ತಿರುಪ್ಪಾವೈ – ಸರಳ ವಿವರಣೆ – 16 – 20 ನೇ ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

ತಿರುಪ್ಪಾವೈ

<< 6 ರಿಂದ 15 ನೇ ಪಾಸುರಗಳು

ಹದಿನಾರನೇ ಪಾಸುರಮ್:-
ಆಂಡಾಳ್ ಮತ್ತು ಗೆಳತಿಯರು ತಮ್ಮನ್ನು ಗುಡಿಯ ಒಳಗೆ ಬಿಡಲು ಕಾವಲುಗಾರನನ್ನು ಕೇಳುತ್ತಾರೆ.

ನಾಯಕನಾಯ್ ನಿನ್ರ ನಂದಗೋಪನುಡೈಯ
ಕೋಯಿಲ್ ಕಾಪ್ಪಾನೇ, ಕೊಡಿತ್ತೋನ್ರುಮ್ ತೋರಣ
ವಾಶಲ್ ಕಾಪ್ಪಾನೇ, ಮಣಿಕ್ಕದವಮ್ ತಾಳ್‌ತಿಱವಾಯ್
ಆಯರ್ ಶಿಱುಮಿಯರೋಮುಕ್ಕು, ಅಱೈಪಱೈ
ಮಾಯನ್ ಮಣಿವಣ್ಣನ್ ನೆನ್ನೆಲೇವಾಯ್ ನೇರ್ನ್ದಾನ್,
ತೂಯೋಮಾಯ್ ವನ್ದೋಮ್ ತುಯಿಲೆೞಪ್ಪಾಡುವಾನ್
ವಾಯಾಲ್ ಮುನ್ನಮುನ್ನಮ್ ಮಾಟ್ರಾದೇ ಅಮ್ಮಾ, ನೀ
ನೇಯ ನಿಲೈಕ್ಕದವಮ್ ನಿಕ್ಕೇಲೋರೆಮ್ಬಾವಾಯ್॥


ಇಲ್ಲಿ ಆಂಡಾಳ್ , ನಂದಗೋಪರ ತಿರುಮಾಳಿಗೆಯನ್ನು ಕಾವಲು ಕಾಯುವ ಮುಖ್ಯ ಕಾವಲುಗಾರನನ್ನು ಎಬ್ಬಿಸುತ್ತಾಳೆ.
[ ಈ ಕಾವಲುಗಾರನೇ ನಮ್ಮನ್ನು ಕೃಷ್ಣನ ಬಳಿ ಕೊಂಡೊಯ್ಯುವುದಕ್ಕೆ ಸಹಾಯಕನಾಗಿರುತ್ತಾನೆ. ಇಲ್ಲಿ ಕಾವಲುಗಾರರ ನಾಯಕನನ್ನು ಆಚಾರ್‍ಯರಿಗೇ ಹೋಲಿಸಲಾಗಿದೆ. ಕೃಷ್ಣನು ನಮ್ಮನ್ನೆಲ್ಲಾ ರಕ್ಷಿಸುತ್ತಾನೆ. ಅಂತಹವನ ತಿರುವಡಿಗಳನ್ನೇ ರಕ್ಷಿಸುವುದು ಆಚಾರ್‍ಯರ ಕೆಲಸವಾಗಿದೆ. ಆಚಾರ್ಯರ ಮಾಲೆಯಲ್ಲಿ ಮಧ್ಯದಲ್ಲಿರುವ ರತ್ನ ‘ಭಗವದ್ ಶ್ರೀ ರಾಮಾನುಜಾಚಾರ್‍ಯರು’ . ಇವರೇ ಕಾವಲು ಕಾಯುವ ನಾಯಕ ಎಂದು ಇಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ. ]
ಆಣ್ಡಾಳ್ ಮತ್ತು ಅವಳ ಗೆಳತಿಯರು ಪುಟ್ಟ ಮಕ್ಕಳಾದ್ದರಿಂದ ಸಹಜವಾಗಿ ತಮ್ಮ ವ್ರತಕ್ಕೆ ಅಡ್ಡಿ ಬರಬಾರದೆಂದು ಕಾವಲುಗಾರನನ್ನು ಗುಡಿಯನ್ನು ಕಾಪಾಡುವವನೇ (ಕೋಯಿಲ್ ಕಾಪ್ಪಾನೇ – ಅವರ ವೃತ್ತಿಯಿಂದಲೇ ಸಂಭೋದನೆ ಮಾಡುತ್ತಾರೆ ), ತಮ್ಮನ್ನು ಒಳಗೆ ಬಿಡಲು ಕೇಳಿಕೊಳ್ಳುತ್ತಾರೆ.
[ಇಲ್ಲಿ ಗುಡಿಯನ್ನು ರಕ್ಷಿಸುವವನೆಂದರೆ ಭಗವದ್ ಶ್ರೀ ರಾಮಾನುಜರಿಗೆ ಅನ್ವಯಿಸಲಾಗಿದೆ. ಅವರು ಬೇರೆ ಬೇರೆ ಗುಡಿಗಳಿಗೆ ಹೋಗಿ ಅಲ್ಲಿನ ಆಚಾರಗಳನ್ನು ಪಾಂಚರಾತ್ರ ಆಗಮವನ್ನಾಗಿ ಸಂಘಟಿಸಿದರು. ಈ ಸಂಪ್ರದಾಯಗಳಿಂದ ಗುಡಿಗಳನ್ನು ರಕ್ಷಿಸಿದರು ಎಂದೂ ಹೇಳಬಹುದು. ]
ಆಂಡಾಳ್ ಮತ್ತು ಅವಳ ಗೆಳತಿಯರನ್ನು ‘ಏಕೆ ನಾನು ನಿಮ್ಮನ್ನು ಒಳಗೆ ಬಿಡಬೇಕು? ನೀವು ಒಳಗೆ ಏನು ಮಾಡುತ್ತೀರ?’ ಎಂದು ಕಾವಲುಗಾರನು ಕೇಳಿದಾಗ , ಅವರು ‘ ಕೃಷ್ಣನು ನಮಗೆ ಪಱೈ ಎಂಬ ಡೋಲನ್ನು ನಮಗೆ ಕೊಡುತ್ತೇನೆ ಎಂದು ಹಿಂದಿನ ದಿನವೇ ಮಾತು ಕೊಟ್ಟಿದ್ದಾನೆ. ಅದನ್ನು ಪಡೆಯಲು ಮತ್ತು ಕೃಷ್ಣನನ್ನು ಮೆಲ್ಲನೆ ಎಬ್ಬಿಸಲು ‘ತಿರುಪ್ಪಳ್ಳಿಯೆೞುಚ್ಚಿ’ ಯನ್ನು ಹಾಡಲು ನಾವು ಪರಿಶುದ್ಧವಾದ ಮನಸ್ಸಿನಿಂದ ಬಂದಿದ್ದೇವೆ ಎಂದು ಹೇಳುತ್ತಾರೆ.
[‘ತೋರಣ ವಾಶಲ್ ಕಾಪ್ಪಾನೇ’ – ಎಂದರೆ ಉಡೈಯವರು ನಮ್ಮನ್ನು ಶ್ರೀ ವೈಕುಂಠದ ಒಳಗೆ ಬಿಡಲು ಕಾದಿದ್ದಾರೆ. ನಾವು ಯಾವಾಗ ಆಚಾರ್‍ಯರ ಮೂಲಕ ‘ಶರಣಾಗತಿ’ ಯನ್ನು ಮಾಡುತ್ತೇವೋ ಆಗ ಶ್ರೀ ರಾಮಾನುಜರು ನಾವು ಶ್ರೀ ವೈಕುಂಠದ ಒಳಗೆ ಬರಲು ಸಹಕರಿಸುತ್ತಾರೆ. ]
ನಂದಗೋಪರು ತಮ್ಮ ತಿರುಮಾಳಿಗೆಯು ಅಲ್ಲಿನ ಮತ್ತಿತರ ಮನೆಗಳಂತೇ ಇದ್ದುದರಿಂದ ಅವರ ಮನೆಗೆ ವ್ಯತ್ಯಾಸ ಗುರುತಿಸಲು ಧ್ವಜವನ್ನೂ, ತೋರಣವನ್ನೂ ಹೊಸಲಿಗೆ ಕಟ್ಟಿದ್ದರು. ಇದರಿಂದ ಪುಟ್ಟಮಕ್ಕಳು ರಾತ್ರಿಯಲ್ಲಿ ಹುಡುಕುವ ಪ್ರಮೇಯ ಬರಬಾರದೆಂದು.
ಆಂಡಾಳ್ ಮತ್ತು ಗೆಳತಿಯರು ತಮ್ಮ ವ್ರತವನ್ನು ಪಾಲಿಸಲು ಮಣಿಗಳಿಂದ ಸಜ್ಜಿತವಾಗಿದ್ದ ಕದವನ್ನು ತೆರೆ. ದಯವಿಟ್ಟು ವಾರ್ತೆಯಲ್ಲಾದರೂ ‘ಇಲ್ಲ’ ಎಂಬ ಋಣಾತ್ಮಕ ಉತ್ತರವನ್ನು ಕೊಡಬೇಡಿ ಎಂದು ಕಾವಲುಗಾರನನ್ನು ಕೇಳಿಕೊಳ್ಳುತ್ತಾರೆ.


ಹದಿನೇಳನೇ ಪಾಸುರಮ್:-


ಅಮ್ಬರಮೇ ತಣ್ಣೀರೇ ಶೋಱೇ ಅಱಮ್ಶೆಯ್ಯುಮ್
ಎಮ್ಬೆರುಮಾನ್ ನಂದಗೋಪಾಲಾ ಎೞುನ್ದಿರಾಯ್
ಕೊಮ್ಬನಾರ್ಕ್ಕೆಲ್ಲಾಮ್ ಕೊೞುನ್ದೇ ಕುಲವಿಳಕ್ಕೇ
ಎಮ್ಬೆರುಮಾಟ್ಟಿ ಅಶೋದಾಯ್ ಅಱಿವುಱಾಯ್
ಅಮ್ಬರ ಮೂಡಱುತ್ತು ಓಙ್ಗಿ ಉಲಹಳನ್ದ
ಉಮ್ಬರ್ ಕೋಮಾನೇ ಉಱಙ್ಗಾದು ಎೞುನ್ದಿರಾಯ್
ಶೆಮ್ಬೊರ್ ಕೞಡಿಚ್ಚೆಲ್ವಾ ಬಲದೇವಾ
ಉಮ್ಬಿಯುಮ್ ನೀಯುಮ್ ಉಱಙ್ಗೇಲೋರೆಮ್ಬಾವಾಯ್॥


ನಮ್ಮ ಸ್ವಾಮಿಯಾದ ನಂದಗೋಪರು (ಕೃಷ್ಣನ ತಂದೆ) ವಸ್ತ್ರಗಳನ್ನೂ, ನೀರನ್ನೂ ಮತ್ತು ಆಹಾರವನ್ನೂ ನೀಡುತ್ತಾರೆ. ದಯವಿಟ್ಟು ಎದ್ದೇಳಿ. ಗೋಪಿಕೆಯರಿಗೇ ನಾಯಕಿಯಾದ , ತೆಳುವಾದ ಮೈಕಟ್ಟನ್ನು ಹೊಂದಿರುವ , ನಮಗೆಲ್ಲಾ ತಾಯಿಯಾದ ಯಶೋದೆಮಾತೆಯೇ ಎದ್ದೇಳಿ. ಆಕಾಶವನ್ನು ಬೇಧಿಸಿ ತನ್ನ ಕಾಲುಗಳಿಂದಲೇ ಮೂರು ಲೋಕಗಳನ್ನು ಅಳೆದ , ಎಲ್ಲಾ ಲೋಕಗಳಿಗೂ ರಾಜನಾದ ಕೃಷ್ಣನೇ, ನೀವು ನಿದ್ದೆಯಿಂದ ಏಳಿರಿ. ವಿಜಯದ ಪ್ರತೀಕವಾದ ಚಿನ್ನದ ಕಾಲ್ಗೆಜ್ಜೆಗಳನ್ನು ಹಾಕಿಕೊಂಡಿರುವ ಬಲರಾಮರೇ, ನೀವು ಮತ್ತು ನಿಮ್ಮ ಸಹೋದರನಾದ ಕೃಷ್ಣನು ಇಬ್ಬರೂ ನಿಮ್ಮ ದಿವ್ಯವಾದ ನಿದ್ದೆಯಿಂದ ಎಚ್ಚೆತ್ತುಕೊಳ್ಳಿ ಎಂದು ಆಂಡಾಳ್ ಎಲ್ಲರನ್ನೂ ಎಬ್ಬಿಸುತ್ತಾಳೆ.
ತಾನು ಕಣ್ಣನನ್ನು ಎಬ್ಬಿಸುತ್ತಿರುವುದರಲ್ಲಿ ಏನೋ ಕೊರತೆಯಿದೆ ಎಂದು ಆಂಡಾಳ್ ಆಲೋಚಿಸಿ, ನಪ್ಪಿನ್ನೈ ಪಿರಾಟ್ಟಿಯ ಶಿಫಾರಸ್ಸು ಪಡೆದುಕೊಳ್ಳದೇ ಕಣ್ಣನನ್ನು ಎಬ್ಬಿಸುತ್ತಿರುವುದು ತಿಳಿದುಕೊಂಡಳು.
ಈ ಮೂರು ಪಾಸುರಗಳಲ್ಲಿ (ಹದಿನೆಂಟು , ಹತ್ತೊಂಬತ್ತು ಮತ್ತು ಇಪ್ಪತ್ತನೆಯ ) ಆಣ್ಡಾಳ್ ನಪ್ಪಿನ್ನೈ ಪಿರಾಟ್ಟಿಯ ಮಹತ್ವವನ್ನೂ, ವೈಭವವನ್ನೂ ಕೊಂಡಾಡುತ್ತಾಳೆ. ನಪ್ಪಿನ್ನೈ ಪಿರಾಟ್ಟಿಗೂ ಕೃಷ್ಣನಿಗೂ ಇರುವ ಆತ್ಮೀಯತೆ, ನಪ್ಪಿನ್ನೈಗೆ ಕೃಷ್ಣನೊಡನೆ ಇರುವ ಅಮಿತವಾದ ಆನಂದ, ಅವಳ ಯೌವನ , ಅವಳ ಸುಂದರವಾದ ದಿವ್ಯಾಕೃತಿ, ಕೃಷ್ಣನಿಗೆ ಪ್ರೇಯಸಿಯಾಗಿರುವುದು, ಕೃಷ್ಣನಿಗೇ ಶಿಫಾರಸ್ಸು ಮಾಡುವ ಅವಳ ಪಾತ್ರ ( ಚೇತನಾತ್ಮಗಳಿಗೆ ಕರುಣೆ ತೋರಿಸುವಂತೆ ಎಂಬೆರುಮಾನರ ಹತ್ತಿರ ಕೇಳುತ್ತಾಳೆ).
ನಮ್ಮ ಪೂರ್ವಾಚಾರ್‍ಯರು ಹೇಳಿರುವ ಹಾಗೆ , ಕೃಷ್ಣನನ್ನು ಮಾತ್ರ ಇಚ್ಛಿಸಿ, ಪಿರಾಟ್ಟಿಯನ್ನು ಮರೆಯುವುದು , ಶೂರ್ಪಣಖಳ ಹಾಗೆ. ಪಿರಾಟ್ಟಿಯನ್ನು ಮಾತ್ರ ಇಚ್ಛಿಸಿ, ಎಂಬೆರುಮಾನರನ್ನು ಮರೆಯುವುದು, ರಾವಣನ ಹಾಗೆ, ಅವರಿಗೂ ಅದೇ ಸ್ಥಿತಿ ಆಗುತ್ತದೆ.
ಹದಿನೆಂಟನೆಯ ಪಾಸುರಮ್:-
ಆಂಡಾಳ್ ಎಷ್ಟೇ ಪ್ರಯತ್ನ ಪಟ್ಟರೂ ಕೃಷ್ಣನನ್ನು ಎಬ್ಬಿಸಲಾಗುವುದಿಲ್ಲ. ಆಮೇಲೆ ಆಂಡಾಳ್ ನಪ್ಪಿನ್ನೈ ಪಿರಾಟ್ಟಿಯ ಶಿಫಾರಸ್ಸಿನ ( ಪುರುಷಕಾರ ) ಮೂಲಕ ಪ್ರಯತ್ನ ಪಡುತ್ತಾಳೆ. ಈ ಪಾಸುರವು ಎಂಬೆರುಮಾನರಿಗೆ ಅತ್ಯಂತ ಪ್ರಿಯವಾದ ಪಾಸುರವಾಗಿದೆ.


ಉನ್ದು ಮದ ಕಳಿಟ್ರನ್ ಓಡಾದ ತೋಳ್ ವಲಿಯನ್
ನಂದಗೋಪಾಲನ್ ಮರುಮಗಳೇ ನಪ್ಪಿನ್ನಾಯ್
ಕನ್ದಮ್ ಕಮೞುಮ್ ಕುೞಲೀ ಕಡೈ ತಿಱವಾಯ್
ವನ್ದು ಎಙ್ಗುಮ್ ಕೋೞಿ ಅೞೈತ್ತನ ಕಾಣ್, ಮಾದವಿ
ಪ್ಪಂದಲ್ ಮೇಲ್ ಪಲ್‌ಕಾಲ್ ಕುಯಿಲಿನಙ್ಗಣ್ ಕೂವಿನಕಾಣ್
ಪನ್ದಾರ್ ವಿರಲಿ ಉನ್ ಮೈತ್ತುನನ್ ಪೇರ್‌ಪಾಡ
ಚ್ಚೆನ್ದಾಮರೈ ಕ್ಕೈಯಾಲ್ ಶೀರಾರ್ ವೞೈಯೊಲಿಪ್ಪ
ವನ್ದು ತಿಱವಾಯ್ ಮಗಿೞ್‌ನ್ದೇಲೋರೆಮ್ಬಾವಾಯ್॥


ಆನೆಯಷ್ಟು ಬಲಶಾಲಿಯಾಗಿರುವ ,ಯುದ್ಧಭೂಮಿಯಲ್ಲಿ ಶತ್ರುಗಳಿಗೆ ಬೆನ್ನು ತೋರಿಸದೆ , ಹಿಂಜರಿಯದೆ ಇರುವ, ಭುಜಗಳಲ್ಲಿ ಪರಾಕ್ರಮವನ್ನು ತುಂಬಿಕೊಂಡಿರುವ ಶ್ರೀ ನಂದಗೋಪರಿಗೇ ಸೊಸೆಯಾಗಿರುವ ನಪ್ಪಿನ್ನೈ ಪಿರಾಟ್ಟಿಯೇ, ನೀನು ಸುವಾಸನೆಯಿಂದ ಕೂಡಿದ ಹೆರಳನ್ನು ಹೊಂದಿದ್ದೀಯ. ಎದ್ದು ಬಂದು ಬಾಗಿಲನ್ನು ತೆರೆ. ಬಳ್ಳಿಗಳಿಗಾಗಿ ಮೀಸಲಿದ್ದ ಆಶ್ರಯದಲ್ಲಿ ಕೋಗಿಲೆಗಳು ಚೆಲ್ಲಾಪಿಲ್ಲಿಯಾಗಿ ಬಹಳ ಸಮಯದಿಂದ ಕೂಗುತ್ತಲಿವೆ. ನಾವು ನಿನ್ನ ಯಜಮಾನರಾದ ಶ್ರೀ ಕೃಷ್ಣನ ಮೇಲೆ ಹಾಡಲು ಕಾದಿದ್ದೇವೆ. ಹೂವಿನ ಚೆಂಡಾಟದಲ್ಲಿ ಕೃಷ್ಣನನ್ನೇ ಸೋಲಿಸುವ ನಪ್ಪಿನ್ನೈಯೇ, ನಿನ್ನ ತಾವರೆಯಂತೆ ಕೆಂಪಾಗಿರುವ ಕೈಗಳಿಂದ , ನಿನ್ನ ಕೈಗಳಲ್ಲಿ ಬಳೆಗಳು ಝಲ್‌ಝಲ್ ಎಂದು ಸದ್ದುಮಾಡುತ್ತಾ ಸಂತೋಷದಿಂದ ಬಾಗಿಲನ್ನು ತೆರೆ ಎಂದು ಆಂಡಾಳ್ ಕೇಳುತ್ತಾಳೆ.

ಹತ್ತೊಂಬತ್ತನೆಯ ಪಾಸುರಮ್:-

ಈ ಪಾಸುರದಲ್ಲಿ ಆಂಡಾಳ್ , ಕೃಷ್ಣನನ್ನು ಮತ್ತು ನಪ್ಪಿನ್ನೈ ಪಿರಾಟ್ಟಿಯನ್ನು ಪರ್ಯಾಯವಾಗಿ ( ಒಬ್ಬರ ನಂತರ ಇನ್ನೊಬ್ಬರನ್ನು) ಎಬ್ಬಿಸುತ್ತಾಳೆ.


ಕುತ್ತುವಿಳಕ್ಕೆರಿಯ ಕೋಟ್ಟುಕ್ಕಾಲ್ ಕಟ್ಟಿಲ್ಮೇಲ್
ಮೆತ್ತೆನ್ರ ಪಞ್ಜಶಯತ್ತಿನ್ ಮೇಲೇಱಿ
ಕೊತ್ತಲರ್ ಪೂಙ್ಗುೞಲ್ ನಪ್ಪಿನ್ನೈ ಕೊಙ್ಗೈಮೇಲ್
ವೈತ್ತುಕ್ಕಿಡನ್ದ ಮಲರ್‌ಮಾರ್ಬಾ ವಾಯ್‌ತಿಱವಾಯ್
ಮೈತ್ತಡಙ್ಗಣ್ಣಿನಾಯ್ ನೀಯುನ್ ಮಣಾಳನೈ
ಎತ್ತನೈಪೋದುಮ್ ತುಯಿಲೆೞ ವೊಟ್ಟಾಯ್‌ಕಾಣ್
ಎತ್ತನೈಯೇಲುಮ್ ಪಿರಿವಾಟ್ರಕಿಲ್ಲಾಯಾಲ್
ತತ್ತುವ ಮನ್‌ಱು ತಹವೇಲೋರೆಮ್ಬಾವಾಯ್॥


ಓಹ್! ಎಂಬೆರುಮಾನರಾದ ಕೃಷ್ಣರು ವಿಶಾಲವಾದ ಹೂವಿನಂತಹ ಎದೆಯನ್ನು ದಿವ್ಯವಾದ ನಪ್ಪಿನ್ನೈಯ ಎದೆಯ ಮೇಲೆ ಇಟ್ಟು ಮಲಗಿರುತ್ತಾರೆ. ಅವರು ಆನೆಯ ದಂತದಿಂದ ಮಾಡಲ್ಪಟ್ಟ ಕಾಲುಗಳ ಮಂಚದ ಮೇಲೆ ಮಲಗಿರುತ್ತಾರೆ.
[ಸ್ವಾಪದೇಶಮ್ :- ಕಾಡು ಆನೆಯು ನಮ್ಮಲ್ಲಿರುವ ‘ನಾನು – ನನ್ನದು’ ಎಂಬ ಅಹಂಕಾರವನ್ನು ಸೂಚಿಸುತ್ತದೆ. ನಾಲ್ಕು ಕಾಲುಗಳು ನಮ್ಮ ನಾಲ್ಕು ಬಗೆಯ ಅಹಂ ಅನ್ನು ತೋರಿಸುತ್ತದೆ. ಆ ನಾಲ್ಕು ಕಾಲುಗಳು :-
ಶೇಷತ್ವೇ ಕರ್ತೃತ್ವಮ್ :- ನಾವು ಮಾತ್ರ ಎಂಬೆರುಮಾನರಿಗೆ ಒಳ್ಳೆಯ ಭಕ್ತರು ಎಂಬುದು.
ಜ್ಞಾತೃತ್ವೇ ಕರ್ತೃತ್ವಮ್ :- ನಮಗೆ ಮಾತ್ರ ಎಂಬೆರುಮಾನರ ಬಗ್ಗೆ ಜ್ಞಾನವಿದೆ ಎಂಬುದು.
ಕರ್ತೃತ್ವೇ ಕರ್ತೃತ್ವಮ್:- ನಾವು ಮಾತ್ರ ಎಂಬೆರುಮಾನರಿಗೆ ಸೇವೆ ಮಾಡಲು ಶಕ್ತರು ಮತ್ತು ಯೋಗ್ಯರು ಎಂಬುದು.
ಭೋಕ್‌ತೃತ್ವೇ ಕರ್ತೃತ್ವಮ್:- ನಾವು ನಮ್ಮ ಆನಂದಕ್ಕೊಸ್ಕರ ಮಾತ್ರ ಸೇವೆ ಮಾಡುತ್ತೇವೆ ಎಂಬುದು.]
ಆ ಮಂಚದ ಬಳಿಯಲ್ಲಿ ದೀಪವೊಂದು ಬೆಳಗುತ್ತಿರುತ್ತದೆ. ಶ್ರೀಕೃಷ್ಣರೇ, ದಯವಿಟ್ಟು ನಮ್ಮ ಜೊತೆಗೆ ಬಾಯಿ ತೆರೆದು ಮಾತನಾಡಿ. ತನ್ನ ಕಣ್ಣುಗಳಿಗೆ ಕಾಡಿಗೆಯನ್ನು ಹಚ್ಚಿರುವವಳೇ , ತನ್ನ ಹೆರಳುಗಳಿಗೆ ಸುಗಂಧಿತ ಪುಷ್ಪಗಳಿಂದ ಅಲಂಕರಿಸಿದ ನಪ್ಪಿನ್ನೈ ಪಿರಾಟ್ಟಿಯೇ, ನೀನು ನಿನ್ನ ಕೃಷ್ಣನನ್ನು ಒಂದು ನಿಮಿಷ ಕೂಡಾ ಎಬ್ಬಿಸುತ್ತಿಲ್ಲ. ಒಂದು ನಿಮಿಷ ಕೂಡಾ ಅವನಿಂದ ನೀನು ಅಗಲಿ ಇರಲಾರೆ. ನಮ್ಮನ್ನು ಕೃಷ್ಣನ ಜೊತೆ ಮಾತನಾಡಲು ಬಿಡದೇ ಇರುವುದು , ನಿನ್ನ ಸಹಜ ಪ್ರಕೃತಿಯಾದ ಸ್ವರೂಪಕ್ಕೆ ಮತ್ತು ನಿನ್ನ ಸ್ವಭಾವಕ್ಕೆ ತದ್‌ವಿರುದ್ಧವಾಗಿದೆ.
[ನಪ್ಪಿನ್ನೈ ಪಿರಾಟ್ಟಿಯು ಭಕ್ತರಾದ ನಮ್ಮನ್ನು ಭಗವಂತನ ಜೊತೆ ಶಿಫಾರಸ್ಸಿನ ಮೂಲಕ ಕೂಡಿಸುವುದು , ಅವಳ ಮೂಲ ಸ್ವರೂಪ, ಸ್ವಭಾವವಾಗಿರುತ್ತದೆ. ನಾವು ಏನನ್ನಾದರೂ ಭಗವಂತನಲ್ಲಿ ಬೇಡುವುದಾದರೆ ತಾಯಾರ್ ಮೂಲಕವಾಗಿಯೇ ಹೋಗಬೇಕೆನ್ನುವುದು ಇಲ್ಲಿ ಆಂಡಾಳ್ ಹೇಳಿ ಕೊಡುತ್ತಾಳೆ. ]

ಇಪ್ಪತ್ತನೆಯ ಪಾಸುರಮ್ :-

ಈ ಪಾಸುರದಲ್ಲಿ ಆಂಡಾಳ್, ನಪ್ಪಿನ್ನೈ ಮತ್ತು ಕೃಷ್ಣ ಇಬ್ಬರನ್ನೂ ಎಬ್ಬಿಸಿ , ನಪ್ಪಿನ್ನೈ ಪಿರಾಟ್ಟಿಗೆ ಕೃಷ್ಣನೊಂದಿಗೆ ಜೊತೆ ಕೂಡಿಸುವಂತೆ ಮತ್ತು ಕೃಷ್ಣಾನುಭಾವವಾಗುವಂತೆ ಕೇಳುತ್ತಾಳೆ.

ಮುಪ್ಪತ್ತುಮೂವರ್ ಅಮರರ್ಕು ಮುನ್‌ಶೆನ್ರು
ಕಪ್ಪಮ್ ತವಿರ್ಕುಮ್ ಕಲಿಯೇ ತುಯಿಲೆೞಾಯ್
ಶೆಪ್ಪಮುಡೈಯಾಯ್ ತಿಱಲುಡೈಯಾಯ್, ಶೆತ್ತಾರ್ಕು
ವೆಪ್ಪಮ್ ಕೊಡುಕ್ಕುಮ್ ವಿಮಲಾ ತುಯಿಲೆಳಾಯ್
ಶೆಪ್ಪೆನ್ನ ಮೆನ್ಮುಲೈ ಚ್ಚೆವ್ವಾಯ್ ಚ್ಚಿಱುಮರುಙ್ಗುಲ್
ನಪ್ಪಿನ್ನೈ ನಙ್ಗಾಯ್ ತಿರುವೇ ತುಯಿಲೆಳಾಯ್
ಉಕ್ಕಮುಮ್ ತಟ್ಟೊಳಿಯುಮ್ ತನ್ದು ಉನ್‌ಮಣಾಳನೈ
ಇಪ್ಪೋದೇ ಎಮ್ಮೈನೀರಾಟ್ಟೇಲೋರೆಮ್ಬಾವಾಯ್॥


ಮೂವತ್ತು ಮೂರು ಕೋಟಿ ದೇವತೆಗಳಿಗೆ ಬರಬಹುದಾದ ಕಷ್ಟಗಳನ್ನು ಮೊದಲೇ ತಿಳಿದುಕೊಂಡು ಅದನ್ನು ನಿವಾರಿಸುವವನೇ, ಅವರ ಎಲ್ಲಾ ಭಯಗಳನ್ನು ನಾಶಮಾಡುವ ಕಲಿಯೇ, ಎದ್ದೇಳು. ತುಂಬಾ ಪ್ರಾಮಾಣಿಕವಾದ ತನ್ನ ಭಕ್ತರ ವೈರಿಗಳನ್ನು ನಾಶಮಾಡುವ ತುಂಬಾ ಶುದ್ಧವಾದ ಮನಸ್ಸುಳ್ಳವನೇ , ತನ್ನ ವೈರಿಗಳಿಗೆ ಅತಿಯಾದ ಕಷ್ಟವನ್ನು ನೀಡುವ ವಿಮಲನೇ ಏಳು, ಎದ್ದೇಳು. ಬಂಗಾರದ ಕೊಡದಂತೆ ಇರುವವಳೇ, ಕೆಂಪಾಗಿರುವ ತುಟಿಗಳನ್ನು, ಮೃದುವಾದ ಸ್ತನಗಳನ್ನು ಹೊಂದಿರುವವಳೇ, ಸಣ್ಣದಾದ ಸೊಂಟವನ್ನು ಹೊಂದಿರುವವಳೇ, ಪೆರಿಯ ಪಿರಾಟ್ಟಿಗೇ ಸಮವಾಗಿರುವ ನಪ್ಪಿನ್ನೈ ಪಿರಾಟ್ಟಿಯೇ ಹಾಸಿಗೆಯಿಂದ ಎದ್ದೇಳು. ನಿನ್ನ ಗಂಡನಾದ ಶ್ರೀ ಕೃಷ್ಣನಿಗೆ ಪಂಖವನ್ನೂ, ಕನ್ನಡಿಯನ್ನೂ ಕೊಟ್ಟು ಎಬ್ಬಿಸು. ನಾವೆಲ್ಲಾ ಈಗಲೇ ‘ಕೃಷ್ಣಾನುಭವದಲ್ಲಿ’ ಮಿಂದು ಜಳಕವಾಡಬೇಕು ಎಂದು ಆಂಡಾಳ್ ಕೇಳಿಕೊಳ್ಳುತ್ತಾಳೆ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/05/thiruppavai-pasurams-16-20-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org









Leave a Comment