ತಿರುವಾಯ್ಮೊೞಿ – ಸರಳ ವಿವರಣೆ – 10.9 – ಶೂೞ್ ವಿಶುಮ್ಬು

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ

ಕೋಯಿಲ್ ತಿರುವಾಯ್ಮೊೞಿ – ಸರಳ ವಿವರಣೆ

<< 10.8 – ತಿರುಮಾಲಿರುಞ್ಜೋಲೈ ಮಲೈ


ಆಳ್ವಾರರು ಪರಮಪದಕ್ಕೆ ವೇಗವಾಗಿ ಸೇರಲು ಬಯಸುತ್ತಾರೆ. ಎಂಪೆರುಮಾನರು ಆಳ್ವಾರರನ್ನು ಇನ್ನೂ ವೇಗವಾಗಿ ತಲುಪಿಸಲು ಬಯಸುತ್ತಾರೆ. ಆದರೆ ಅದಕ್ಕೂ ಮುನ್ನ ಎಂಪೆರುಮಾನರು ಆಳ್ವಾರರ ಪರಮಪದದ ಆಸೆಯನ್ನು ಇನ್ನೂ ಹೆಚ್ಚಿಸಲು ಇಚ್ಛಿಸುತ್ತಾರೆ. ಆದ್ದರಿಂದ ಅರ್ಚಿರಾದಿ ಗತಿ (ಪರಮಪದಕ್ಕೆ ತಲುಪುವ ದಾರಿ)ಯನ್ನು ತೋರಿಸುತ್ತಾರೆ. ಇದು ವೇದಾಂತದಲ್ಲಿ ವಿವರಿಸಲಾಗಿದೆ. ಆಳ್ವಾರರು ಇದನ್ನು ಆನಂದಿಸುತ್ತಾರೆ ಮತ್ತು ಹೇಗೆ ಎಲ್ಲಾ ಶ್ರೀವೈಷ್ಣವರೂ ಈ ಅರ್ಚಿರಾದಿ ಗತಿಯಲ್ಲಿ ಪ್ರಯಾಣಿಸಿ, ನಿತ್ಯಸೂರಿಗಳ (ನಿರಂತರವಾಗಿ ಪರಮಪದದಲ್ಲಿ ವಾಸಿಸುವವರು) ಜೊತೆಗೆ ಸಮ್ಮಿಲನವಾಗುತ್ತಾರೆ ಎಂದು ಬಹಿರಂಗ ಪಡಿಸುತ್ತಾರೆ. ಈ ಪದಿಗೆಯಲ್ಲಿ ಶ್ರೀವೈಷ್ಣವರಿಗೆ ನಂಬಿಕೆಯನ್ನು ಬಲಪಡಿಸಲು ಎಲ್ಲರೂ ಸಾಧನೆಯ ಬಳಿಕ ಅದನ್ನೇ ಹೊಂದುತ್ತಾರೆ ಎಂದು ದೃಢಪಡಿಸುತ್ತಾರೆ.

ಮೊದಲನೆಯ ಪಾಸುರಮ್:
ಆಳ್ವಾರರು ಅನೇಕ ಶ್ರೀವೈಷ್ಣವರು ತಿರುನಾಡಿಗೆ (ಪರಮಪದಕ್ಕೆ) ಏರುವುದನ್ನು ಕಂಡು ಅಪಾರ ಪ್ರೀತಿಯಿಂದ , ಚಲಿಸುವ ಮತ್ತು ಚಲಿಸದ ವಸ್ತುಗಳಿಗೆ ಉಂಟಾದ ಅತೀವ ಹರ್ಷವನ್ನು ಕರುಣೆಯಿಂದ ವಿವರಿಸುತ್ತಾರೆ.
ಶೂೞ್ ವಿಶುಮ್ಬಣಿ ಮುಗಿಲ್ ತೂರಿಯಮ್ ಮುೞಕ್ಕಿನ,
ಆೞ್ ಕಡಲ್ ಅಲೈತಿರೈ ಕೈಎಡುತ್ತಾಡಿನ,
ಏೞ್ ಪೊೞಿಲುಮ್ ವಳಮೇನ್ದಿಯ ಎನ್ನಪ್ಪನ್,
ವಾೞ್ ಪುಗೞ್ ನಾರಣನ್ ತಮರೈ ಕ್ಕಣ್ಡುಗನ್ದೇ ॥

ಶ್ರೀಮನ್ನಾರಯಣರ ಬಂಧುಗಳಾದ, ನನ್ನ ವಿಶಿಷ್ಟವಾದ ಬಂಧುಗಳಾದ ಭಕ್ತರನ್ನು ನೋಡಿ ಆನಂದಗೊಂಡು , ಅವರ ಶ್ರೇಷ್ಠ ಗುಣಗಳು ಹರ್ಷವನ್ನು ತರುವಂಥದ್ದು. ಮೋಡಗಳು ಆಕಾಶದಲ್ಲಿ ಎಲ್ಲಾ ಕಡೆಯೂ ಗುಂಪುಗೂಡಿ , ಅವುಗಳು ಸಂಗೀತ ವಾದ್ಯಗಳ ಗಲಭೆಯ ನಾದವನ್ನು ಹಬ್ಬಿಸಿದವು. ಅತ್ಯಂತ ಆಳವಾಗಿರುವ, ತಳವೇ ಇಲ್ಲದ ಸಮುದ್ರಗಳು ಏರುತ್ತಿರುವ ಅಲೆಯನ್ನೇ ತಮ್ಮ ಕೈಗಳಾಗಿಸಿ ನೃತ್ಯಗೈದವು. ಏಳು ದ್ವೀಪಗಳು ವಿಶೇಷವಾದ ಪಾರಿತೋಷಕಗಳನ್ನು ಉಡುಗೊರೆಯನ್ನಾಗಿ ನೀಡಿದವು.

ಎರಡನೆಯ ಪಾಸುರಮ್:
ಆಳ್ವಾರರು ಮೇಲ್ಮಟ್ಟ ವರ್ಗದ ಲೋಕದಿಂದ ಪಡೆದ ಸ್ವಾಗತವನ್ನು ಕರುಣೆಯಿಂದ ವಿವರಿಸಿದ್ದಾರೆ.
ನಾರಣನ್ ತಮರೈ ಕ್ಕಣ್ಡುಗನ್ದು ನಲ್ ನೀರ್ ಮುಗಿಲ್,
ಪೂರಣ ಪೊಱ್ಕುಡಮ್ ಪೂರಿತ್ತದುಯಿರ್ ವಿಣ್ಣಿಲ್,
ನೀರಣಿ ಕಡಲ್‌ಗಳ್ ನಿನ್‍ಱಾರ್ತ್ತನ, ನೆಡುವರೈ
ತ್ತೋರಣಮ್ ನಿರೈತ್ತು ಎಙ್ಗುಮ್ ತೊೞುದನರ್ ಉಲಗೇ ॥

ಸಹಜವಾಗಿ ಒಡೆಯನಾದ ಶ್ರೀಮನ್ನಾರಾಯಣರ ಭಕ್ತರನ್ನು ನೋಡಿ , ಆನಂದಗೊಂಡು , ಶುದ್ಧವಾದ ನೀರಿನಿಂದ ತುಂಬಿಕೊಂಡ ಮೇಘಗಳು ಮೇಲೆ ಆಕಾಶದಲ್ಲಿ ಸ್ವರ್ಣದ ಕೊಡಗಳಂತೆ ತುಂಬಿಕೊಂಡವು. ನೀರಿನ ಸಮುದ್ರಗಳು ಸ್ಥಿರವಾಗಿ ನಿಂತು ಗಲಭೆಯ ಸಂಗೀತವನ್ನು ಸೃಷ್ಟಿಸಿದವು. ಎತ್ತರವಾದ ಪರ್ವತಗಳು ಸ್ವಾಗತ ಕೋರುವ ಕಮಾನುಗಳಂತೆ ಲೋಕವನ್ನು ತುಂಬಿದವು. ಲೋಕದ ನಿವಾಸಿಗಳು ಎಲ್ಲೆಲ್ಲೂ ಪೂಜಿಸುತ್ತಿದ್ದರು. ಈ ಮೊದಲ ಎರಡೂ ಪಾಸುರಗಳಲ್ಲಿ ಆಳ್ವಾರರು ಭೂಮಿಯಿಂದ ಆಕಾಶದವರೆಗೂ ತೋರಿದ ಸ್ವಾಗತವನ್ನು ತೋರಿಸಿದ್ದಾರೆ. ‘ಉಲಗಮ್’ ಎಂದರೆ ಈ ಲೋಕದ ನಾಯಕರು ಎಂದು ಅರ್ಥ.

ಮೂರನೆಯ ಪಾಸುರಮ್:
ಆಳ್ವಾರರು ,ಆಧಿವಾಹಿಕ ಲೋಕ (ಆತ್ಮಗಳನ್ನು ಪರಮಪದಕ್ಕೆ ಕರೆದೊಯ್ಯಲು ದಾರಿ ತೋರಿಸುವ ಸ್ಥಳ) ಗಳಲ್ಲಿ ನೆಲೆಸಿರುವ ಜನರು , ತಿರುನಾಡಿಗೆ (ಪರಮಪದಕ್ಕೆ) ಏರುವ ಶ್ರೀವೈಷ್ಣವರನ್ನು ಹೇಗೆ ಹೂಗಳನ್ನು ಸುರಿಸಿ, ಪ್ರಶಂಸಿಸಿ , ಸ್ವಾಗತಿಸಲು ಮುಂದಾಗುತ್ತಾರೆ ಎಂದು ಕರುಣೆಯಿಂದ ವಿವರಿಸಿದ್ದಾರೆ.
ತೊೞುದನರ್ ಉಲಗರ್‌ಗಳ್ ತೂಬನಲ್ ಮಲರ್ ಮೞೈ
ಪೊೞಿವನರ್, ಪೂಮಿ ಅನ್‍ಱು ಅಳನ್ದವನ್ ತಮರ್ ಮುನ್ನೇ,
ಎೞುಮಿನ್ ಎನ್‍ಱು ಇರುಮರುಙ್ಗಿಸೈತ್ತನರ್ ಮುನಿವರ್ಗಳ್,
ವೞಿ ಇದು ವೈಕುನ್ದರ್ಕ್ಕೆನ್‍ಱು ವನ್ದೆದಿರೇ ॥

ತಮ್ಮ ಮಾತುಗಳನ್ನು ನಿಗ್ರಹಿಸಿರುವ ಮುನಿಗಳು ಮತ್ತು ಋಷಿಗಳು ಆ ಮೇಲಿನ ಲೋಕದ ನಿವಾಸಿಗಳು. ಮಹಾಬಲಿಯು ತನ್ನದೇ ಎಂದು ಪರಿಗಣಿಸಿದ ಪೂರ್ತಿ ಭೂಮಿಯನ್ನು ಒಂದೇ ಪಾದದಲ್ಲಿ ಅಳೆದವನಿಗೆ, ನಿನ್ನನ್ನು ಮಾತ್ರವೇ ಶರಣು ಹೊಂದುವೆ ಎಂದು, ಧೂಪವನ್ನು ಹಚ್ಚಿ, ಹೂಮಳೆಯನ್ನು ಸುರಿಸಿ, ತಮ್ಮ ಸೇವಕತ್ವಕ್ಕೆ ಸರಿಸಾಟಿಯಾದ ಶೈಲಿಯಲ್ಲಿ ಅಂಜಲಿ(ತಮ್ಮ ಎರಡೂ ಕೈಗಳನ್ನು ಜೋಡಿಸಿ) ಯನ್ನು ಅರ್ಪಿಸಿ ಶರಣಾದ ಭಕ್ತರು ಶ್ರೀವೈಕುಂಠಕ್ಕೆ ಏರುವಾಗ “ಇದೇನಾ ಶ್ರೀವೈಕುಂಠಕ್ಕೆ ದಾರಿ?” ಎಂದು ಕೇಳಿದಾಗ , ಆ ಮುನಿಗಳು ಮೇಲಿನ ಲೋಕದ ನಿವಾಸಿಗಳು ಕಾತುರದಿಂದ “ಹೌದು , ದಯಮಾಡಿಸಿ” ಎಂದು ಅವರ ದಾರಿಯ ಎರಡೂ ಪಕ್ಕದಲ್ಲಿ ನಿಂತು ಸ್ವಾಗತಿಸುತ್ತಾರೆ.

ನಾಲ್ಕನೆಯ ಪಾಸುರಮ್:
ಆಳ್ವಾರರು ಮೇಲಿನ ಲೋಕದ ದೇವತೆಗಳು ಹೇಗೆ ಶ್ರೀವೈಷ್ಣವರು ವಿಶ್ರಮಿಸಲು ನಂದನ ವನಗಳನ್ನು ಎಲ್ಲೆಡೆಯಲ್ಲೂ ನಿರ್ಮಿಸಿರುತ್ತಾರೆ ಮತ್ತು ಹೇಗೆ ಶ್ರೀವೈಷ್ಣವರನ್ನು ಹೊಗಳಲು ಆನಂದಕರವಾದ ಶಬ್ದಗಳನ್ನು ಸಂಗೀತ ವಾದ್ಯಗಳಿಂದ ಮಾಡುತ್ತಾರೆ ಎಂದು ಕರುಣೆಯಿಂದ ವಿವರಿಸಿದ್ದಾರೆ.
ಎದಿರೆದಿರ್ ಇಮೈಯವರ್ ಇರುಪ್ಪಿಡಮ್ ವಗುತ್ತನರ್,
ಕದಿರವರ್ ಅವರವರ್ ಕೈ ನಿರೈ ಕಾಟ್ಟಿನರ್,
ಅದಿರ್ ಕುರಲ್ ಮುರಶಙ್ಗಳ್ ಅಲೈಕಡಲ್ ಮುೞಕ್ಕೊತ್ತ,
ಮದುವಿರಿ ತುೞಾಯ್ ಮುಡಿ ಮಾದವನ್ ತಮರ್ಕ್ಕೇ ॥

ತಮ್ಮ ಕಣ್ಣು ಮಿಟುಕಿಸದ ದೇವತೆಗಳು ತನ್ನ ಕಿರೀಟದಲ್ಲಿ ಜೇನನ್ನು ಸೂಸುತ್ತಿರುವ ತುಳಸಿಯನ್ನು ಹೊಂದಿರುವ ಶ್ರಿಯಃ ಪತಿಯ ಶ್ರೀಮನ್ನಾರಾಯಣರ ಶರಣಾಗತರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಿರುತ್ತಾರೆ. ಅಲ್ಲಿ ಹನ್ನೆರಡು ಆದಿತ್ಯರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ತಮ್ಮ ಕಿರಣಗಳನ್ನು ಅಲಂಕಾರಿಕ ಬಾಣಗಳಂತೆ ನೀಡುತ್ತಿದ್ದರು. ಢೋಲುಗಳ ಗಲಭೆಯ ಸದ್ದು , ಸಮುದ್ರದ ಅಲೆಗಳ ಶಬ್ದಕ್ಕೆ ಅನುಸಾರವಾಗಿತ್ತು.

ಐದನೆಯ ಪಾಸುರಮ್:
ಆಳ್ವಾರರು ಶ್ರೀವೈಷ್ಣವರಿಗೆ ವರುಣ, ಇಂದ್ರ ಮುಂತಾದವರು ನೀಡಿದ ಗೌರವ ಮತ್ತು ಅವರು ತಮ್ಮ ಕರ್ತವ್ಯವಾದ ಆಧಿವಾಹಿಕ (ಆತ್ಮಗಳಿಗೆ ಪರಮಪದಕ್ಕೆ ಹೋಗುವ ದಾರಿಯನ್ನು ಮಾರ್ಗದರ್ಶಿಸುವುದು) ವನ್ನು ನಿರ್ವಹಿಸುವುದನ್ನು ಕರುಣೆಯಿಂದ ವಿವರಿಸಿದ್ದಾರೆ.
ಮಾದವನ್ ತಮರ್ ಎನ್‍ಱು ವಾಶಲಿಲ್ ವಾನವರ್,
ಪೋದುಮಿನ್ ಎಮದಿಡಮ್ ಪುಗುದುಗ ಎನ್‍ಱಲುಮ್,
ಕೀದಙ್ಗಳ್ ಪಾಡಿನರ್ ಕಿನ್ನರರ್ ಗೆರುಡರ್ಗಳ್,
ವೇದನಲ್ ವಾಯವರ್ ವೇಳ್ವಿಯುಳ್ ಮಡುತ್ತೇ ॥

ಆಧಿವಾಹಿಕ ದೈವಗಳಾದ ವರುಣ, ಇಂದ್ರ, ಪ್ರಜಾಪತಿ ಮುಂತಾದವರು ತಮ್ಮ ನಿವಾಸಗಳ ಮುಂಭಾಗಗಳಲ್ಲಿ ನಿಂತು, ಶ್ರಿಯಃ ಪತಿಯ ಸೇವಕರಿಗೆ ಮರ್ಯಾದೆಯನ್ನು ತೋರಿಸಿ, ಹೇಳುತ್ತಾರೆ, “ದಯವಿಟ್ಟು ಈ ದಾರಿಯಲ್ಲಿ ಬನ್ನಿರಿ. ನಮ್ಮ ಆಡಳಿತದಲ್ಲಿರುವ ಪ್ರದೇಶಗಳಿಗೆ ಪ್ರವೇಶಿಸಿರಿ” ಈ ಮಾತುಗಳನ್ನು ಹೇಳಿ, ಅವರಿಗೆ ಉಡುಗೊರೆಗಳ ಜೊತೆಗೆ ಸನ್ಮಾನವನ್ನು ಮಾಡುತ್ತಾರೆ. ವೇದಗಳ ಸತತವಾದ ಉಚ್ಛಾರಣೆಯಿಂದ ಬಾಯಿ / ಮಾತುಗಳು ವಿಶಿಷ್ಟವಾಗಿರುವವರು ತಮ್ಮ ಯಾಗ ಮುಂತಾದ ಕರ್ಮಗಳ ಫಲವನ್ನು ಆ ಶ್ರೀವೈಷ್ಣವರ ಪಾದಕಮಲಗಳಿಗೆ ಗೌರವದಿಂದ ಅರ್ಪಿಸುತ್ತಾ ಯೋಚಿಸುತ್ತಾರೆ, “ ನಮ್ಮ ಪಠಣವು ಈಗ ಪ್ರಯೋಜನಕ್ಕೆ ಬಂದಿವೆ.” ಕಿನ್ನರರು ಮತ್ತು ಗರುಡರು ಮಂಗಳಕರವಾದ ಹಾಡುಗಳನ್ನು ಹೇಳುತ್ತಾರೆ.

ಆರನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ದೇವಸ್ತ್ರೀಗಳು ( ಸ್ವರ್ಗ ಲೋಕದ ಹೆಂಗಸರು) ಆನಂದದಿಂದ ಶ್ರೀವೈಷ್ಣವರನ್ನು ಬರಮಾಡಿಕೊಂಡು ಅವರನ್ನು ಆಶೀರ್ವದಿಸುತ್ತಾರೆ.”
ವೇಳ್ವಿಯುಳ್ ಮಡತ್ತಲುಮ್ ವಿರೈಕಮೞ್ ನಱುಮ್ ಪುಗೈ,
ಕಾಲಙ್ಗಳ್ ವಲಮ್ಬುರಿ ಕಲನ್ದೆಙ್ಗುಮ್ ಇಶೈತ್ತನರ್,
ಆಣ್ಮಿನ್‍ಗಳ್ ವಾನಗಮ್ ಆೞಿಯಾನ್ ತಮರೆನ್‍ಱು,
ವಾಳ್ ಒಣ್ ಕಣ್ ಮಡನ್ದೈಯರ್ ವಾೞ್‍ತ್ತಿನರ್ ಮಗಿೞ್‍ನ್ದೇ ॥

ವೈದಿಕರು ತಮ್ಮ ಎಲ್ಲಾ ಧರ್ಮಗಳನ್ನು ಅರ್ಪಿಸಿದಾಗ , ಪರಿಮಳಭರಿತವಾದ ಗಂಧವು ಎಲ್ಲಾ ಕಡೆಯೂ ಹರಡಿಕೊಂಡು, ಗಾಳಿಯ ವಾದ್ಯಗಳು ಮತ್ತು ಬಲಬದಿಯಲ್ಲಿ ಸುರುಳಿಕೊಂಡಿರುವ ಶಂಖಗಳ ನಾದಗಳು ಹೊಮ್ಮಿದವು. ಅತಿಸುಂದರವಾದ , ಪ್ರಕಾಶಮಾನವಾದ ಕಣ್ಣುಗಳನ್ನು ಹೊಂದಿರುವ ಸ್ವರ್ಗದ ಸ್ತ್ರೀಯರು ಆನಂದದಿಂದ ಅವರನ್ನು ಆಶೀರ್ವದಿಸಿ ಹೇಳುತ್ತಾರೆ, “ತಿರುವಾೞಿಯನ್ನು ಹೊಂದಿರುವ ಸರ್ವೇಶ್ವರನಾದ ಶೀಮನ್ನಾರಾಯಣರ ಸೇವಕರಾದ ನೀವುಗಳು ಈ ಸ್ವರ್ಗಲೋಕ ಮುಂತಾದ ಅರಮನೆಯನ್ನು ಆಳಲು ಸೂಕ್ತವಾದವರು.” ಎಂದು.

ಏಳನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಮಾರುತಗಳು ಮತ್ತು ವಸುಗಳು ತಮ್ಮ ಹದ್ದನ್ನು (ಗಡಿಯನ್ನು) ಮೀರಿ, ಎಷ್ಟು ದೂರವಾಗುತ್ತದೆಯೋ ಅಷ್ಟು ದೂರ ಬಂದು ಶ್ರೀವೈಷ್ಣವರನ್ನು ಹೊಗಳುತ್ತಾರೆ.”
ಮಡನ್ದೈಯರ್ ವಾೞ್‍ತ್ತಲುಮ್ ಮರುದರುಮ್ ವಶುಕ್ಕಳುಮ್,
ತೊಡರ್ನ್ದೆಙ್ಗುಮ್ ತೋತ್ತಿರಮ್ ಶೊಲ್ಲಿನರ್, ತೊಡುಕಡಲ್
ಕಿಡನ್ದ ಎಮ್ ಕೇಶವನ್ ಕಿಳರ್ ಒಳಿ ಮಣಿಮುಡಿ,
ಕುಡನ್ದೈ ಅಮ್ ಕೋವಲನ್ ಕುಡಿಯಡಿಯಾರ್ಕ್ಕೇ ॥

ಎಂಪೆರುಮಾನರು ಕರುಣೆಯಿಂದ ಆಳವಾದ ಸಮುದ್ರದಲ್ಲಿ ವಿಶ್ರಮಿಸುತ್ತಿದ್ದಾರೆ. ಕೇಶವನಾಗಿ ನನ್ನಂತಹ ಜನರ, ಬ್ರಹ್ಮನನ್ನು ಮೊದಲುಗೊಂಡು ಎಲ್ಲ ದೇವತೆಗಳ , ನಿತ್ಯಸೂರಿಗಳ ಎಲ್ಲರ ಸೃಷ್ಟಿಗೆ ಕಾರಣನಾಗಿದ್ದಾನೆ. ಉನ್ನತವಾಗಿರುವ ಮತ್ತು ಪ್ರಜ್ವಲಿಸುತ್ತಿರುವ ಅನೇಕ ರತ್ನಗಳನ್ನು ಹೊಂದಿರುವ ದಿವ್ಯ ಕಿರೀಟವನ್ನು ಧರಿಸಿ ಕೃಷ್ಣನಾಗಿ ತಿರುಕ್ಕುಡಂದೈಯಲ್ಲಿ ಕರುಣೆಯಿಂದಲಿ ವಿಶ್ರಮಿಸುತ್ತಿದ್ದಾನೆ. ಅಂತಹ ಎಂಪೆರುಮಾನರ ಸೇವೆಯನ್ನು ಪರಂಪರೆಯಾಗಿ ಮಾಡುವ ಸೇವಕರನ್ನು ಮಾರುತರು ಮತ್ತು ಅಷ್ಟ ವಸುಗಳ ಮಡದಿಯರು ಪ್ರಶಂಸಿಸುತ್ತಿದ್ದಾರೆ. ಅವರು ಹೊಗಳುತ್ತಿದ್ದಾಗಲೇ, ಮಾರುತರು ಮತ್ತು ಅಷ್ಟ ವಸುಗಳು ಶ್ರೀವೈಷ್ಣವರನ್ನು ಎಲ್ಲಾ ಕಡೆಗೂ ಹಿಂಬಾಲಿಸಿ ಬಂದು ಅವರನ್ನು ಹೊಗಳುತ್ತಿದ್ದಾರೆ. ತೊಡುದಲ್ – ತೋಂಡುದಲ್ – ಆಳವನ್ನು ಸೂಚಿಸುತ್ತದೆ.

ಎಂಟನೆಯ ಪಾಸುರಮ್:
ಆಳ್ವಾರರು ಹೇಗೆ ನಿತ್ಯಸೂರಿಗಳು ತಮ್ಮ ಎಲ್ಲೆಯಾದ ಪರಮಪದವನ್ನು ಬಿಟ್ಟು, ಲೌಕಿಕವಾದ ವಾಸ್ತವಕ್ಕೆ ಬಂದು ಶ್ರೀವೈಷ್ಣವರನ್ನು ಬರಮಾಡಿಕೊಳ್ಳುತ್ತಾರೆ ಎಂದು ವಿವರಿಸಿದ್ದಾರೆ.
ಕುಡಿಯಡಿಯಾರ್ ಇವರ್ ಗೋವಿನ್ದನ್ ತನಕ್ಕೆನ್‍ಱು,
ಮುಡಿಯುಡೈ ವಾನವರ್ ಮುಱೈಮುಱೈ ಎದಿರ್ ಕೊಳ್ಳ,
ಕೊಡಿಯಣಿ ನೆಡುಮದಿಳ್ ಕೋಪುರಮ್ ಕುಱುಗಿನರ್,
ವಡಿವುಡೈ ಮಾದವನ್ ವೈಕುನ್ದಮ್ ಪುಗವೇ ॥

ಈಶ್ವರನ ಹಾಗೆಯೇ ರೂಪವನ್ನು ಹೊಂದಿರುವ , ಕಿರೀಟ ಮತ್ತಿತರ ಆಭರಣಗಳನ್ನು ಧರಿಸಿರುವ ನಿತ್ಯಸೂರಿಗಳು ಮುಂದೆ ಬಂದು ಭಕ್ತರನ್ನು ಅವರಿಗಾಗಿಯೇ ಜನ್ಮವನ್ನು ಎತ್ತಿದ ಕೃಷ್ಣನದೇ ಪಂಗಡದವರೆಂದು ಪರಿಗಣಿಸಿ, ಅವರನ್ನು ಸ್ವಾಗತಿಸಿದರು. ಶ್ರೀವೈಷ್ಣವರು ಧ್ವಜಗಳಿಂದ ಅಲಂಕೃತಗೊಂಡ , ಎತ್ತರವಾದ ಕೋಟೆಯನ್ನು ಹೊಂದಿರುವ , ಸರ್ವೇಶ್ವರನಿಗೆ ಸೇರಿದ ಶ್ರೀವೈಕುಂಠದ ಮಹಾದ್ವಾರದ ಬಳಿಗೆ ಆಗಮಿಸಿದರು. ಸರ್ವೇಶ್ವರನು ಅಲಂಕೃತಗೊಂಡು ಶ್ರೀವೈಷ್ಣವರನ್ನು ಒಳಗೆ ಬಿಡಲು ಸಿದ್ಧವಾಗಿದ್ದರು.

ಒಂಬತ್ತನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಶ್ರೀವೈಕುಂಠದ ದ್ವಾರದ ಬಳಿಗೆ ಬಂದು, ಹಿರಿಯರಿಂದ ಒಪ್ಪಿಗೆ ಪಡೆದುಕೊಂಡ ಮೇಲೆ, ಅಲ್ಲಿದ್ದ ನಿತ್ಯಸೂರಿಗಳು ಆಶ್ಚರ್ಯ ಪಡುತ್ತಾ ಯೋಚಿಸುತ್ತಾರೆ, “ಸಂಸಾರಿಗಳು ( ಮೊದಲು ಸಂಸಾರದಲ್ಲಿದ್ದವರು ) ಶ್ರೀವೈಕುಂಠಕ್ಕೆ ಬರುವುದು ಎಂತಹ ಅದೃಷ್ಟ”.
ವೈಕುನ್ದಮ್ ಪುಗುದಲುಮ್ ವಾಶಲಿಲ್ ವಾನವರ್,
ವೈಕುನ್ದನ್ ತಮರ್ ಎಮರ್ ಎಮದಿಡಮ್ ಪುಗುದೆನ್‍ಱು,
ವೈಕುನ್ದತ್ತಮರರುಮ್ ಮುನಿವರುಮ್ ವಿಯನ್ದನರ್ ,
ವೈಕುನ್ದಮ್ ಪುಗುವದು ಮಣ್ಣವರ್ ವಿದಿಯೇ ॥

ಶ್ರೀವೈಷ್ಣವರು ಶ್ರೀವೈಕುಂಠಕ್ಕೆ ಆಗಮಿಸಿದಾಗ , ದಿವ್ಯ ದ್ವಾರಪಾಲಕರು ಯೋಚಿಸುತ್ತಾರೆ, “ ಶ್ರೀವೈಕುಂಠವನ್ನು ಪಡೆದ ಈ ಶ್ರೀವೈಷ್ಣವರು ನಮಗೆ ಬಹಳ ಬೇಕಾದವರು.” ಎಂದು ಅವರು ನಮ್ಮ ಪ್ರದೇಶವನ್ನು ಪ್ರವೇಶಿಸಬೇಕು ಎಂದು ಪರಿಗಣಿಸುತ್ತಾರೆ. ಅವರು ಹರ್ಶಿತರಾಗುತ್ತಾರೆ. ಅಮರರು (ಕೈಂಕರ್‍ಯದಲ್ಲಿ ತೊಡಗಿರುವವರು) ಮತ್ತು ಮುನಿವರು (ಭಗವಂತನ ಕಲ್ಯಾಣ ಗುಣವನ್ನು ಧ್ಯಾನಿಸುವವರು) ಇದನ್ನು ಆಲೋಚಿಸಿ ಸಂತೋಷಗೊಳ್ಳುತ್ತಾರೆ “ಭೂಮಿಯಲ್ಲಿ ಲೌಕಿಕ ಆನಂದದಲ್ಲಿ ಮುಳುಗಿದ್ದ ಈ ಶ್ರೀವೈಷ್ಣವರಿಗೆ , ಪರಮಪದವನ್ನು ಪ್ರವೇಶಿಸಲು ಎಂತಹ ಅದೃಷ್ಟ” ಎಂದು.

ಹತ್ತನೆಯ ಪಾಸುರಮ್:
ಆಳ್ವಾರರು ನಿತ್ಯಸೂರಿಗಳು ಹೇಗೆ ಸಂಸಾರದಿಂದ ಶ್ರೀವೈಕುಂಠಕ್ಕೆ ಪ್ರಯಾಣಿಸಿದ ಶ್ರೀವೈಷ್ಣವರನ್ನು ಪ್ರಶಂಸಿಸುತ್ತಾರೆ ಎಂದು ಕರುಣೆಯಿಂದ ವಿವರಿಸುತ್ತಾರೆ.
ವಿದಿವಗೈ ಪುಗುನ್ದನರ್ ಎನ್‍ಱು ನಲ್ ವೇದಿಯರ್,
ಪದಿಯಿನಲ್ ಪಾಙ್ಗಿನಿಲ್ ಪಾದಙ್ಗಳ್ ಕೞುವಿನರ್ ,
ನಿದಿಯುಮ್ ನಲ್ ಶುಣ್ಣಮುಮ್ ನಿಱೈಕುಡವಿಳಕ್ಕಮುಮ್,
ಮದಿಮುಗ ಮಡನ್ದೈಯರ್ ಏನ್ದಿನರ್ ವನ್ದೇ ॥

ಶ್ರೀವೈಷ್ಣವರು ಈಶ್ವರನ ಆಜ್ಞೆಯ ಮೇರೆಗೆ ನಮ್ಮ ಅದೃಷ್ಟದ ರೂಪದಲ್ಲಿ ಪರಮಪದಕ್ಕೆ ಆಗಮಿಸಿ, ಪ್ರವೇಶಿಸಿದರು. ಎಂದು ಅತ್ಯಂತ ಆನಂದಭರಿತವಾದ ವೇದಗಳಲ್ಲಿ ನಿಪುಣರಾದ ಮತ್ತು ವಿಶಿಷ್ಟವಾದ ಗುಣವುಳ್ಳ ನಿತ್ಯಸೂರಿಗಳು ಅಂತಹ ಶ್ರೀವೈಷ್ಣವರ ಪಾದಗಳನ್ನು ಮರ್ಯಾದೆಯ ರೂಪದಲ್ಲಿ ತಮ್ಮ ತಮ್ಮ ವಾಸಸ್ಥಾನಗಳಲ್ಲಿ ತೊಳೆದರು. ತಮ್ಮ ಸೇವಕತ್ವವನ್ನು ಪ್ರತಿಬಿಂಬಿಸುವಂತೆ ವಿನಮ್ರವಾಗಿರುವ , ಪೂರ್ಣ ಚಂದ್ರನಂತೆ ಹೊಳೆಯುತ್ತಿರುವ ಮುಖವನ್ನು ಹೊಂದಿರುವ ದಿವ್ಯ ಕನ್ಯೆಯರು ಮುಂದೆ ಬಂದು ಶ್ರೀವೈಷ್ಣವರನ್ನು ಬರಮಾಡಿಕೊಂಡರು. ಸ್ತೋತ್ರರತ್ನಮ್ ನಲ್ಲಿ ಹೇಳಿರುವ ಹಾಗೆ “ಧನಮ್ ಮದೀಯಮ್” ಎಂದು ಅವರು ಭಕ್ತರಿಗೆ ಐಶ್ವರ್‍ಯವಾಗಿರುವ ಭಗವಂತನ ಪಾದುಕೆಗಳನ್ನು , ವಿಶಿಷ್ಟವಾದ ತಿರುಚ್ಚೂರ್ಣಮ್, ಪೂರ್ಣ ಕುಂಭಮ್ ಮತ್ತು ಮಂಗಳ ದೀಪಗಳನ್ನು ಹಿಡಿದಿದ್ದರು.

ಹನ್ನೊಂದನೆಯ ಪಾಸುರಮ್:
ಆಳ್ವಾರರು ಹೇಳುತ್ತಾರೆ, “ಈ ಪದಿಗೆಯಲ್ಲಿ ಪರಿಣಿತರಾದವರನ್ನು ಶ್ರೀವೈಕುಂಠದಲ್ಲಿರುವ ಮುನಿವರಿಗೆ (ಎಂಪೆರುಮಾನರನ್ನೇ ಧ್ಯಾನಿಸುವ ಪರಮಪದದಲ್ಲಿರುವ ನಿತ್ಯಸೂರಿಗಳಿಗೆ) ಹೋಲಿಸಲಾಗಿದೆ.
ವನ್ದವರ್ ಎದಿರ್ ಕೊಳ್ಳ ಮಾಮಣಿಮಣ್ಡಬತ್ತು,
ಅನ್ದಮಿಲ್ ಪೇರಿನ್ಬತ್ತು ಅಡಿಯರೋಡಿರುನ್ದಮೈ,
ಕೊನ್ದಲರ್ ಪೊೞಿಲ್ ಕುರುಗೂರ್ ಚ್ಚಡಗೋಪನ್, ಶೊಲ್
ಶೆನ್ದಙ್ಗಳ್ ಆಯಿರತ್ತು ಇವೈ ವಲ್ಲಾರ್ ಮುನಿವರೇ ॥

ಆಳ್ವಾರ್ ತಿರುನಗರಿಯ ನಿಯಂತ್ರಕರಾಗಿರುವ ನಮ್ಮಾಳ್ವಾರರು , ತಿರುಮಾಮಣಿ ಮಂಟಪದಲ್ಲಿ ಎಂಪೆರುಮಾನರೇ ಎದ್ದು ಬಂದು ಶ್ರೀವೈಷ್ಣವರನ್ನು ಹೇಗೆ ಬರಮಾಡಿಕೊಳ್ಳುತ್ತಾರೆ ಎಂದು ಈ ಪದಿಗೆಯಲ್ಲಿ ಕರುಣೆಯಿಂದ ವಿವರಿಸಿದ್ದಾರೆ. ಶ್ರೀವೈಷ್ಣವರು ಅಪರಿಮಿತವಾದ ಮತ್ತು ನಿರಂತರವಾದ ಪರಮಾನಂದವನ್ನು ಹೊಂದಿರುವ ಇತರ ಸೂರಿಗಳ ಜೊತೆಗೆ ಒಂದಾಗಿ ಸೇರಿದ್ದಾರೆ. ಈ ಹತ್ತು ಪಾಸುರಗಳನ್ನು ಮತ್ತಿತರ ಸಾವಿರ ಪಾಸುರಗಳಲ್ಲಿ ಯಾರು ನಿಪುಣರಾಗುತ್ತಾರೋ, ಅವರು ಭಗವಂತನ ಗುಣ ಮಹಾತ್ಮೆಯ ಬಗ್ಗೆ ಯಾವಾಗಲೂ ಧ್ಯಾನಿಸುವ ಮುನಿವರಂತೆ ಆಗುತ್ತಾರೆ. ‘ವಂದವರ್ ಎದಿರ್ ಕೊಳ್ಳ ‘ ಎಂದರೆ ಮುಖ್ಯ ಸೇವಕರಾದ ವಿಶ್ವಕ್ಸೇನರ್ ಮೊದಲಾದವರು ಎಂದು ಅರ್ಥ.

ನಮ್ಮಾಳ್ವಾರ್ ತಿರುವಡಿಗಳೇ ಶರಣಮ್.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ.

ಮೂಲ : https://divyaprabandham.koyil.org/index.php/2020/06/thiruvaimozhi-10-9-simple/

ಆರ್ಕೈವ್ ಮಾಡಲಾಗಿದೆ : https://divyaprabandham.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org