ತಿರುಪ್ಪಾವೈ – ಸರಳ ವಿವರಣೆ – ಒಂದರಿಂದ ಐದು ಪಾಸುರಗಳು

ಶ್ರೀ:  ಶ್ರೀಮತೇ ಶಠಗೋಪಾಯ ನಮಃ  ಶ್ರೀಮತೇ ರಾಮಾನುಜಾಯ ನಮಃ  ಶ್ರೀಮತ್ ವರವರಮುನಯೇ ನಮಃ

ತಿರುಪ್ಪಾವೈ

<<ತನಿಯನ್‍ಗಳು



ಮೊದಲನೆಯ ಪಾಸುರಮ್:-

ಈ ಮೊದಲ ಪಾಸುರದಲ್ಲಿ ಆಂಡಾಳ್ ಹಸು ಮೇಯಿಸುವ ಗೋಪಿಕೆಯರಾದ ತನ್ನ ಗೆಳತಿಯರನ್ನು ವರ್ಣಿಸಿದ್ದಾರೆ. ಮಾರ್ಗೞಿಯಲ್ಲಿ ವ್ರತವಿದ್ದರೆ ( ಉಪವಾಸ ವ್ರತ ಎಂಬೆರುಮಾನರಿಗಾಗಿ ) ಕೃಷ್ಣಾನುಭವವನ್ನು ಆನಂದಿಸಬಹುದು ಎಂದು ಆಂಡಾಳ್ ತಿಳಿದಿದ್ದಾಳೆ .


ಮಾರ್ಗೞಿ ತ್ತಿಙ್ಗಳ್ ಮದಿನಿಱೈನ್ದ ನನ್ನಾಳಾಲ್,
ನೀರಾಡ ಪ್ಪೋದುವೀರ್ ಪೋದುಮಿನೋ ನೇರಿೞೈಯೀರ್,
ಶೀರ್ಮಲ್ ಹುಮ್ ಆಯ್ ಪ್ಪಾಡಿ ಚ್ಚೆಲ್ವ ಚ್ಚಿರುಮೀರ್ಹಾಳ್
ಕೂರ್ವೇಲ್ ಕೊಡುನ್ದೊೞಿಲನ್ ನಂದಗೋಪನ್ ಕುಮರನ್,
ಏರಾರ್ನ್ದ ಕಣ್ಣಿ ಯಶೋದೈ ಇಳಮ್ ಶಿಙ್ಗಮ್,
ಕಾರ್ಮೇನಿ ಚ್ಚೆಙ್ಗಣ್ ಕದಿರ್ ಮದಿಯಮ್ ಪೋಲ್ ಮುಹತ್ತಾನ್,
ನಾರಾಯಣನೇ ನಮಕ್ಕೇ ಪಱೈ ತರುವಾನ್ ,
ಪಾರೋರ್ ಪುಹೞ ಪ್ಪಡಿನ್ದು ಏಲೋರ್ ಎಮ್ಬಾವಾಯ್ ॥


ಗೋಕುಲದಲ್ಲಿ ಹಸುಮೇಯಿಸುವ , ಕೃಷ್ಣನಿಗೇ ಕೈಂಕರ್ಯವನ್ನು ಮಾಡುವ ಮಹಾ ಭಾಗ್ಯವಂತರಾದ , ಸಕಲ ಆಭರಣಗಳನ್ನು ತೊಟ್ಟ ತನ್ನ ಗೆಳತಿಯರಿಗೆ ಆಂಡಾಳ್ ಹೇಳುತ್ತಾಳೆ ,
ಈ ದಿನ ಮಾರ್ಗೞಿ ಮಾಸದ ಮೊದಲನೆಯ ದಿನ. ತುಂಬು ಹುಣ್ಣಿಮೆಯಿಂದ ಕೂಡಿದ ಇಂದು ಅತ್ಯಂತ ಶುಭದಿನವಾಗಿದೆ. ನಂದಗೋಪಾಲರು ( ಕೃಷ್ಣನ ತಂದೆ) ತನ್ನ ಚೂಪಾದ ಈಟಿಯಿಂದ ಯಾರಾದರೂ ತನ್ನ ತಿರುಮಗನಾದ ಕೃಷ್ಣನಿಗೆ ತೊಂದರೆಯುಂಟು ಮಾಡಲು ಬಂದರೆ, ಅವರನ್ನು ನಿವಾರಿಸಲು ಸಿಧ್ಧರಾಗಿದ್ದಾರೆ. ಕೃಷ್ಣನು , ಸುಂದರವಾದ ಮತ್ತು ಕರುಣೆಯುಳ್ಳ ಕಣ್ಣುಗಳನ್ನು ಹೊಂದಿರುವ ಯಶೋದೆಗೆ ಒಂದು ಪುಟ್ಟದಾದ ವೀರ ಸಿಂಹದ ಮರಿಯ ಹಾಗೆ. ಅವನು ತನ್ನ ಕಪ್ಪಿನಿಂದ ಕೂಡಿದ ತಿರುಮೇನಿಯಿಂದ ಮತ್ತೂ ಕಪ್ಪಾದ ತನ್ನ ಕಣ್ಣುಗಳಿಂದ ಹಾಗೂ ಸೂರ್ಯನಂತೆ ಜಗಮಗಿಸುತ್ತಿರುವ ಅತ್ಯಂತ ಪ್ರಭೆಯುಳ್ಳ ತನ್ನ ಮುಖದಿಂದ ನಮಗೆಲ್ಲಾ ಕೈಂಕರ್ಯವನ್ನು ಮಾಡುವ ಅವಕಾಶವನ್ನು ಕಲ್ಪಿಸುತ್ತಾನೆ. ಬನ್ನಿ, ಎಲ್ಲರೂ ಸೇರಿ ಅವನಿಗೆ ಸೇವೆಯನ್ನು ಮಾಡೋಣ ಎಂದು ಹೇಳುತ್ತಾಳೆ.

ಎರಡನೆಯ ಪಾಸುರಮ್:-

ಆಂಡಾಳ್ ಕೃಷ್ಣಾನುಭವವನ್ನು ಪಡೆಯಲು ಏನೇನು ಮಾಡಬೇಕು, ಏನೇನು ಮಾಡಬಾರದು ಎಂದು ಪಟ್ಟಿ ನೀಡುತ್ತಾಳೆ. ಕೃಷ್ಣನಿಗೇ ಶರಣು ಹೊಂದಿರುವ ಪೂರ್ವಾಚಾರ್ಯರೇ ನಮಗೆ ಮಾರ್ಗದರ್ಶಿಗಳು ಎಂದು ಹೇಳುತ್ತಾಳೆ.


ವೈಯತ್ತು ವಾೞ್‌ವೀರ್ಹಾಳ್ ನಾಮುಮ್ ನಮ್‌ಪಾವೈಕ್ಕು
ಚ್ಚೆಯ್ಯುಮ್ ಕಿರಿಶೈಹಳ್ ಕೇಳೀರೋ , ಪಾಱ್ಕಡಲುಳ್
ಪೈಯತ್ತುಯಿನ್ಱ ಪರಮನಡಿಪ್ಪಾಡಿ
ನೆಯ್ಯುಣ್ಣೋಮ್ ಪಾಲುಣ್ಣೋಮ್ ನಾಟ್ಕಾಲೇ ನೀರಾಡಿ,
ಮೈಯಿಟ್ಟೆೞುದೋಮ್ ಮಲರಿಟ್ಟು ನಾಮ್ ಮುಡಿಯೋಮ್
ಶೆಯ್ಯಾದನ ಶೆಯ್ಯೋಮ್ ತೀಕ್ಕುಱಳೈ ಚ್ಚೆನ್ರೋದೋಮ್
ಐಯಮುಮ್ ಪಿಚ್ಚೈಯುಮ್ ಆನ್ದನೈಯುಮ್ ಕೈಕಾಟ್ಟಿ
ಉಯ್ಯುಮಾರೆಣ್ಣಿ ಉಹನ್ದೇಲೋರೆಮ್ಬಾವಾಯ್ ॥


ಆಂಡಾಳ್ ಈ ಭೂಮಿಯಲ್ಲಿ ಜನನ ಹೊಂದಿ ಬಾಳಲು ಬಂದಿರುವವರಿಗೆ ತಾವು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಹೇಳಿ , ನಮ್ಮನ್ನು ನಾವು ಸಂಕಷ್ಟಗಳಿಂದ ಮೇಲೆತ್ತಲು ಮತ್ತು ಸಂತೋಷದಿಂದಿರಲು ಹೇಳುತ್ತಾಳೆ.
ತಿರುಪ್ಪಾರ್ಕಡಲಿನಲ್ಲಿ ಮಲಗಿರುವ ಅತ್ಯುನ್ನತನಾದ ಭಗವಂತನ ಪಾದಕಮಲಗಳನ್ನು ನಾವು ಹಾಡಿ ಹೊಗಳಬೇಕು. ಈ ಮಾಸದಲ್ಲಿ ಹಾಲು ಮತ್ತು ತುಪ್ಪವನ್ನು ಸ್ವೀಕರಿಸಬಾರದು. ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ಕಣ್ಣುಗಳಿಗೆ ಕಾಡಿಗೆಯನ್ನು ಹಚ್ಚಿಕೊಳ್ಳಬಾರದು. ತಲೆಗೆ ಹೂವನ್ನು ಮುಡಿದುಕೊಳ್ಳಬಾರದು. ದೊಡ್ಡವರು ಪ್ರತಿರೋಧಿಸಿದ ಕ್ರಿಯೆಗಳನ್ನು ಮಾಡುವುದಿಲ್ಲ. ಕೆಟ್ಟವಾರ್ತೆಗಳನ್ನು ಮಾತನಾಡುವುದಿಲ್ಲ. ನಮ್ಮ ಶಕ್ತ್ಯಾನುಸಾರವಾಗಿ ಭಿಕ್ಷುಕರಿಗೆ , ಬಡವರಿಗೆ ದಾನವನ್ನು ಮಾಡಬೇಕು.


ಮೂರನೆಯ ಪಾಸುರಮ್ :-

ಆಂಡಾಳ್ ಈ ಪಾಸುರದಲ್ಲಿ ಎಲ್ಲರಿಗೂ ಕೃಷ್ಣಾನುಭವವಾಗುವಂತೆ ಹಾರೈಸುತ್ತಾಳೆ. ಮತ್ತು ಎಲ್ಲರೂ ಸುಖ , ಸಮೃಧ್ಧಿಯಿಂದ ಇರುವಂತೆ ಹರಸುತ್ತಾಳೆ.

ಓಙ್ಗಿ ಉಲಹಳನ್ದ ಉತ್ತಮನ್ ಪೇರ್‌ಪಾಡಿ
ನಾಙ್ಗಳ್ ನಮ್ ಪಾವೈಕ್ಕು ಚಾಟ್ರಿ ನೀರಾಡಿನಾಲ್
ತೀಙ್ಗಿನ್ಱಿ ನಾಡೆಲ್ಲಾಮ್ ತಿಙ್ಗಳ್ ಮುಮ್ಮಾರಿ ಪೆಯ್‌ದು
ಓಙ್ಗು ಪೆರುಮ್ ಶೆನ್ನೆಲೂಡು ಕಯಲುಹಳ
ಪೂಙ್ಗುವಳೈ ಪ್ಪೋದಿಲ್ ಪೊಱಿವಣ್ಡು ಕಣ್‌ಪಡುಪ್ಪ
ತೇಙ್ಗಾದೇ ಪುಕ್ಕಿರುನ್ದು ಶೀರ್ತ ಮುಲೈಪಟ್ರಿ
ವಾಙ್ಗ. ಕ್ಕುಡಮ್ ನಿಱೈಕ್ಕುಮ್ ವಳ್ಳಲ್ ಪೆಱುಮ್ ಪಶುಕ್ಕಳ್
ನೀಙ್ಗಾದ ಶೆಲ್ವಮ್ ನಿಱೈನ್ದೇಲೋರೆಮ್ಬಾವಾಯ್ ॥


ಮೊದಲು ವಾಮನನಾಗಿ , ನಂತರ ಬೃಹದಾಕಾರವಾಗಿ ಬೆಳೆದ ತ್ರಿವಿಕ್ರಮನಾಗಿ, ಮೂರು ಲೋಕಗಳನ್ನು ತನ್ನ ತಿರುವಡಿಗಳಿಂದ ಅಳೆದ ಮಹಾಪುರುಷನ ನಾಮ ಸಂಕೀರ್ತನೆಯನ್ನು ಹಾಡುತ್ತೇವೆ. ನಾವು ನಮ್ಮ ವ್ರತಕ್ಕಾಗಿ ಮೊದಲು ನೀರಾಡಬೇಕು (ಜಳಕವಾಡಬೇಕು ). ಇಡೀ ದೇಶದಲ್ಲಿ ಮಾಸದಲ್ಲಿ ಮೂರು ಸಾರಿ ಮಳೆಯಾಗಬೇಕು. ಇದರಿಂದ ಮೀನುಗಳು ಕೆಂಪಾದ ಬಲಿತಿರುವ ಬತ್ತದ ಹೊಲದಲ್ಲಿ ನುಸುಳುತ್ತಿರುತ್ತದೆ. ನೀಲ ಕಮಲಗಳಲ್ಲಿ ದುಂಬಿಗಳು ಮಲಗುತ್ತವೆ. ಎಲ್ಲರೂ ಚೆನ್ನಾಗಿ ಬೆಳೆದ ಹಸುಗಳ ಹತ್ತಿರ ಹೋಗಲು ಹಿಂಜರಿಯುವುದಿಲ್ಲ. ಹಸುಗಳು ಬಹಳ ಎತ್ತರವಾಗಿಯೂ ಬಲಾಢ್ಯವಾಗಿಯೂ ಇದ್ದು , ಅದು ಕೊಡುವ ಹಾಲು ದೊಡ್ಡ ಬಿಂದಿಗೆಯ ತುಂಬಾ ತುಂಬಿಕೊಂಡು ಸೋರಿ ಹೋಗುತ್ತದೆ. ಅತ್ಯಂತ ಸಮೃಧ್ಧವಾದ , ಸುಭಿಕ್ಷವಾದ , ಕಡಿಮೆಯೇ ಆಗದ ಸಿರಿಯೊಡನೆ ಎಲ್ಲರೂ ಬಾಳುತ್ತಾರೆ ಎಂದು ಆಂಡಾಳ್ ಆಶೀರ್ವದಿಸುತ್ತಾಳೆ.

ನಾಲ್ಕನೆಯ ಪಾಸುರಮ್:-

ಆಂಡಾಳ್ ವರುಣದೇವತೆಯಾದ ಪರ್ಜನ್ಯ ದೇವನಿಗೆ ತಿಂಗಳಿನಲ್ಲಿ ಮೂರು ಬಾರಿ ಮಳೆಯಾಗುವಂತೆ ಆಜ್ಞಾಪಿಸುತ್ತಾಳೆ. ಒಂದು ಸಾರಿ ಬ್ರಾಹ್ಮಣರಿಗಾಗಿ, ಒಂದು ಸಾರಿ ರಾಜನಿಗಾಗಿ, ಮತ್ತೊಂದು ಸಾರಿ ಪತಿವ್ರತೆ ಮಹಿಳೆಯರಿಗಾಗಿ. ಇದರಿಂದ ಬೃಂದಾವನದ ಜನರು ಸಮೃದ್ಧಿಯಿಂದ ಬಾಳಲಿ ಮತ್ತು ಕೃಷ್ಣಾನುಭವದಲ್ಲಿ ಮುಳುಗಲಿ ಎಂದು.


ಆೞಿ ಮೞೈ ಕ್ಕಣ್ಣಾ ಒನ್ರು ನೀ ಕೈ ಕರವೇಲ್
ಆೞಿಯುಳ್ ಪುಕ್ಕು ಮುಹನ್ದು ಕೊಡಾರ್‌ತೇಱಿ
ಊೞಿ ಮುದಲ್ವನ್ ಉರುವಮ್ ಪೋಲ್ ಮೆಯ್‌ಕರುತ್ತು
ಪಾೞಿಯನ್ದೋಳುಡೈ ಪ್ಪಱ್ಪನಾಬನ್ ಕೈಯಿಲ್
ಆೞಿ ಪೋಲ್ ಮಿನ್ನಿ ವಲಮ್ಬುರಿ ಪೋಲ್ ನಿನ್ಱದಿರ್ನ್ದು
ತೞಾದೇ ಶಾರ್‌ಙ್ಗಮುದೈತ್ತ ಶರಮೞೈ ಪೋಲ್
ವಾೞ ವುಲಹಿನಿಲ್ ಪೆಯ್ದಿಡಾಯ್ , ನಾಂಗಳುಮ್
ಮಾರ್ಹೞಿ ನೀರಾಡ ಮಹಿೞ್ನ್ದೇಲೋರೆಮ್ಬಾವಾಯ್ ||


ಮಳೆಯ ದೇವತೆಯಾದ ವರುಣನೇ, ನಿನ್ನ ಆಳವು ಕಡಲಿನಂತೆ ಇದೆ. ನೀನು ಯಾವುದನ್ನೂ ಬಚ್ಚಿಡದೇ ಯಾವುದನ್ನೂ ಮುಚ್ಚಿಡದೇ ಧಾರಾಳವಾಗಿ ಸುರಿಸು. ಸಮುದ್ರವನ್ನು ನೀನು ಪ್ರವೇಶಿಸುತ್ತಿದ್ದಂತೆ , ನೀನು ನೀರನ್ನು ಸೆಳೆದುಕೊಂಡು ಗುಡುಗನ್ನು ಸಿಡಿಸುತ್ತಾ ಅಬ್ಬರಿಸುತ್ತಾ ಮುಗಿಲೆತ್ತರಕ್ಕೆ ಏರುತ್ತೀಯ. ಎಂಬೆರುಮಾನರಂತೆ ನೀನೂ ಕಪ್ಪಾದ ಬಣ್ಣದಿಂದ ಕೂಡಿದ್ದೀಯ. ಎಂಬೆರುಮಾನರು ಸಮಯ (ವೇಳೆ) ಮತ್ತಿತರ ಎಲ್ಲಾ ಸೌಲಭ್ಯಗಳಿಗೂ ರಾಜನಾಗಿರುತ್ತಾನೆ. ವರುಣನೇ ನೀನು , ಸುಂದರವಾದ ತೋಳುಗಳನ್ನು ಹೊಂದಿರುವ ಎಂಬೆರುಮಾನರ ಕೈಯಲ್ಲಿರುವ ಚಕ್ರದಂತೆ ಮಿಂಚನ್ನು ಮಿನುಗಿಸಬೇಕು.(ಮಳೆ ಬರುವ ವೇಳೆಯಲ್ಲಿ ಮಿಂಚು ಬರುವ ಹಾಗೆ). ದೈವ ಕಮಲದ ರೀತಿ ಹೊಕ್ಕುಳನ್ನು ಹೊಂದಿರುವ ಎಂಬೆರುಮಾನರ ಇನ್ನೊಂದು ಕೈಯಲ್ಲಿರುವ ಶಂಕಿನಂತೆ ಪ್ರಬಲವಾದ ಶಬ್ದವನ್ನು ಹೊರಡಿಸಬೇಕು. ಮತ್ತೂ ಅನ್ಯಥಾ ವೇಳೆಯನ್ನು ವ್ಯರ್ಥಗೊಳಿಸದೇ ,ವಿಳಂಬಗೊಳಿಸದೇ ನೀನು , ಪೆರುಮಾಳಿನ ಶಾರ್‌ಙ್ಗ ಎಂಬ ಬಿಲ್ಲಿನಿಂದ ಹೊರಟ ಬಾಣಗಳ ವರ್ಷದಂತೆ ಮಳೆಯನ್ನು ಸುರಿಸಬೇಕು. ಆದ್ದರಿಂದ ಈ ಲೋಕದ ಜನರು ಸಂತೋಷದಿಂದ ಈ ವ್ರತಕ್ಕಾಗಿ ಸ್ನಾನ ಮಾಡಬಹುದು ಎಂದು ಆಂಡಾಳ್ ವರುಣನಿಗೆ ಆಜ್ಞಾಪಿಸುತ್ತಾಳೆ.


ಐದನೆಯ ಪಾಸುರಮ್:-

ಮನುಷ್ಯನು ಮಾಡುವ ಕರ್ಮದ ಫಲವು (ಪಾಪ ಮತ್ತು ಪುಣ್ಯ ಈ ಎರಡರ ಫಲವು) ಪೆರುಮಾಳಿನ ನಾಮ ಸಂಕೀರ್ತನ ಮಾಡುವುದರಿಂದ ಹೋಗಿ ಬಿಡುತ್ತದೆ. ಭೂತಕಾಲದ ಕರ್ಮಗಳು ಹತ್ತಿಯು ಬೆಂಕಿಗೆ ಬಿದ್ದ ಹಾಗೆ ಮತ್ತು ಭವಿಷ್ಯಕಾಲದ ಕರ್ಮಗಳು ತಾವರೆಯ ದಳದ ಮೇಲಿರುವ ಹನಿಬಿಂದುವಿನಂತೆ ಅಂಟಿಕೊಳ್ಳದೇ ಇರುತ್ತದೆ. ಎಂಬೆರುಮಾನರು ಹಳೆಯ ಕರ್ಮಗಳನ್ನು ಅಳಿಸಿಬಿಡುತ್ತಾರೆ ಮತ್ತು ಭವಿಷ್ಯದಲ್ಲಿ ತಿಳಿಯದೇ ಮಾಡುವ ಕರ್ಮಗಳನ್ನು ತೊಳೆದುಬಿಡುತ್ತಾರೆ. ಆದರೆ ನಾವು ತಿಳಿದೇ ಮಾಡುವ ಕರ್ಮಗಳಿಗೆ ಅವಶ್ಯ ಫಲಿತಾಂಶ (result) ಕೊಡುತ್ತಾರೆ.


ಮಾಯನೈ ಮನ್ನು ವಡಮದುರೈ ಮೈನ್ದನೈ
ತೂಯ ಪೆರುನೀರ್ ಯಮುನೈ ತ್ತುಱೈವನೈ
ಆಯರ್ ಕುಲತ್ತಿನಿಲ್ ತೋನ್ಱುಮ್ ಅಣಿವಿಳಕ್ಕೈ
ತಾಯೈ ಕ್ಕುಡಲ್ ವಿಳಕ್ಕಮ್ ಶೆಯ್ದ ದಾಮೋದರನೈ
ತೂಯೋಮಾಯ್ ವನ್ದು ನಾಮ್ ತೂಮಲರ್ ತೂವಿತ್ತೊೞುದು
ವಾಯಿನಾಲ್ ಪಾಡಿ ಮನತ್ತಿನಾಲ್ ಶಿನ್ದಿಕ್ಕ
ಪ್ಪೋಯ ಪಿೞೈಯುಮ್ ಪುಹುದರುವಾನಿನ್ಱನವುಮ್
ತೀಯಿನಿಲ್ ತೂಶಾಹುಮ್ ಶೆಪ್ಪೇಲೋರೆಮ್ಬಾವಾಯ್ ॥


ದಾಮೋದರನು ವೈಭವಯುತವಾದ ಮಥುರೆಯ ರಾಜನಾಗಿರುತ್ತಾನೆ . ಅವನು ಪವಿತ್ರವಾದ , ನಿರ್ಮಲವಾದ ಯಮುನೆಯ ನದಿ ತಟದಲ್ಲಿ ಆಟವಾಡುತ್ತಾನೆ. ಅವನು ಒಂದು ದೈವೀಯುತ ದೀಪವಿದ್ದಂತೆ , ಹಸುಮೇಯಿಸುವ ಹುಡುಗರ ಮಧ್ಯೆ ಅವತಾರವೆತ್ತಿದ್ದಾನೆ. ಮತ್ತು ಶ್ರೀ ಯಶೊದೆಯ ಗರ್ಭಕ್ಕೆ ಪುಣ್ಯವನ್ನೂ ಕೀರ್ತಿಯನ್ನೂ ತಂದಿದ್ದಾನೆ. ನಾವು ಅವನಿಗೆ ನಿರ್ಮಲವಾದ ಹೃದಯದಿಂದ ಆರಾಧಿಸಿದರೆ , ಹೂಗಳಿಂದ ಪೂಜಿಸಿದರೆ, ಮನಸ್ಸಿನಿಂದ ಪ್ರಾರ್ಥಿಸಿದರೆ, ಮತ್ತು ಅವನ ತಿರುನಾಮಗಳನ್ನು ಬಾಯಿನಿಂದ ಹಾಡಿದರೆ [ಮನಸ್ಸು, ಶಬ್ದ ಮತ್ತು ದೇಹ – ಈ ಮೂರರಿಂದ ಅರ್ಚಿಸಿದರೆ ] , ನಾವು ಇದುವರೆಗೆ ಮಾಡಿದ ಪಾಪಗಳು , ಮುಂದೆ ತಿಳಿಯದೇ ಮಾಡಬಹುದಾದ ದೋಷಗಳನ್ನು ಅವನು ಹೇಗೆ ಹತ್ತಿಯು ಬೆಂಕಿಗೆ ಬಿದ್ದು ಅಳಿದು ಹೋಗುತ್ತದೆಯೋ ಹಾಗೆ ನಿರ್ಮೂಲನೆ ಮಾಡುತ್ತಾನೆ. ಆದ್ದರಿಂದ ಅವನ ನಾಮಗಳನ್ನು ಹಾಡೋಣ.

ಆಂಡಾಳ್‌ನ ಮೊದಲ ಈ ಐದು ಪಾಸುರಗಳಲ್ಲಿ , ಎಂಬೆರುಮಾನರನ್ನು ಪರ (ಶ್ರೀ ವೈಕುಂಠದಲ್ಲಿರುವ ಶ್ರೀಮನ್ನಾರಾಯಣರು) , ವ್ಯೂಹ ( ತಿರುಪ್ಪಾರ್ಕಡಲಿನ ನಾಯಕ) , ವಿಭವ (ತ್ರಿವಿಕ್ರಮ ಪೆರುಮಾಳ್) , ಅಂತರ್ಯಾಮಿ (ವರುಣನೊಳಗೆ ಹೊಕ್ಕಿರುವ ಪೆರುಮಾಳ್) , ಅರ್‌ಚ್ಚೈ (ವಡ ಮಥುರೆಯಲ್ಲಿರುವ ಕೃಷ್ಣ) – ಈ ಐದು ರೀತಿಯಲ್ಲಿ ಭಗವಂತನನ್ನು ಕಾಣಬಹುದು.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಮೂಲ : http://divyaprabandham.koyil.org/index.php/2020/05/thiruppavai-pasurams-1-5-simple/

ಆರ್ಕೈವ್ ಮಾಡಲಾಗಿದೆ : http://divyaprabandham.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org


Leave a Comment