ತಿರುಪ್ಪಾವೈ – ಸರಳ ವಿವರಣೆ – ಆರರಿಂದಹದಿನೈದು ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

ತಿರುಪ್ಪಾವೈ

<< ಪಾಸುರಗಳು 1-5


ಈಗ ಆರರಿಂದ ಹದಿನೈದನೆಯ ಪಾಸುರದವರೆಗೂ, ಆಂಡಾಳ್ ನಾಚ್ಚಿಯಾರ್ ಹತ್ತು ಹಸು ಕಾಯುವ ಹುಡುಗಿಯರನ್ನು ಎಬ್ಬಿಸುತ್ತಾಳೆ. ಈ ಹತ್ತು ಪಾಸುರಗಳು ತಿರು ಆಯ್‌ಪ್ಪಾಡಿಯಲ್ಲಿರುವ ಐದು ಲಕ್ಷ ಹಸು ಕಾಯುವ ಹುಡುಗಿಯರನ್ನು ಎಬ್ಬಿಸುವುದಕ್ಕೆ ಸಮನಾಗಿದೆ.
ಈ ಪಾಸುರಗಳಲ್ಲಿ ಆಂಡಾಳ್ ಕ್ರಮಬದ್ಧವಾಗಿ ಹತ್ತು ಕನ್ಯೆಯರನ್ನು (ವೇದಗಳಲ್ಲಿ ಪರಿಣಿತರಾಗಿರುವವರನ್ನು) ನಿಯಮಿತವಾಗಿ ಎಬ್ಬಿಸುತ್ತಾಳೆ.

ಆರನೇ ಪಾಸುರಮ್:-
ಈ ಪಾಸುರದಲ್ಲಿ ಆಂಡಾಳ್ , ಕೃಷ್ಣಾನುಭವದಲ್ಲಿ ಹೊಸದಾಗಿ ಒಳಗೊಂಡ ಒಬ್ಬ ಕನ್ಯೆಯನ್ನು ಎಬ್ಬಿಸುತ್ತಾಳೆ. ಈ ಕನ್ಯೆ, ಕಣ್ಣನ ಅನುಭವ ಪಡೆಯುವುದರಲ್ಲಿ ತನಗೆ ತಾನೇ ಒಬ್ಬಳೇ ತೃಪ್ತಿ ಪಡುತ್ತಿರುತ್ತಾಳೆ. ಇದು ಪ್ರಥಮ ಪರ್ವ ನಿಷ್ಠೆ, ಕೃಷ್ಣನ ಅನುಭವ ಪಡೆಯುವುದರಲ್ಲಿ ಮೊದಲನೆಯ ಹಂತ. ಯಾರು ಇತರ ಭಕ್ತರ ಜೊತೆಗೂಡಿ ಕೃಷ್ಣಾನುಭವವನ್ನು ಪಡೆಯುತ್ತಾರೋ ಅದು ಚರಮ ಪರ್ವ ನಿಷ್ಠೆ. (ಕೊನೆಯ ಹಂತದಲ್ಲಿ ವಿವರಿಸಲಾಗಿದೆ.)

ಪುಳ್ಳುಮ್ ಶಿಲಮ್ಬಿನ ಕಾಣ್ ಪುಳ್ಳರೈಯನ್ ಕೋಯಿಲ್
ವೆಳ್ಳೈ ವಿಳಿಶಙ್ಗಿನ್ ಪೇರರವಮ್ ಕೇಟ್ಟಿಲೈಯೋ?
ಪಿಳ್ಳಾಯ್! ಎೞುನ್ದಿರಾಯ್ ಪೇಯ್ಮುಲೈ ನಞ್ಜುಣ್ಡು
ಕಳ್ಳಚ್ಚಗಡಮ್ ಕಲಕ್ಕೞಿಯ ಕ್ಕಾಲೋಚ್ಚಿ
ವೆಳ್ಳತರವಿಲ್ ತುಯಿಲಮರ್ನ್ದ ವಿತ್ತಿನೈ
ಉಳ್ಳತ್ತು ಕ್ಕೊಣ್ಡು ಮುನಿವರ್ಗಳುಮ್ ಯೋಗಿಗಳುಮ್
ಮೆಳ್ಳ ಎೞುನ್ದು ಅರಿಯೆನ್ರ ಪೇರರವಮ್
ಉಳ್ಳಮ್ ಪುಗುನ್ದು ಕುಳಿರ್ನ್ದೇಲೋರೆಮ್ಬಾವಾಯ್ ॥

ಹಕ್ಕಿಗಳು ದೇವಾಲಯದಲ್ಲಿ ಹಾರಾಡುತ್ತಾ, ಹಾಡುತ್ತಿವೆ. ಎಂಬೆರುಮಾನರ ಗುಡಿಯಿಂದ ಬೆಳ್ಳಗಿನ ಬಣ್ಣದ ಶಂಖಿನ ನಾದವು ಕೇಳಿಸುತ್ತಿಲ್ಲವೇ? ಎಂಬೆರುಮಾನರು ಈ ಹಕ್ಕಿಗಳಿಗೆಲ್ಲ ರಾಜನಾದ ಗರುಡನಿಗೆ ನಾಯಕ. ಎಲೆ ಹುಡುಗಿಯೇ, ಎದ್ದೇಳು ! ಎಂಬೆರುಮಾನರು ( ಕೃಷ್ಣನು ) ವಿಷವನ್ನು ಅದರ ಜೊತೆಗೆ ರಾಕ್ಷಸಿಯಾದ ಪೂತನೆಯ ಜೀವವನ್ನೂ ಕುಡಿದುಬಿಟ್ಟಿದ್ದಾನೆ. ಕಣ್ಣನು ತನ್ನ ಪುಟ್ಟ ಪಾದಗಳನ್ನು ವಿಸ್ತರಿಸಿ , ಶಕಟಾಸುರನೆಂಬ ವಂಚಕನಾದ ರಾಕ್ಷಸನಿದ್ದ ಬಂಡಿಯನ್ನು ಒದ್ದು, ಅವನನ್ನು ಸಂಹರಿಸಿದ್ದಾನೆ.
ಯಾರು ಆದಿಶೇಷನ ಮೇಲೆ ತಿರುಪ್ಪಾರ್ ಹಾಲಿನ ಸಮುದ್ರದಲ್ಲಿ ಮಲಗಿದ್ದಾರೋ, ಅಂತಹ ಎಂಬೆರುಮಾನರನ್ನು ಮುನಿಗಳು, ಯೋಗಿಗಳು ತಮ್ಮ ಹೃದಯದಲ್ಲಿ ಇಟ್ಟುಕೊಂಡು , ಅವನಿಗೆ ಹೆಚ್ಚು ತೊಂದರೆಮಾಡದೆ , ಅವನಿಗೆ ಸೇವೆ ಮಾಡುವ ಮನೋಭಾವನೆಯಿಂದ ಇದ್ದಾರೆ. ಅವರು ಬೆಳಗ್ಗೆ ಏಳುವಾಗ ಮಾಡುವ ‘ಹರಿ ಹರಿ’ ಎಂಬ ಬಲವಾದ ಶಬ್ದವು ನಮ್ಮ ಹೃದಯದೊಳಗೆ ಇಳಿದು ನಮ್ಮನ್ನು ತಂಪು ಮಾಡುತ್ತದೆ.

ಏಳನೆಯ ಪಾಸುರಮ್ :-
ಈ ಪಾಸುರದಲ್ಲಿ ಆಂಡಾಳ್ ಒಬ್ಬಳು ಚೆನ್ನಾಗೆ ಕೃಷ್ಣಾನುಭವವನ್ನು ಹೊಂದಿರುವ ಹಸುಮೇಯಿಸುವ ಬಾಲಿಕೆಯನ್ನು ಎಬ್ಬಿಸುತ್ತಾಳೆ. ಆದರೆ ಈ ಕನ್ಯೆಯು ಎಚ್ಚರವಾಗಿದ್ದರೂ ಆಂಡಾಳ್ ಮತ್ತು ಇತರ ಸ್ನೇಹಿತರ ಸವಿಯಾದ ಧ್ವನಿಯನ್ನು ಕೇಳಲು ಅವಳು ತನ್ನ ಮನೆಯ ಒಳಗೇ ಇರುತ್ತಾಳೆ.


ಕೀಶು ಕೀಶೆನ್ರು ಎಙ್ಗುಮ್ ಆನೈಚ್ಚಾತ್ತನ್
ಕಲನ್ದು ಪೇಶಿನ ಪೇಚ್ಚರವಮ್ ಕೇಟ್ಟಿಲೈಯೋ ಪೇಯ್‌ಪೆಣ್ಣೇ ?
ಕಾಶುಮ್ ಪಿರಪ್ಪುಮ್ ಕಲಕಲಪ್ಪ ಕ್ಕೈಪೇರ್ತು
ವಾಶ ನರುಙುೞಲ್ ಆಯ್‌ಚ್ಚಿಯರ್
ಮತ್ತಿನಾಲ್ ಓಶೈಪಡುತ್ತ ತಯಿರರವಮ್ ಕೇಟ್ಟಿಲೈಯೋ?
ನಾಯಗ ಪ್ಪೆಣ್‌ಪಿಳ್ಳಾಯ್! ನಾರಾಯಣನ್ ಮೂರ್ತಿ
ಕೇಶವನೈ ಪ್ಪಾಡವುಮ್ ನೀ ಕೇಟ್ಟೇ ಕಿಡತ್ತೀಯೋ?
ತೇಶ ಮುಡೈಯಾಯ್ ! ತಿರವೇಲೋರೆಮ್ಬಾವಾಯ್ ॥


ಓ! ಅಜ್ಞಾನಿಯಾದ ಬಾಲಿಕೆಯೇ! (ಕೃಷ್ಣನ ಮೇಲೆ ಭಕ್ತಿಯನ್ನು ಹೊಂದಿದ್ದರೂ ಅದನ್ನು ತಿಳಿಯದಿರುವ ) ನಿನಗೆ ‘ಕೀಶು ಕೀಶು’ ಎಂಬ ಹಕ್ಕಿ ಪಕ್ಷಿಗಳ ಕಲರವ ಕೇಳಿಸುತ್ತಿಲ್ಲವೇ? ನಿನಗೆ ಮೊಸರು ಕಡೆಯುವ ಕಡಗೋಲಿನ ಶಬ್ದ ಮತ್ತು ಮೊಸರು ಕಡೆಯುವ ಹೆಣ್ಣುಗಳು ಹಾಕಿಕೊಂಡಿರುವ ಕಾಸಿನ ಮಾಲೆ ಮತ್ತು ಪುಷ್ಪ ಮಾಲೆಗಳು ಒಂದಕ್ಕೊಂದು ತಾಕಿ ಮಾಡುವ ಶಬ್ದ, ಕೈಗಳ ಬಳೆಗಳ ಶಬ್ದ ಕೇಳಿಸುತ್ತಿಲ್ಲವೇ? ಸುವಾಸನೆಯಿಂದ ಕೂಡಿದ , ಸುಂದರವಾದ ಹೆರಳನ್ನು ಹೊಂದಿರುವ , ಚಿನ್ನದ ಮಣಿಗಳು ಶಬ್ದ ಮಾಡುತ್ತಿರುವ ಚಿನ್ನದ ಆಭರಣಗಳನ್ನು ಹಾಕಿಕೊಂಡಿರುವ ಗೋಪಿಕೆಯರ ನಾಯಕಿಯೇ, ನಾವು ನಾರಾಯಣನ ಅವತಾರವಾದ ಕೃಷ್ಣನ ಮೇಲೆ ಹಾಡುಗಳನ್ನು ಹಾಡುತ್ತಿರುವುದು ಕೇಳಿಯೂ ಹಾಗೆಯೇ ಮಲಗಿರುವೆಯಾ? ಎದ್ದು ಬಾಗಿಲನ್ನು ತೆರೆ. ಎಂದು ಆಂಡಾಳ್ ಹೇಳುತ್ತಾಳೆ.

ಎಂಟನೆಯ ಪಾಸುರಮ್:-
ಈ ಪಾಸುರದಲ್ಲಿ ಆಂಡಾಳ್ ಕಣ್ಣನಲ್ಲಿ ಅಧಿಕವಾಗಿ ಭಕ್ತಿಪರವಶಗೊಂಡ ಮತ್ತು ಆ ಭಕ್ತಿಯಿಂದ ಹೆಮ್ಮೆಯುಳ್ಳ ಒಬ್ಬ ಹಸುಮೇಯಿಸುವ ಹುಡುಗಿಯನ್ನು ಎಬ್ಬಿಸಲು ಹೋಗುತ್ತಾಳೆ.

ಕೀೞ್ ವಾನಮ್ ವೆಳ್ಳೆನ್ರು ಎರುಮೈ ಶಿರುವೀಡು
ಮೇಯ್‌ವಾನ್ ಪರನ್ದನ ಕಾಣ್ ಮಿಕ್ಕುಳ್ಳ ಪಿಳ್ಳೈಗಳುಮ್
ಪೋವಾನ್ ಪೋಗಿನ್ರಾರೈ ಪ್ಪೋಗಾಮಲ್ ಕಾತ್ತು, ಉನ್ನೈ
ಕ್ಕೂವುವಾನ್ ವನ್ದು ನಿನ್ರೋಮ್ , ಕೋದುಕಲಮುಡೈಯ
ಪಾವಾಯ್! ಎೞುನ್ದಿರಾಯ್ ಪಾಡಿಪ್ಪರೈ ಕೊಣ್ಡು
ಮಾವಾಯ್ ಪಿಳನ್ದಾನೈ ಮಲ್ಲರೈ ಮಾಟ್ಟಿಯ
ದೇವಾದಿ ದೇವನೈ ಶೆನ್ರು ನಾಮ್ ಚೇವಿತ್ತಾಲ್
ಆವಾವೆನ್ರು ಆರಾಯ್‌ನ್ದು ಅರುಳೇಲೋರೆಮ್ಬಾವಾಯ್ ॥


ಕೃಷ್ಣನು ಇಷ್ಟಪಡುವ ಹುಡುಗಿಯನ್ನು ಆಂಡಾಳ್ ಎಬ್ಬಿಸಲು ಹೋಗುತ್ತಾಳೆ. ಹೇ! ಕೃಷ್ಣನೇ ಇಷ್ಟ ಪಡುವ ಹುಡುಗಿಯೇ ! ಪೂರ್ವ ದಿಕ್ಕಿನಲ್ಲಿ ಇರುವ ಅಂಧಕಾರ ಸೂರ್ಯನ ಬೆಳಕಿನಿಂದ ತಿಳಿಯಾಗುತ್ತಿದೆ. ಎತ್ತುಗಳು ಮತ್ತು ಹಸುಕರುಗಳನ್ನು ಸ್ವಲ್ಪ ಕಾಲಕ್ಕೆ ಹೊರ ಬಿಡಲಾಗಿದೆ. ನಾವು ನಿನ್ನ ಮನೆಯ ಬಾಗಿಲಿಗೆ ಬಂದಾಗಿದೆ. ಜಳಕವಾಡಲು ಹೋಗಬೇಕಾಗಿರುವ (ಇಲ್ಲಿ ಕೈಂಕರ್ಯಕ್ಕೆ ಹೋಗಬೇಕಾಗಿರುವ ಎಂದು ಅರ್ಥೈಸಿಕೊಳ್ಳಬೇಕು) ಬಾಲಿಕೆಯರನ್ನು ತಡೆದು ನಿಲ್ಲಿಸಿದ್ದೇವೆ. ಏಕೆಂದರೆ ಆ ಪ್ರಯೋಜನವನ್ನು ಎಲ್ಲಾರೂ ಸೇರಿ (ನಿನ್ನನ್ನೂ ಸೇರಿ) ಪಡೆದುಕೊಳ್ಳೋಣ ಎಂದು ನಿನ್ನ ಬಾಗಿಲಿಗೆ ಬಂದು ಕರೆಯಲು ನಿಂತಿದ್ದೇವೆ. ಏಳು! ಎದ್ದೇಳು! ಕಂಸನ ಆಸ್ಥಾನದಲ್ಲಿ ನಡೆದ ಮಲ್ಲಯುಧ್ಧದಲ್ಲಿ ಎಲ್ಲಾ ಮಲ್ಲರ ಮೇಲೆ ವಿಜಯ ಸಾಧಿಸಿದ ಮತ್ತು ಎಲ್ಲಾ ನಿತ್ಯಸೂರ್ಯರಿಗೇ ಒಡೆಯನಾದ ಶ್ರೀಕೃಷ್ಣನು ನಮ್ಮ ತಪ್ಪು ಒಪ್ಪುಗಳನ್ನು ಸರಿಪಡಿಸಿ , ನಮಗೆ ಏನು ಬೇಕೆಂದು ತಿಳಿದುಕೊಂಡು ನಮಗೆ ಶೀಘ್ರವಾಗಿ ಆಶೀರ್ವದಿಸುತ್ತಾನೆ. ಎಂದು ಆಂಡಾಳ್ ಎಬ್ಬಿಸುತ್ತಾಳೆ .

ಒಂಬತ್ತನೇ ಪಾಸುರಮ್:-
ಈ ಪಾಸುರದಲ್ಲಿ ಆಂಡಾಳ್, ಕೃಷ್ಣನನ್ನೇ ಬಲವಾಗಿ ನಂಬಿರುವ ಮತ್ತ ಅವನನ್ನು ಪಡೆಯಲು ಅವನನ್ನೇ ಸಾಧನವಾಗಿ ನಂಬಿರುವ ಹಸುಮೇಯಿಸುವ ಹುಡುಗಿಯನ್ನು ಎಬ್ಬಿಸಲು ಹೋಗುತ್ತಾಳೆ. ಈ ಹುಡುಗಿಯ ಭಕ್ತಿ ಸೀತಾಮಾತೆಯ ಹಾಗೆ, ‘ನನ್ನನ್ನು ಶ್ರೀರಾಮನೇ ಬಂದು ರಕ್ಷಿಸುವನು ‘, ಎಂದು ಹನುಮಂತನಿಗೆ ಹೇಳಿದ ಹಾಗೆ, ಈ ಹುಡುಗಿಯೂ ಪರಮಾತ್ಮನನ್ನು ಅವನನ್ನು ಪಡೆಯಲು ಅವನನ್ನೇ ಸಾಧನವಾಗಿ ನಂಬಿದ್ದಾಳೆ.

ತೂಮಣಿಮಾಡತ್ತು ಚುಟ್ರುಮ್ ವಿಳಕ್ಕೆರಿಯ
ದೂಪಮ್ ಕಮೞ ತ್ತುಯಿಲಣೈಮೇಲ್ ಕಣ್‌ವಳರುಮ್
ಮಾಮಾನ್ ಮಗಳೇ ! ಮಣಿಕ್ಕದವಮ್ ತಾಳ್ ತಿರವಾಯ್,
ಮಾಮೀರ್ ಅವಳೈ ಯೆೞುಪ್ಪೀರೋ? ಉನ್ ಮಗಳ್ ತಾನ್
ಊಮೈಯೋ? ಅನ್ರಿಚ್ಚೆವಿಡೋ? ಅನನ್ದಲೋ?
ಏಮಪ್ಪೆರುಮ್ ತುಯಿಲ್ ಮನ್ದಿರಪ್ಪಟ್ಟಾಳೋ?
ಮಾಮಾಯನ್ ಮಾಧವನ್ ವೈಗುನ್ದನೆನ್ರೆನ್ರು,
ನಾಮಮ್ ಪಲವುಮ್ ನವಿನ್ರೇಲೋರೆಮ್ಬಾವಾಯ್॥


ಓಹ್! ನನ್ನ ಸೋದರಮಾವನ ಮಗಳೇ, ನೀನು ಸುಸಜ್ಜಿತವಾದ , ಸುವ್ಯವಸ್ಥಿತವಾದ ಮಳಿಗೆಯ ಮನೆಯಲ್ಲಿ ಸುತ್ತಲೂ ಪ್ರಕಾಶವಾದ , ಎಂತಹ ಕೊರತೆಯೂ ಇಲ್ಲದ ವೈಢೂರ್ಯಗಳಿಂದ ಆವರಿಸಲ್ಪಟ್ಟ ಕೋಣೆಯಲ್ಲಿ ಮಲಗಿದ್ದೀಯ! ಸುತ್ತಲೂ ಸುಗಂಧಿತ ದ್ರವ್ಯಗಳು ಪಸರಿಸಿವೆ. ಮೆಲ್ಲನೆ ಇಳಿದು ಬಂದು ಕೆಂಪು ರತ್ನಗಳಿಂದ ಕೂಡಿದ ಬಾಗಿಲ ಚಿಲಕವನ್ನು ತೆರೆ. ಓಹ್! ಅತ್ತೆಯೇ!! ನಿನ್ನ ಮಗಳನ್ನು ಎಬ್ಬಿಸು !, ನಿನ್ನ ಮಗಳು ಕಿವುಡಿಯೇ? ಮೂಕಳೇ? ಇಲ್ಲವಾದರೆ ರಕ್ಷಣೆಯಲ್ಲಿಟ್ಟಿದ್ದೀರಾ? ಅವಳಿಗೆ ಯಾರಿಂದಲಾದರೂ ಹೆಚ್ಚಾಗಿ ಮಲಗುವ (ನಿದ್ದೆ ಮಾಡುವ) ಶಾಪವಿದೆಯೇ ? ನಾವು ಎಂಬೆರುಮಾನರ ಹಲವು ತಿರುನಾಮಗಳನ್ನು ಹೇಳುತ್ತಿದ್ದೇವೆ. ಮಾಮಾಯನ್ ( ವಿಚಿತ್ರ ಮಾಯೆಯುಳ್ಳವನು ), ಮಾಧವನ್ (ಶ್ರೀಲಕ್ಷ್ಮಿ ಜೊತೆಯಲ್ಲಿರುವವನು ), ವೈಕುಂಠನ್ (ಶ್ರೀ ವೈಕುಂಠದಲ್ಲಿರುವವನು) ಎಂದು ಮತ್ತೆ ಮತ್ತೆ ಹಾಡುತ್ತಿದ್ದೇವೆ. ಆದರೂ ನಿನ್ನ ಮಗಳು ಏಳುತ್ತಿಲ್ಲವೆ? ಎಂದು ಆಂಡಾಳ್ ತನ್ನ ಮಾವನ ಮಗಳನ್ನು ಎಬ್ಬಿಸುತ್ತಾಳೆ.


ಹತ್ತನೆಯ ಪಾಸುರಮ್:-
ಈ ಪಾಸುರದಲ್ಲಿ ಆಂಡಾಳ್, ಕೃಷ್ಣನಿಗೆ ತುಂಬಾ ಹತ್ತಿರವಾಗಿರುವ ಒಬ್ಬ ಹಸು ಕಾಯುವ ಹುಡುಗಿಯನ್ನು ಎಬ್ಬಿಸುತ್ತಾಳೆ. ಆ ಹುಡುಗಿಯು ಎಂಬೆರುಮಾನರೇ ಅವರನ್ನು ಪಡೆಯಲು ದಾರಿ ಎಂದು ದೃಢವಾಗಿ ನಂಬಿರುತ್ತಾಳೆ ಮತ್ತು ಆ ದಾರಿಯಲ್ಲಿ ಕೈಂಕರ್ಯವನ್ನೂ ಮಾಡುತ್ತಿರುತ್ತಾಳೆ. ಆದ್ದರಿಂದ ಕೃಷ್ಣನಿಗೆ ಈ ಹುಡುಗಿಯೆಂದರೆ ಅಚ್ಚುಮೆಚ್ಚು.


ನೋತ್ತುಚ್ಚುವರ್ಕಮ್ ಪುಗುಹಿನ್ರ ಅಮ್ಮನಾಯ್
ಮಾಟ್ರಮುಮ್ ತರಾರೋ ವಾಶಲ್ ತಿಱವಾದಾರ್
ನಾತ್ತ ತ್ತುೞಾಯ್ ಮುಡಿ ನಾರಾಯಣನ್ , ನಮ್ಮಾಲ್
ಪೋತ್ತಪ್ಪಱೈತರುಮ್ ಪುಣ್ಣಿಯನಾಲ್, ಪಣ್ಡೊರುನಾಳ್
ಕೂಟ್ರತ್ತಿನ್ ವಾಯ್ವೀೞ್‌ನ್ದ ಕುಮ್ಬಕರಣನುಮ್
ತೋಟ್ರುಮ್ ಉನಕ್ಕೇ ಪೆರುನ್ದುಯಿಲ್ ತಾನ್ ತನ್ದಾನೋ
ಆತ್ತ ಅನನ್ದಲುಡೈಯಾಯ್ ಅರುಙ್ಗಲಮೇ
ತೇಟ್ರಮಾಯ್ ‌ವನ್ದು ತಿಱವೇಲೋರೆಮ್ಬಾವಾಯ್||


ಓಹ್! ಹುಡುಗಿಯೇ, ನೀನು ಭಗವಂತನನ್ನು ಸದಾಕಾಲ ನೆನೆದು ನಿರಂತರ ಸ್ವರ್ಗವನ್ನೇ ಅನುಭವಿಸಿದ್ದೀಯ! ನಿನ್ನ ಮನೆಯ ದ್ವಾರವು ತೆರೆದಿಲ್ಲವಾದರೂ , ಯಾರಾದರೂ ಮನೆಯ ಒಳಗಿನಿಂದ ಉತ್ತರಿಸುತ್ತೀರ?
ಕುಂಭಕರ್ಣನು ಎಂಬೆರುಮಾನರಾದ ಶ್ರೀರಾಮರಿಂದ ಯಮನ ಬಾಯಿಗೆ ಬೀಳುತ್ತಾನೆ. ಅಂತಹ ಕುಂಭಕರ್ಣನೇ ನಿನಗೆ ಸೋತು ತನ್ನ ನಿತ್ಯಗುಣವಾದ ದೀರ್ಘಕಾಲ ನಿದ್ದೆಯನ್ನು ನಿನಗೆ ದಯಪಾಲಿಸಿದ್ದಾನೆಯೇ? ಸದಾ ಸುಗಂಧಿತವಾದ ತುಳಸಿಯ ಮಾಲೆಯನ್ನು ಹಾಕಿಕೊಂಡಿರುವ ನಾರಾಯಣನು ನಮ್ಮೆಲ್ಲರಿಂದ ಪಲ್ಲಾಣ್ಡು ಮತ್ತು ಇತರ ಗುಣಗಾನ ಮಾಡಲ್ಪಡುವನು. ಅವನು , ಕೈಂಕರ್ಯಗಳನ್ನು ಮಾಡಲು ಹಾಗು ಸೇವಾ ಭಾಗ್ಯವನ್ನೂ ನಮಗೆ ಕೊಡುತ್ತಾನೆ. ಓಹ್ ಹುಡುಗಿಯೇ! ನೀನು ಅತಿ ಸುಂದರವಾದ ನಿದ್ದೆಯನ್ನು ಮಾಡಿದ್ದೀಯ. ಅತಿ ಅಪರೂಪದ ಆಭರಣವೇ ! ನಿನ್ನ ನಿದ್ದೆಯಿಂದ ತಿಳಿದೆದ್ದು ಎಚ್ಚರಿಕೆಯಿಂದ ಕದವನ್ನು ತೆರೆ, ಎಂದು ಆಂಡಾಳ್ ಎಬ್ಬಿಸುತ್ತಾಳೆ.

ಹನ್ನೊಂದನೆಯ ಪಾಸುರಮ್:-
ಈ ಪಾಸುರದಲ್ಲಿ ಆಂಡಾಳ್ ಬೃಂದಾವನದಲ್ಲಿ ಅತ್ಯಂತ (ಕೃಷ್ಣನ ಹಾಗೆ) ಪ್ರೀತಿ ಪಾತ್ರಳಾದ ಕನ್ಯೆಯನ್ನು ಎಬ್ಬಿಸಲು ಹೋಗುತ್ತಾಳೆ. ಈ ಪಾಸುರದಲ್ಲಿ ವರ್ಣಾಶ್ರಮ ಧರ್ಮದ ಮಹತ್ವದ ಬಗ್ಗೆ ಹೇಳಿದ್ದಾರೆ. ಈ ಕನ್ಯೆಯು ವರ್ಣಾಶ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಸು ಕಾಯುವವರ ಮನೆಯಲ್ಲಿ ಜನಿಸಿರುತ್ತಾಳೆ.


ಕಟ್ರು ಕರವೈ ಕ್ಕಣಙ್ಗಳ್ ಪಲಕಱನ್ದು
ಶೆಟ್ರಾರ್ ತಿಱಲೞಿಯ ಚ್ಚೆನ್ರು ಶೆರುಚ್ಚೆಯ್ಯುಮ್
ಕುಟ್ರಮ್ ಒನ್ರಿಲ್ಲಾದ ಕೋವಲರ್ ತಮ್ ಪೊಱ್ಕೊಡಿಯೇ
ಪುಟ್ರರ ವಲ್‌ಕುಲ್ ಪುನಮಯಿಲೇ ಪೋದರಾಯ್
ಶುಟ್ರತ್ತು ತೋೞಿಮಾರ್ ಎಲ್ಲಾರುಮ್ ವನ್ದು, ನಿನ್
ಮುಟ್ರಮ್ ಪುಗುನ್ದು ಮುಗಿಲ್‌ವಣ್ಣನ್ ಪೇರ್‌ಪಾಡ
ಚಿಟ್ರಾದೇ ಪೇಶಾದೇ ಶೆಲ್ವಪ್ಪೆಣ್ಡಾಟ್ಟಿ, ನೀ
ಎಟ್ರುಕ್ಕು ಉಱಙ್ಗುಮ್ ಪೊರುಳೇಲೋರೆಮ್ಬಾವಾಯ್॥


ಓಹ್! ಚಿನ್ನದ ಬಳ್ಳಿಯಂತಹವಳೇ! ಹಸು ಕಾಯುವ ದಿನವೂ ಗುಂಪಾಗಿ ಯುವ ಹಸುಗಳ ಹಾಲನ್ನು ಕರೆಯುವ, ಧೈರ್ಯದಿಂದ ಶತ್ರುಗಳ ಗುಹೆಯೊಳಗೆ ನುಗ್ಗಿ , ಅವರ ಬಲವನ್ನು ನಾಶಗೊಳಿಸುವ , ಯಾರು ಕೊರತೆಯಿಲ್ಲದಿರುವರೋ, ಯಾರು ಶತ್ರುಗಳು ಓಡಿ ಹೋದರೆ , ಅವರ ಮೇಲೆ ಬಲ ಪ್ರಯೋಗಿಸುವುದಿಲ್ಲವೋ , ಅವರ ವಂಶದಲ್ಲಿ ಜನಿಸಿರುವವಳೇ! ನಿನ್ನ ನಡುವು ಸರ್ಪ ತನ್ನ ಹುತ್ತದಲ್ಲಿರುವಾಗ ಅಡಗಿರುವ ಅದರ ಹೆಡೆಯಂತಿದೆ. ನೀನು ನವಿಲು ತನ್ನ ಅರಣ್ಯದಲ್ಲಿರುವನಂತೆ ಸುಖದಿಂದಿದ್ದೀಯ. ಹೊರಗೆ ಬಾ! ನಿನ್ನ ಗೆಳತಿಯರಾದ , ನಿನ್ನ ಬಂಧುಗಳಾದ ನಾವೆಲ್ಲರೂ ನಿನ್ನ ಮನೆಯ ಅಂಗಳದ ಒಳಗೆ ಬಂದು ನಿನಗಾಗಿ ಕಾಯುತ್ತಿದ್ದೇವೆ. ನಾವು ಮುಗಿಲಿನಂತೆ ಕಪ್ಪಾಗಿರುವ ಪೆರುಮಾಳಿನ ನಾಮಗಳನ್ನು ಹಾಡುತ್ತಿದ್ದೇವೆ. ನಮಗೆ ಸಿಕ್ಕ ನಿಧಿಯಂತಿರುವ ಗೆಳತಿಯೇ ! ಏಕೆ ಇನ್ನೂ ನಿದ್ದೆ ಮಡುತ್ತಿರುವೆ? ಇನ್ನೂ ಏಕೆ ಮಾತನಾಡುತ್ತಿಲ್ಲ ಎಂದು ಆಂಡಾಳ್ ಎಬ್ಬಿಸುತ್ತಾಳೆ.

ಹನ್ನೆರಡನೇ ಪಾಸುರಮ್:-

ಈ ಪಾಸುರದಲ್ಲಿ ಆಣ್ಡಾಳ್ ಹಸುಮೇಯಿಸುವ ಹುಡುಗನ ತಂಗಿಯನ್ನು ಎಬ್ಬಿಸುತ್ತಾಳೆ. ಈ ಹುಡುಗನು ಕೃಷ್ಣನಿಗೆ ಬಹಳ ಹತ್ತಿರದ ಸ್ನೇಹಿತ . ಈ ಹುಡುಗನು ವರ್ಣಾಶ್ರಮ ಧರ್ಮವನ್ನು ಸರಿಯಾಗಿ ಪಾಲಿಸುವುದಿಲ್ಲ . ಯಾವಾಗ ಒಬ್ಬರು ಕೃಷ್ಣನ ಕೈಂಕರ್ಯದಲ್ಲಿ ಪೂರಾ ಮುಳುಗಿದ್ದಾರೋ, ವರ್ಣಾಶ್ರಮ ಧರ್ಮದ ಮುಖ್ಯತ್ವ ಅವರಿಗೆ ಬೇಕೆನಿಸುವುದಿಲ್ಲ . ಆದರೂ , ಅವನು ತನ್ನ ಕೈಂಕರ್ಯಗಳನ್ನು ಮುಗಿಸಿದ ಮೇಲೆ ಮತ್ತು ತನ್ನ ದಿನಚರಿಯ ಕೆಲಸಗಳನ್ನು ಮಾಡಿದ ಮೇಲೆ ವರ್ಣಾಶ್ರಮದ ಧರ್ಮವನ್ನು ಪಾಲಿಸುತ್ತಾನೆ .


ಕನೈತ್ತು ಇಳಙ್ಗಟ್ರು ಎರುಮೈ ಕನ್ರುಕ್ಕಿರಙ್ಗಿ
ನಿನೈತ್ತು ಮುಲೈವೞಿಯೇ ನಿನ್ರುಪಾಲ್‌ಶೋರ,
ನನೈತ್ತು ಇಲ್ಲಮ್ ಶೇಱಾಕ್ಕುಮ್ ನಱ್ಚೆಲ್ವನ್ ತಙ್ಗಾಯ್,
ಪನಿತ್ತಲೈ ವೀೞ ನಿನ್ ವಾಶಱ್ಕಡೈ ಪಟ್ರಿ
ಚಿನತ್ತಿನಾಲ್ ತ್ತೆನ್ನಿಲಙ್ಗೈ ಕ್ಕೋಮಾನೈ ಚ್ಚೆಟ್ರು
ಮನತ್ತುಕ್ಕು ಇನಿಯಾನೈ ಪ್ಪಾಡವುಮ್ ನೀ ವಾಯ್ ತಿಱವಾಯ್
ಇನಿತ್ತಾನ್ ಎೞುನ್ದಿರಾಯ್ ಈದೆನ್ನ ಪೇರುಱಕ್ಕಮ್
ಅನೈತ್ತಿಲ್ಲತ್ತಾರುಮ್ ಅಱಿನ್ದೇಲೋರೆಮ್ಬಾವಾಯ್॥



ಈ ಮನೆಯಲ್ಲಿ ( ಆಣ್ಡಾಳ್ ಎಬ್ಬಿಸಲು ಬಂದಿರುವ ಹುಡುಗಿಯ ಮನೆಯಲ್ಲಿ ) ಎಮ್ಮೆಗಳಿಗೆ , ಹಸುಗಳಿಗೆ , ಕರುಗಳಿವೆ . ಆ ಕರುಗಳು ತಮ್ಮ ತಾಯಿಯಂದಿರನ್ನು ಕೂಗಿ ಕರೆಯುತ್ತಿವೆ . ಕರುಗಳನ್ನು ಹಸುಗಳು ನೆನೆದುಕೊಂಡು ಕನಿಕರ ಪಡುತ್ತಿವೆ . ಅವು ತಮ್ಮ ಕೆಚ್ಚಲಿಂದ ಕರುಗಳಿಗಾಗಿ ಹಾಲು ಸುರಿಸುತ್ತಿವೆ . ಈ ಹಾಲು ಹರಿದು ಮನೆಯನ್ನೆಲ್ಲ ಕೆಸರು ಮಾಡುತ್ತಿದೆ . ಕೃಷ್ಣನಿಗೇ ಸೇವೆಯನ್ನು ಮಾಡುತ್ತಿರುವುದರಿಂದ ಈ ಕೆಲಸಗಳಲ್ಲಿ ಅಸಡ್ಡೆಯಾಗಿ ಮಲಗಿಕೊಂಡಿರುವೆಯಾ ? ನಾವು ನಮ್ಮ ತಲೆಯ ಮೇಲೆ ಮಂಜಿನ ಹನಿಗಳು ಬೀಳುತ್ತಿದ್ದರೂ , ಸುಂದರ ಶ್ರೀಲಂಕೆಗೇ ರಾಜನಾದ ರಾವಣನ ತಲೆಯನ್ನು ತುಂಡರಿಸಿದ ಎಂಬೆರುಮನರಾದ ಶ್ರೀರಾಮನ ಹಾಡುಗಳನ್ನು ಹೇಳುತ್ತಿದ್ದೇವೆ . ನಮ್ಮ ಮನಸ್ಸಿಗೆ ಸಂತೋಷವನ್ನು ಕೊಡುತ್ತಿರುವ ಶ್ರೀರಾಮನ ನಾಮಸಂಕೀರ್ತನೆ ಕೇಳಿಯೂ ನೀನು ಮಾತನಾಡುತ್ತಿಲ್ಲ . ಈಗಲಾದರೂ ಎದ್ದೇಳು . ಎಷ್ಟು ಹೊತ್ತು ಮಲಗಿಕೊಂಡಿದ್ದೀಯ ? ಇಲ್ಲಿ ತಿರುಆಯ್ ಪ್ಪಾಡಿಯಲ್ಲಿರುವ ಎಲ್ಲಾ ಜನಗಳಿಗೂ ನಿನ್ನ ನಿದ್ರೆಯ ಬಗ್ಗೆ ತಿಳಿದಾಗಿದೆ . ಎಂದು ಆಂಡಾಳ್ ಎಬ್ಬಿಸುತ್ತಾಳೆ .

ಹದಿಮೂರನೆಯ ಪಾಸುರಮ್:-

ಈ ಪಾಸುರದಲ್ಲಿ ಆಂಡಾಳ್ , ತನ್ನ ಕಣ್ಣುಗಳನ್ನೆ ನೋಡಿ ಅವುಗಳ ಅಂದವನ್ನು ಸ್ವಾದಿಸುತ್ತಿರುವ ಹುಡುಗಿಯನ್ನು ಎಬ್ಬಿಸುತ್ತಾಳೆ. ಈ ಹುಡುಗಿಗೆ ಕೃಷ್ಣನ ಬಗ್ಗೆ ಸಂಪೂರ್ಣ ಜ್ಞಾನವಿದ್ದು , ಕೃಷ್ಣನೇ ತನ್ನನ್ನು ಹುಡುಕಿ ತಾನೇ ಬರುವನೆಂದು ನಂಬಿದ್ದಳು. ಕೃಷ್ಣನನ್ನು ಅರವಿಂದ ಲೋಚನ (ತಾವರೆಯಂತಹ ಕಣ್ಣುಗಳುಳ್ಳವನು ) ಎಂದೂ ಕರೆಯುತ್ತಿದ್ದರಿಂದ ತನ್ನ ಕಣ್ಣುಗಳು ಕೃಷ್ಣನ ಕಣ್ಣುಗಳಿಗೆ ಹೋಲಿಕೆಯಾಗುತ್ತದೆ ಎಂದು ನಂಬಿದ್ದಳು.


ಪುಳ್ಳಿನ್ ವಾಯ್ ಕೀಣ್ಡಾನೈ ಪ್ಪೊಲ್ಲಾ ಅರಕ್ಕನೈ
ಕ್ಕಿಳ್ಳಿಕ್ಕಳೈನ್ದಾನೈ ಕ್ಕೀರ್ತಿಮೈ ಪ್ಪಾಡಿಪ್ಪೋಯ್
ಪಿಳ್ಳೈಹಳೆಲ್ಲಾರುಮ್ ಪಾವೈಕ್ಕಳಮ್ ಪುಕ್ಕಾರ್
ವೆಳ್ಳಿಯೆೞುನ್ದು ವಿಯಾೞಮ್ ಉಱಙ್ಗಿಟ್ರು
ಪುಳ್ಳುಮ್ ಶಿಲಮ್ಬಿನ ಕಾಣ್ ಪೋದರಿಕ್ಕಣ್ಣಿನಾಯ್
ಕುಳ್ಳಕುಳಿರ ಕ್ಕುಡೈನ್ದು ನೀರಾಡಾದೇ
ಪಳ್ಳಿಕ್ಕಿಡತ್ತೀಯೋ ಪಾವಾಯ್ ನೀ ನನ್ನಾಳಾಲ್
ಕಳ್ಳಮ್ ತವಿರ್ನ್ದು ಕಲನ್ದು ಏಲೋರೆಮ್ಬಾವಾಯ್॥


ಎಲ್ಲಾ ಗೋಪಿಕೆಯರೂ ವ್ರತವನ್ನು ಪಾಲಿಸುವ ಸ್ಥಳಕ್ಕೆ (ಕೃಷ್ಣನೇ ಗುರುತಿಸಿಕೊಟ್ಟ ಸ್ಥಳಕ್ಕೆ) ಬಂದು ಸೇರುತ್ತಾರೆ. ಅವರು ಎಂಬೆರುಮಾನರ ವೀರತ್ವವನ್ನು ಕೊಂಡಾಡುತ್ತಿರುತ್ತಾರೆ. ಕೊಕ್ಕರೆ ಪಕ್ಷಿಯ ರೂಪದಲ್ಲಿದ್ದ ಬಕಾಸುರನೆಂಬ ರಾಕ್ಷಸನ ಬಾಯಿಯನ್ನು ಹರಿದಿದ್ದು, ನಿರಾಯಾಸವಾಗಿ ಕೆಟ್ಟತನದಿಂದಿದ್ದ ರಾಕ್ಷಸ ರಾವಣನನ್ನು ಕೊಂದಿದ್ದು ಎಲ್ಲವನ್ನೂ ಹಾಡಿ ಹೊಗಳುತ್ತಿರುತ್ತಾರೆ.
ಶುಕ್ರ ಗ್ರಹವು ಆಕಾಶದಲ್ಲಿ ಏರಿದೆ ಮತ್ತು ಗುರುಗ್ರಹವು ಆಕಾಶದಿಂದ ಮಾಯವಾಗಿದೆ. ಹಕ್ಕಿ ಪಕ್ಷಿಗಳು ಆಹಾರವನ್ನು ಹುಡುಕುತ್ತಾ ಚದುರಿ ಹೊರಟಿವೆ.
ಓಹ್! ಜಿಂಕೆಯ ಕಣ್ಣಿನಂತಹ ಮತ್ತು ಹೂಮೊಗ್ಗಿನಂತಹ ಕಣ್ಣುಗಳನ್ನು ಹೊಂದಿರುವ ಗೋಪಿಕೆಯೇ ! ಸಹಜವಾದ ಹೆಣ್ತನವನ್ನು ಹೊಂದಿರುವವಳೇ! ಇಂತಹ ಆಶ್ಚರ್ಯಕರವಾಗಿ ಬಂದಿರುವ ಒಳ್ಳೆಯ ದಿನದಲ್ಲಿ ಮಲಗಿ ನಿದ್ರಿಸುತ್ತಿರುವೆಯಾ? ಕೃಷ್ಣನನ್ನು ಒಬ್ಬಳೇ ಆನಂದಿಸದೇ ಎಲ್ಲರ ಜೊತೆಗೂಡಿ ಕೈಂಕರ್ಯವನ್ನು ಮಾಡು ಎಂದು ಆಂಡಾಳ್ ಎಬ್ಬಿಸುತ್ತಾಳೆ.

ಹದಿನಾಲ್ಕನೆಯ ಪಾಸುರಮ್:-

ಇಲ್ಲಿ ಆಂಡಾಳ್ , ಎಲ್ಲರನ್ನೂ ತಾನೇ ಎಬ್ಬಿಸುವಂತೆ ಮಾತು ಕೊಟ್ಟಿರುವ, ಬದಲಿಗೆ ತಾನೇ ತನ್ನ ಮನೆಯಲ್ಲಿ ನಿದ್ರಿಸುತ್ತಿರುವ ಗೋಪಿಕೆಯನ್ನು ಎಬ್ಬಿಸುತ್ತಾಳೆ.


ಉಙ್ಗಳ್ ಪುೞೈಕ್ಕಡೈ ತೋಟ್ಟತ್ತು ವಾವಿಯುಳ್
ಶೆಙ್ಗೞುನೀರ್ ವಾಯ್‌ನೆಹಿೞ್‌ನ್ದು ಆಮ್ಬಲ್‌ವಾಯ್ ಕೂಮ್ಬಿನಕಾಣ್
ಸೆಂಗಲ್ ಪೊಡಿಕ್ಕೂರೈ ವಣ್ ಪಲ್ ತವತ್ತವರ್
ತಙ್ಗಳ್ ತಿರುಕ್ಕೋಯಿಲ್ ಶಙ್ಗಿಡುವಾನ್ ಪೋತನ್ದಾರ್
ಎಙ್ಗಳೈ ಮುನ್ನಮ್ ಎೞುಪ್ಪುವಾನ್ ವಾಯ್‌ಪೇಶುಮ್
ನಙ್ಗಾಯ್ ಎೞುನ್ದಿರಾಯ್ ನಾಣಾದಾಯ್ ನಾವುಡೈಯಾಯ್
ಶಙ್ಗೊಡು ಶಕ್ಕರಮ್ ಏನ್ದುಮ್ ತಡಕ್ಕೈಯನ್
ಪಙ್ಗಯಕ್ಕಣ್ಣಾನೈ ಪ್ಪಾಡೇಲೋರೆಮ್ಬಾವಾಯ್॥


ನಮ್ಮನ್ನೆಲ್ಲಾ ಎಬ್ಬಿಸುವಂತೆ ಮಾತುಕೊಟ್ಟ, ಆ ಮಾತಿಗೆ ಸರಿಯಾಗಿ ನಡೆಯದೆ ಮಲಗಿ ಕೊಂಡಿರುವ ಮತ್ತು ಅದಕ್ಕಾಗಿ ಪಶ್ಚಾತ್ತಾಪವನ್ನೂ ಪಡದೇ ಇರುವ, ಸವಿಯಾಗಿ ಮಾತನಾಡುವ ಕಲೆಯನ್ನು ಹೊಂದಿರುವ ಗೋಪಿಕೆಯೇ, ನಿನ್ನ ಮನೆಯ ಹಿಂಭಾಗದ ತೋಟದ ಕೊಳದಲ್ಲಿ ಕಮಲದ ಹೂಗಳು ಅರಳುತ್ತಿವೆ ಮತ್ತು ನೈದಿಲೆಯ ಹೂಗಳು ಮುಚ್ಚಿಕೊಳ್ಳುತ್ತಿವೆ. (ಬೆಳಗಾಗುತ್ತಿರುವುದಕ್ಕೆ ಸಾಕ್ಷಿಯಾಗಿ ) , ತಪಸ್ವಿಗಳು , ಬಿಳುಪಾದ ಹಲ್ಲುಗಳನ್ನು ಹೊಂದಿದ್ದು, ಕೆಸರೀ ವಸ್ತ್ರದೊಂದಿಗೆ ಬೆಳಗಿನ ಶಂಖವನ್ನೂದಲು ಗುಡಿಯ ಕಡೆಗೆ ಹೊರಟಿದ್ದಾರೆ. (ಗುಡಿಯು ತೆರೆಯುವ ಸಮಯ ). ನೀನೂ ಬೇಗ ಎದ್ದು , ಸುಂದರವಾದ ತನ್ನ ತೋಳುಗಳಲ್ಲಿ ದಿವ್ಯವಾದ ಶಂಖ ಚಕ್ರಗಳನ್ನು ಹಿಡಿದಿರುವ ಮತ್ತು ಕಮಲದ ಹಾಗೆ ಕೆಂಪಾಗಿರುವ ಕಣ್ಣುಗಳನ್ನು ಹೊಂದಿರುವ ಮಹಾಮಹಿಮನ ಬಗ್ಗೆ ಹಾಡುಗಳನ್ನು ಹಾಡು ಎಂದು ಆಂಡಾಳ್ ಗೋಪಿಕೆಯನ್ನು ಎಬ್ಬಿಸುತ್ತಾಳೆ.

ಹದಿನೈದನೆಯ ಪಾಸುರಮ್:-

ಈ ಪಾಸುರದಲ್ಲಿ ಆಂಡಾಳ್ ತನಗಾಗಿ ಆತಂಕದಿಂದ ಕಾಯುತ್ತಿರುವ ಮತ್ತು ಇತರ ಗೋಪಿಕೆಯರ ಆಗಮನಕ್ಕಾಗಿ ಕಾಯುತ್ತಿರುವ ಗೋಪಿಕೆಯನ್ನು ಕರೆದೊಯ್ಯಲು ಬರುತ್ತಾಳೆ.


ಎಲ್ಲೇ ಇಳಮ್‌ಕಿಳಿಯೇ ಇನ್ನಮ್ ಉಱಙ್ಗುದಿಯೋ
ಶಿಲ್ಲೆನ್‌ಱು ಅೞೈಯೇನ್ಮಿನ್ ನಙ್ಗೈಮೀರ್ ಪೋದರುಹಿನ್‌ಱೇನ್
ವಲ್ಲೈ ಉನ್ ಕಟ್ಟುರೈಹಳ್ ಪಣ್ಡೇಯುನ್ ವಾಯಱಿದುಮ್
ವಲ್ಲೀರ್ಹಳ್ ನೀಙ್ಗಳೇ ನಾನೇ ತಾನ್ ಆಯಿಡುಹ
ಒಲ್ಲೈ ನೀ ಪೋದಾಯ್ ಉನಕ್ಕೆನ್ನ ವೇಱುಡೈಯೈ
ಎಲ್ಲಾರುಮ್ ಪೋನ್ದಾರೋ ಪೋನ್ದಾರ್ ಪೋನ್ದೆಣ್ಣಿಕ್ಕೊಳ್
ವಲ್ಲಾನೈ ಕೊನ್ರಾನೈ ಮಾಟ್ರಾರೈ ಮಾಟ್ರೞಿಕ್ಕ
ವಲ್ಲಾನೈ, ಮಾಯನೈ ಪ್ಪಾಡೇಲೋರೆಮ್ಬಾವಾಯ್॥


ಈ ಪಾಸುರದ ವಿವರಣೆಯನ್ನು ಒಂದು ಸಂಭಾಷಣೆಯ ಮೂಲಕ ವಿವರಿಸಲಾಗಿದೆ. ( ಹೊರಗಿರುವ ಆಂಡಾಳ್,ಮತ್ತಿತರ ಗೋಪಿಕೆಯರು -ಮತ್ತು- ಒಳಗಿರುವ ಗೋಪಿಕೆ )

ಹೊರಗಿರುವ ಆಂಡಾಳ್ ಮತ್ತಿತರ ಗೋಪಿಕೆಯರು :- ಎಲೆ ! ಎಳೆಯ ಗಿಳಿಮರಿಯಂತೆ ಸಿಹಿಯಾಗಿ ಮಾತನಾಡುವವಳೇ! ನಾವು ಬಂದಮೇಲೂ ಒಳಗೆ ನಿದ್ದೆ ಮಾಡುತ್ತಿರುವೆಯಾ?
ಒಳಗಿರುವ ಗೋಪಿಕೆ:- ಎಲ್ಲಾ ರೀತಿಯಲ್ಲೂ ಪರಿಪೂರ್ಣರಾದ ಗೋಪಿಕೆಯರೇ! ಇಷ್ಟು ಕೋಪದಿಂದ ನನ್ನನ್ನು ಕರೆಯಬೇಡಿ, ಇದೋ , ಈಗಲೇ ಬಂದೆ.
ಹೊ :- ನೀನು ಮಾತನಾಡುವುದರಲ್ಲಿ ತುಂಬಾ ಜಾಣೆ. ನಮಗೆ ನಿನ್ನ ಹರಿತವಾದ ನಾಲಿಗೆಯ ಬಗ್ಗೆ ಮುಂದೇ ತಿಳಿದಿದೆ.
ಒ : – ಆದರೂ ನಿಮ್ಮನ್ನು ಮೀರಿಸಿಲ್ಲ .(ಮಾತನಾಡುವುದರಲ್ಲಿ ), ಆಗಲಿ! ತಪ್ಪು ನನ್ನದೇ ಇರಲಿ ! ನಾನೀಗ ಏನು ಮಾಡಬೇಕು?
ಹೊ:- ಬೇಗ ಎದ್ದು ಬಾ! ಏನಾದರೂ ವಿಶೇಷ ಪ್ರಯೋಜನಕ್ಕಾಗಿ ಒಳಗೆ ಮಲಗಿಕೊಂಡಿರುವೆಯಾ?
ಒ:- ಅದೆಲ್ಲಾ ಇರಲಿ, ಯಾರು ಬರಬೇಕೋ ಅವರು ಬಂದಾಯಿತಾ? (ಆಂಡಾಳ್‌ನನ್ನು ಕುರಿತು )
ಹೊ: – ಓ! ಎಲ್ಲರೂ ಬಂದಾಯಿತು. ನೀನೇ ಬಂದು ಎಣಿಸಿಕೋ.
ಒ:- ನಾನು ಹೊರಗೆ ಬಂದು ಏನು ಮಾಡಬೇಕು?
ಹೊ:- ಹೊರಗೆ ಬಂದು, ಬಲಶಾಲಿಯಾದ ಆನೆಯನ್ನು ಸಂಹರಿಸಿದ, ಶತ್ರುಗಳ ಬಲವನ್ನು ನಿತ್ರಾಣಗೊಳಿಸಲು ಶಕ್ತನಾಗಿರುವ, ಮಹಾ ವಿಚಿತ್ರ ಮಾಯೆಗಳನ್ನು ಹೊಂದಿರುವವನ ಬಗ್ಗೆ ಹಾಡುಗಳನ್ನು ಹಾಡೋಣ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/05/thiruppavai-pasurams-6-15-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment