಿಗಳನ್ನೂ ಆನಂದಿಸುತ್ತಾರೆ. ಆ ದಿವ್ಯವಾದ ಬಾಯಿ ಹೇಳುತ್ತದೆ ‘ಕುತ್ತಿಗೆಯು ಅನಂತವನ್ನೂ ನುಂಗಿದೆ ಆದರೆ ಎಲ್ಲವೂ ನನ್ನ ಬಾಯಿಯಿಂದಲೇ ಒಳಹೋಗಿದೆ. ಮತ್ತು ನಾನು ಮಾತ್ರ ‘ಮಾ ಶುಚಃ’ ಎಂಬ ಸಾಂತ್ವನದ ಮಾತುಗಳನ್ನು ಹೇಳಬಲ್ಲೆ’ . ಇದನ್ನು ಕೇಳಿದ ಆೞ್ವಾರರು ಆನಂದಿತರಾಗುತ್ತಾರೆ.
ಕೈಯ್ಯಿನಾರ್ ಶುರಿಶಙ್ಗನಲಾೞಿಯರ್ , ನೀಳ್ವರೈಪೋಲ್
ಮೈಯ್ಯನಾರ್ ತುಳಬವಿರೈಯಾರ್ ಕಮೞ್ ನೀಣ್ಮುಡಿ ಎಮ್
ಐಯನಾರ್ ಅಣಿಯರಙ್ಗನಾರ್ ಅರವಿನಣೈ ಮಿಶೈ ಮೇಯ ಮಾಯನಾರ್
ಶೆಯ್ಯವಾಯ್ ಐಯ್ಯೋ ಎನ್ನೈ ಶಿನ್ದೈ ಕವರ್ನ್ದದುವೇ॥
ಪೆರಿಯ ಪೆರುಮಾಳಿನ ಹತ್ತಿರ ಸುರುಳಿಕೊಂಡಿರುವ ಶಂಖವೂ, ಬೆಂಕಿಯನ್ನು ಉಗುಳುವ ದಿವ್ಯಚಕ್ರವೂ ಇವೆ. ಅವರ ಸ್ವರೂಪವು ದೊಡ್ಡ ಪರ್ವತದಂತೆಯೂ , ನೀಳವಾದ ಕಿರೀಟವು ತುಳಸಿಗಳಿಂದ ಸುಗಂಧಿತವಾಗಿದೆ. ಅವರೇ ನನ್ನ ಸ್ವಾಮಿ, ಶ್ರೀರಂಗದಲ್ಲಿ ಆದಿಶೇಷನ ಮೇಲೆ ಶಯನಿಸಿರುವ ಲೀಲಾ ಮಹಿಮನು. ಆ ಪೆರುಮಾಳಿನ ದಿವ್ಯವಾದ ತುಟಿಯು ನನ್ನನ್ನು ಆಕರ್ಷಿಸಿದೆ.
ಎಂಟನೆಯ ಪಾಸುರಮ್:-
ಆೞ್ವಾರರು ಪೆರುಮಾಳಿನ ದಿವ್ಯ ಚಕ್ಷುವನ್ನು ಈ ಪಾಸುರದಲ್ಲಿ ಆನಂದಿಸುತ್ತಾರೆ. ಬಾಯಿ ಏನನ್ನಾದರೂ ಹೇಳಬಹುದು. ಆದರೆ ಕಣ್ಣುಗಳು ಮಾತ್ರ ತಾಯಿಯ ವಾತ್ಸಲ್ಯವನ್ನು ತುಳುಕಿಸಬಲ್ಲದು. ಆದ್ದರಿಂದ ಎಲ್ಲದಕ್ಕಿಂತಾ ಕಣ್ಣುಗಳೇ ಶ್ರೇಷ್ಠವಾದುದು ಎಂದು ಆೞ್ವಾರರು ಕಣ್ಣುಗಳನ್ನು ಆನಂದಿಸುತ್ತಾರೆ.
ನಾಲ್ಕನೆಯ ಮತ್ತು ಐದನೆಯ ಪಾಸುರಗಳಲ್ಲಿ
ನಾಲ್ಕನೆಯ ಮತ್ತು ಐದನೆಯ ಪಾಸುರಗಳಲ್ಲಿ ಅಹಂಕಾರ , ಸ್ವಾಧೀನತೆಗಳು ಮತ್ತು ಹಳೆಯ ಕರ್ಮಗಳು ನಿವಾರಿಸಲ್ಪಟ್ಟವು. ಇವೆಲ್ಲವೂ ನಿರ್ಮೂಲನೆಗೊಂಡರೂ , ಅವಿದ್ಯಾ(ಅಜ್ಞಾನ) ಇನ್ನೂ ಇರುವುದರಿಂದ , ಈ ಅಹಂಕಾರ ಮುಂತಾದುವುಗಳು ಮತ್ತೆ ಹಿಂತಿರುಗಿ ಬಂದು ಬಿಟ್ಟರೇ? ಎಂಪೆರುಮಾನರು ರಾಕ್ಷಸನಾದ ಹಿರಣ್ಯ ಕಶಿಪುವನ್ನು ಸಂಹಾರ ಮಾಡಿದಾಗ ತಮೋ ಗುಣವನ್ನೂ (ಅಜ್ಞಾನ , ಸೋಮಾರಿತನವನ್ನೂ) ಸಹ ನಿರ್ಮೂಲನೆ ಮಾಡಿದರು ಎಂದು ಆೞ್ವಾರರು ಹೇಳುತ್ತಾರೆ.
ಪರಿಯನಾಹಿ ವನ್ದ ಅವುಣನುಡಲ್ ಕೀಣ್ಡ , ಅಮರರ್ಕು
ಅರಿಯ ಆದಿಪ್ಪಿರಾನ್ ಅರಙ್ಗತ್ತಮಲನ್ ಮುಗತ್ತು
ಕರಿಯವಾಹಿ ಪ್ಪುಡೈಪರನ್ದು ಮಿಳಿರ್ನ್ದು ಶೆವ್ವರಿಯೋಡಿ, ನೀಣ್ಡವ
ಪ್ಪೆರಿಯವಾಯ್ ಕಣ್‍ಗಳ್ ಎನ್ನೈ ಪ್ಪೇದೈಮೈ ಶೆಯ್ದನವೇ॥
ಎಂಪೆರುಮಾನರು ದೊಡ್ಡ ಗಾತ್ರದ ರಾಕ್ಷಸನಾದ ಹಿರಣ್ಯಕಶಿಪುವನ್ನು ಸೀಳಿ ಹಾಕಿದರು. ಅಂತಹ ಎಂಪೆರುಮಾನರ ಹತ್ತಿರ ಸುಲಭವಾಗಿ ಬರಲಾಗುವುದಿಲ್ಲ. ಬ್ರಹ್ಮ ಮತ್ತಿತರ ನಿತ್ಯಸೂರಿಗಳಿಗೂ ಸಹ. ಅವರೇ ಎಲ್ಲದಕ್ಕೂ ಕಾರಣೀ ಭೂತರು. ಅವರೇ ಅನ್ಯರಿಗೂ ಪ್ರಯೋಜನವನ್ನುಂಟುಮಾಡಲು ಶ್ರೀರಂಗದಲ್ಲಿ ಶಯನ ರೀತಿಯಲ್ಲಿರುತ್ತಾರೆ. ನೀಳವಾದ, ಶ್ರೇಷ್ಠವಾದ, ದಿವ್ಯವಾದ ಅಂತಹ ಎಂಪೆರುಮಾನರ ಕಣ್ಣುಗಳು, ಗಾಢವಾದ ಕಪ್ಪು ಬಣ್ಣದಿಂದ ಕೂಡಿದ್ದು ಎಂಪೆರುಮಾನರ ದಿವ್ಯಮುಖದಲ್ಲಿ ಕೆಂಪುಗೆರೆಗಳಿಂದ ಕೂಡಿದೆ. ಅವು ನನ್ನನ್ನು ಆಶ್ಚರ್ಯಚಕಿತನನ್ನಾಗಿ ಮಾಡಿದೆ.
ಒಂಬತ್ತನೆಯ ಪಾಸುರಮ್:-
ಈ ಪಾಸುರದಲ್ಲಿ ಆೞ್ವಾರರು ಪೂರ್ತಿ ಎಂಪೆರುಮಾನರ ದಿವ್ಯ ರೂಪವನ್ನು ಆನಂದಿಸುತ್ತಾರೆ. ಆೞ್ವಾರರು ಎಂಪೆರುಮಾನರ ಅಗಧಿತಗಟನ ಗುಣ(ಯಾವುದನ್ನು ಒಟ್ಟು ಸೇರಿಸಲಾಗುವುದಿಲ್ಲವೋ , ಅವುಗಳನ್ನು ಒಟ್ಟು ಸೇರಿಸಿ ಒಂದು ರೂಪ ಕೊಡುವ ಗುಣ) ವನ್ನು ಆನಂದಿಸುತ್ತಾರೆ.
ಯಾರೊಬ್ಬರಿಗೆ ವೇದಾಂತಗಳ (ವೇದಗಳ ಕೊನೆಯ ಭಾಗ, ಉಪನಿಶತ್ತು) ಜ್ಞಾನವಿದೆಯೋ ಅವರ ತಮೋ ಗುಣಗಳು ನಾಶವಾಗಲ್ಪಡುತ್ತದೆ. ಆದರೆ ಆೞ್ವಾರರು ವೇದವನ್ನು ಓದುವ ಕುಲದಲ್ಲಿ ಹುಟ್ಟಿರಲಿಲ್ಲ. ಈ ಪ್ರಶ್ನೆ ಆೞ್ವಾರರಿಗೆ ಬಂದಾಗ ಅವರು “ಎಂಪೆರುಮಾನರು ಎಲ್ಲಾ ಲೋಕಗಳನ್ನು ನುಂಗಿ ಕೋಮಲವಾದ ಅರಳೀ ಎಲೆಯ ಮೇಲೆ ಮಲಗಿಕೊಂಡಾಗ , ಅವರು ಯಾರಿಂದಲೂ ತಿಳಿದುಕೊಳ್ಳಲು ಸಾಧ್ಯವಿಲ್ಲದ ಗುಣವನ್ನು ತೋರಿಸಿದರು. ಅದೇ ಗುಣವುಳ್ಳ ಪೆರುಮಾಳ್ ನನ್ನ ತಮೋ ಗುಣವನ್ನೂ ತೆಗೆದುಹಾಕುತ್ತಾರೆ” ಎಂದು ಹೇಳುತ್ತಾರೆ.
ಆಲಮಾಮರತ್ತಿನ್ ಇಲೈ ಮೇಲ್ ಒರು ಬಾಲಕನಾಯ್
ಞಾಲಮೇೞುಮುಣ್ಡಾನ್ ಅರಙ್ಗತ್ತರವಿನಣೈಯಾನ್
ಕೋಲ ಮಾಮಣಿಯಾರಮುಮ್ ಮುತ್ತುತ್ತಾಮಮುಮ್ ಮುಡಿವಿಲ್ಲದೋರೆೞಿಲ್
ನೀಲಮೇನಿ ಐಯ್ಯೋ! ನಿಱೈ ಕೊಣ್ಡದು ಎನ್ನೆಞ್ಜಿನೈಯೇ॥
ಯಾರು ಇಡೀ ಭೂಮಂಡಲವನ್ನೆಲ್ಲಾ , ಬ್ರಹ್ಮಾಂಡವನ್ನೆಲ್ಲಾ ನುಂಗಿ ಆಲದ ಮರದ ಎಲೆಯ ಮೇಲೆ ಮಲಗಿರುತ್ತಾರೋ ಅದೇ ಪೆರುಮಾಳ್ ಶ್ರೀರಂಗದಲ್ಲಿ , ಆದಿಶೇಷನ ಸವಿಯಾದ ಮೆತ್ತನೆಯ ಹಾಸಿಗೆಯಲ್ಲಿ ಶಯನಿಸಿರುತ್ತಾರೆ. ಆ ಶ್ರೀರಂಗನಾಥರ ಕರಿಯ ಕಪ್ಪು ಬಣ್ಣ ಹೊಂದಿದ ತಿರುಮೇನಿಯನ್ನು ಯಾವುದಕ್ಕೂ ಹೋಲಿಸಲಾಗುವುದಿಲ್ಲ. ಅದೇ ತಿರುಮೇನಿ ಶ್ರೇಷ್ಠ ರತ್ನಗಳಿಂದಲೂ, ಮುತ್ತುರತ್ನಗಳಿಂದಲೂ ಅಲಂಕರಿಸಲ್ಪಟ್ಟು ನನ್ನ ಹೃದಯವನ್ನು ಕದ್ದಿದೆ. ಅಯ್ಯೋ! ನಾನು ಇದಕ್ಕಾಗಿ ಏನು ಮಾಡಲಿ! ಎಂದು ಆೞ್ವಾರರು ಅತ್ಯಂತ ಆನಂದಿತರಾಗಿ ಉದ್ಗರಿಸುತ್ತಾರೆ.
ಹತ್ತನೆಯ ಪಾಸುರಮ್:-
ಅಂತ್ಯದಲ್ಲಿ ಆೞ್ವಾರರು ಕೃಷ್ಣನನ್ನು ಪೆರಿಯ ಪೆರುಮಾಳಿನಲ್ಲಿ ಕಾಣುತ್ತಾರೆ. ಅವರು ತಾನು ಇನ್ನೇನನ್ನೂ ಜೀವನದಲ್ಲಿ ನೋಡಲು ಬಯಸುವುದಿಲ್ಲ ಎಂದು ಆ ಪೆರುಮಾಳಿನ ದಿವ್ಯಪಾದ ಕಮಲವನ್ನು ಸೇರಿ ಶ್ರೀವೈಕುಂಠವನ್ನೂ ,ಮುಕ್ತಿಯನ್ನೂ ಪಡೆಯುತ್ತಾರೆ.
ಕೊಣ್ಡಲ್ ವಣ್ಣನೈ ಕ್ಕೋವಲನಾಯ್ ವೆಣ್ಣೆ
ಯುಣ್ಡವಾಯನ್ , ಎನ್ನುಳ್ಳಮ್ ಕವರ್ನ್ದಾನೈ
ಅಣ್ಡರ್‌ಕೋನ್ ಅಣಿಯರಙ್ಗನ್ ಎನ್ನಮುದಿನೈ
ಕ್ಕಣ್ಡ ಕಣ್‍ಗಳ್ ಮತ್ತೊನ್‍ಱಿನೈ ಕ್ಕಾಣಾವೇ॥
ಕರುಪ್ಪಾದ, ಮುಗಿಲಿನ ಬಣ್ಣದಿಂದ ಕೂಡಿದ ತಿರುಮೇನಿಯನ್ನು ಹೊಂದಿರುವ, ಹಸುಮೇಯಿಸುವ ಜಾತಿಯಲ್ಲಿ ಹುಟ್ಟಿ ತನ್ನ ದಿವ್ಯ ಬಾಯಿಯಿಂದ ಬೆಣ್ಣೆಯನ್ನು ಕದ್ದು ತಿನ್ನುವ ಕೃಷ್ಣನು ನನ್ನ ಚಿತ್ತವನ್ನು ಆಕರ್ಷಿಸಿದ್ದಾನೆ. ಯಾರು ನಿತ್ಯಸೂರಿಗಳಿಗೆಲ್ಲಾ ನಾಯಕನೋ ಅಂತಹ ಶ್ರೀರಂಗನಾಥನನ್ನು ನೋಡಿದ ನನ್ನ ಕಣ್ಣುಗಳು ಇನ್ನು ಮುಂದೆ ಏನನ್ನೂ ನೋಡಲು ಬಯಸುವುದಿಲ್ಲ ಎಂದು ಆೞ್ವಾರರು ಶ್ರೀವೈಕುಂಠವನ್ನು ಹೊಂದುತ್ತಾರೆ.
ತಿರುಪ್ಪಾಣಾೞ್ವಾರ್ ತಿರುವಡಿಗಳೇ ಶರಣಮ್
ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ
ಮೂಲ : https://divyaprabandham.koyil.org/index.php/2020/05/amalanadhipiran-simple/
ಆರ್ಕೈವ್ ಮಾಡಲಾಗಿದೆ : https://divyaprabandham.koyil.org
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org